ಗೌರಿಶಂಕರ್ ಅಭಿಮಾನಿ ಬಳಗದ ಪ್ರತಿಭಟನೆ
ತುಮಕೂರು: ಮಾಜಿ ಸಚಿವ ಸಿ. ಚನ್ನಿಗಪ್ಪ ಅವರ ಪ್ರತಿಕೃತಿ ದಹಿಸಿ ಮಾಜಿ ಶಾಸಕ ಗೌರಿಶಂಕರ್ ವಿರುದ್ಧ ಅವಹೇಳನಕಾರಿ ನುಡಿಗಳನ್ನಾಡಿದ್ದ ಕೆ.ಎನ್.ಆರ್. ಅಭಿಮಾನಿ ಬಳಗದ ಕ್ರಮ ಖಂಡಿಸಿ ಗೌರಿಶಂಕರ್ ಅಭಿಮಾನಿ ಬಳಗವು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಟೌನ್ಹಾಲ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಘಟಿತರಾದ ಗೌರಿಶಂಕರ್ ಅಭಿಮಾನಿಗಳು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಿ.ಚನ್ನಿಗಪ್ಪ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿರುವ ಕೆ.ಎನ್.ಆರ್.ಅಭಿಮಾನಿ ಬಳಗದ ಕ್ರಮ ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು ಕೆ.ಎನ್.ಆರ್. ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಸರ್ಕಾರಿ ಒಡೆತನದಲ್ಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ಸೌಲಭ್ಯ ಮತ್ತು ಬ್ಯಾಂಕ್ ಸೌಲಭ್ಯಗಳನ್ನು ನೀಡಿ ಕಾಂಗ್ರೆಸ್ಸೇತರ ಕಾರ್ಯಕರ್ತರಿಗೆ ಅಸಹಕಾರ ತೋರುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಧೋರಣೆ ತೀವ್ರವಾಗಿ ಖಂಡಿಸಿದರಲ್ಲದೆ ತಕ್ಷಣವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿದರು.
ಟೌನ್ಹಾಲ್ ವೃತ್ತದಿಂದ ಅಶೋಕ ರಸ್ತೆ ಮಾರ್ಗವಾಗಿ ತೆರಳಿದ ಪ್ರತಿಭಟನಾಕಾರರು ಡಿಸಿಸಿ ಬ್ಯಾಂಕ್ ಎದುರು ಧರಣಿ ಕುಳಿತು ಧಿಕ್ಕಾರ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಅಪರ ಜಿಲ್ಲಾಧಿಕರಿಗಳ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗೌರೀಶಂಕರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ರಾಜು, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಬೆಳ್ಳಿಲೋಕೇಶ್, ಜೆಡಿಎಸ್ ಮುಖಂಡರಾದ ಟಿ.ಆರ್. ನಾಗರಾಜು, ಪ್ರೆಸ್ ರಾಜಣ್ಣ, ಮಧುಗಿರಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಿಡಿದರಗಲ್ಲು ಶ್ರೀನಿವಾಸ್, ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಇಕ್ಬಾಲ್ ಸೇರಿದಂತೆ ತಾಲೂಕು ಮಟ್ಟದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.