'ವಿಕಲಚೇತನರ ಕಡೆಗಣನೆ ಸಲ್ಲ'
ತಿಪಟೂರು: ವಿಕಲಚೇತನರೆಂಬ ಅನುಕಂಪ ತೋರಿಸುವುದು ಬೇಡ. ವಿಕಲಚೇತನರಿಗೆ ಅರ್ಹ ಅವಕಾಶಗಳನ್ನು ಕಲ್ಪಿಸಿಕೊಟ್ಟು, ಸ್ವಾವಲಂಬಿ ಬದುಕಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕೆಂದು ತಾಲೂಕು ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮಾಪತಿ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಕಲ್ಪತರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿಕಲಚೇತನರಲ್ಲಿ ದೈವದತ್ತ ಶಕ್ತಿಯಿದ್ದು, ಸಮಾಜ ಅವರನ್ನು ಕೀಳಾಗಿ ಕಾಣದೆ ಉತ್ತಮ ಬದುಕು ಬದುಕುವ ಅವಕಾಶ ಕಲ್ಪಿಸಿಕೊಡಬೇಕು.
ವಿಕಲಚೇತನರು ಇಂದಿನ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಆದ್ದರಿಂದ ವಿಕಲಚೇತನರು ಸಹ ತಮ್ಮಲ್ಲಿರುವ ಕೀಳರಿಮೆ ಬಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಇದೇ ವೇಳೆ ಕಿವಿಮಾತು ಹೇಳಿದರು.
ಉಪ ವಿಭಾಗಾಧಿಕಾರಿ ಬಿ.ಸಿಂಧು ಮಾತನಾಡಿ ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿರುವುದು ಸಮುದಾಯದ ಕರ್ತವ್ಯವಾಗಿದ್ದು, ಸರ್ಕಾರದಿಂದ ಸಿಗುವ ಮಾನವೀಯ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದರು.
ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನರಲ್ಲಿ ಅಗಾಧ ಪ್ರತಿಭೆ ಇದ್ದು, ಈ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂದರು.
ಸಿಡಿಪಿಒ ಓಂಕಾರಪ್ಪ ಮಾತನಾಡಿ, ತಾಲೂಕಿನಲ್ಲಿ ಒಟ್ಟು 4 ಸಾವಿರಕ್ಕೂ ಹೆಚ್ಚು ವಿಕಲಚೇತನರಿದ್ದಾರೆ.
ಎಲ್ಲರಿಗೂ ಸರ್ಕಾರ ಹಂತ ಹಂತವಾಗಿ ಸೌಲಭ್ಯ ಕಲ್ಪಿಸುವಲ್ಲಿ ಮುಂದಿದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿ ಹೇಳಿದರು.