ಸೊಗಡು ಆರೋಪ ಶುದ್ಧ ಸುಳ್ಳು: ಶಫಿ
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.7
ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಸ್. ಶಿವಣ್ಣ ತಮ್ಮ ಶಿಕ್ಷಣ ಸಂಸ್ಥೆ ಮೇಲೆ ಮಾಡಿರುವ ಸರ್ಕಾರಿ ಜಾಗ ಒತ್ತುವರಿ ಆರೋಪ ಶುದ್ಧ ಸುಳ್ಳು, ನಿರಾಧಾರ ಎಂದು ಹೇಳುವ ಮೂಲಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಶಫಿ ಅಹಮದ್ ತಿರುಗೇಟು ನೀಡಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಡಿ.4 ರಂದು ಸೊಗಡು ಶಿವಣ್ಣ ಸುದ್ದಿಗೋಷ್ಠಿಯಲ್ಲಿ ತಮ್ಮ ಶಿಕ್ಷಣ ಸಂಸ್ಥೆಹಾಗೂ ಶಿವಕುಮಾರಸ್ವಾಮಿಗಳ ವೃತ್ತದಲ್ಲಿನ ದರ್ಗಾ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಎಚ್ಎಂಎಸ್ ಪಾಲಿಟೆಕ್ನಿಕ್ ಮುಂಭಾಗ ಗಾರ್ಡ್ ರೂಂ ನಿರ್ಮಿಸಲಾಗಿದೆ ಎಂಬ ಆರೋಪ ಅಪ್ಪಟ ಸುಳ್ಳು. ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುತ್ತಿದ್ದಾರೆ. ಈ ಹಿಂದೆ ಸೊಗಡು ಶಿವಣ್ಣನವರೇ ಶಾಸಕರಾಗಿದ್ದ ಅವಧಿಯಲ್ಲಿ ಶೆಟ್ಟಿಹಳ್ಳಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ, ತಮ್ಮ ಎಚ್ಎಂಎಸ್ ಪಾಲಿಟೆಕ್ನಿಕ್ ಹತ್ತಿರ ಸ್ವತಃ ನಿಂತು ಕಾಲೇಜಿನ ಕಾಂಪೌಂಡ್ ಒಡೆಸಿ ಹಾಕಿದ್ದರು. ಆದರೂ ಅದೇ ಶಿವಣ್ಣನವರು ಜನತೆಯನ್ನು ದಿಕ್ಕು ತಪ್ಪಿಸುವ ಹೇಳಿಕೆಯನ್ನು ನೀಡುತ್ತಿರುವುದು ಅವರ ಘನತೆಗೆ ತಕ್ಕುದಲ್ಲ. ಯಾವುದೇ ಕಾರಣಕ್ಕೂ ಒತ್ತುವರಿ ಆಗಿಲ್ಲ. ಇದು ಸಾಮಾನ್ಯ ನಾಗರಿಕನಿಗೂ ತಿಳಿದಿದೆ ಎಂದು ಶಫಿ ಅಹಮದ್ ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನು ಶಿವಕುಮಾರಸ್ವಾಮಿಗಳ ಸರ್ಕಲ್ನಲ್ಲಿರುವ ದರ್ಗಾದ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಹಾಕಲಾಗುತ್ತಿದೆ ಎಂಬ ಸೊಗಡು ಹೇಳಿಕೆ ಜನತೆಯನ್ನು ತಪ್ಪು ದಾರಿಗೆ ಎಳೆಯುವಂತದ್ದಾಗಿದೆ. ಇದು ಸರ್ಕಾರದ ಹೆದ್ದಾರಿ ಆಗಿದ್ದು, ನಿಯಮಾವಳಿ ಪ್ರಕಾರ ರಸ್ತೆ ಅಗಲೀಕರಣಗೊಂಡಿದೆ. ಕಾನೂನನ್ನು ಪರಿಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮಾಜಿ ಶಾಸಕ, ಮಾಜಿ ಮಂತ್ರಿಗಳಿಗೆ ಈ ಕುರಿತು ಅರಿವಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ದರ್ಗಾದ ಕಾಂಪೌಂಡ್ ನಿಯಮಾವಳಿ ಮೀರಿಲ್ಲ. ಒಂದು ವೇಳೆ ಲೋಪ-ದೋಷ ಕಂಡು ಬಂದಲ್ಲಿ ನಿಯಮಾವಳಿ ಪ್ರಕಾರ ಸರಿಪಡಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದ್ದಾರೆ.
ಪ್ರಗತಿಯಲ್ಲಿವೆ: ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕೋಟಿ ಗಟ್ಟಲೆ ಹಣ ನಗರಸಭೆಯಲ್ಲಿ ಇದ್ದಾಗ್ಯೂ ವ್ಯವಸ್ಥಿತವಾಗಿ ಅಭಿವೃದ್ಧಿ ಕಾಮಗಾರಿ ಮಾಡದೆ ಹೋದ ಪರಿಣಾಮ ಬಹುತೇಕ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಕುಂಠಿತಗೊಂಡಿದ್ದವು. ಸಾಮಾನ್ಯವಾಗಿ ಹಿಂದಿನ ಯಾವುದೇ ಸರ್ಕಾರದ ಕಾಮಗಾರಿಗಳು ಅಪೂರ್ಣಗೊಂಡಿದ್ದರೆ, ನೆನೆಗುದಿಗೆ ಬಿದ್ದಿದ್ದರೆ ಅಥವಾ ಟೆಂಡರ್ ಆಗಿದ್ದರೆ ಅಂತಹ ಕಾಮಗಾರಿಗಳನ್ನು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೈಗೆತ್ತಿಕೊಂಡು ಮುಂದುವರೆಸುವುದು, ಚಾಲನೆ ನೀಡುವುದು ನಿಯಮ. ಇದು ಜನಸಾಮಾನ್ಯರಿಗಾಗಿ ಮಾಡುವ ಕೆಲಸವಾಗಿರುತ್ತದೆ. ಈ ಬಗ್ಗೆ ಮಾಜಿ ಶಾಸಕ ಸೊಗಡು ಶಿವಣ್ಣನವರಿಗೂ ತಿಳಿದಿದೆ.
ಈಗಾಗಲೇ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು, ಅನೇಕ ಪ್ರಗತಿಪರ ಕೆಲಸಗಳು, ಹಿಂದಿನ ಸರ್ಕಾರದಲ್ಲಿ ಬಾಕಿ ಉಳಿದ ಕೆಲಸಗಳನ್ನು ಆರಂಭಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕುಣಿಗಲ್ ರಸ್ತೆ ಅಂಡರ್ ಪಾಸ್, ಶೆಟ್ಟಿಹಳ್ಳಿ ರಸ್ತೆಯ ಡಾಂಬರೀಕರಣ, ಹೇಮಾವತಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ, ಜಿಲ್ಲಾಸ್ಪತ್ರೆ ದುರಸ್ಥಿ ಸೇರಿದಂತೆ ತುಮಕೂರಿನ 35 ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ ಎಂದು ಮಾಜಿ ಶಾಸಕರೂ ಆಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಶಫಿ ಅಹಮದ್ ತಿಳಿಸಿದ್ದಾರೆ.
ಸೊಗಡು ಶಿವಣ್ಣನವರಿಗೆ ಗೊತ್ತಿದೆ
ಸೊಗಡು ಶಿವಣ್ಣ ಸತತ 4 ಬಾರಿ ಶಾಸಕರಾಗಿದ್ದು, 20 ವರ್ಷಗಳ ಕಾಲ ಸತತವಾಗಿ ಶಾಸಕರಾಗಿದ್ದರು. ಹೀಗಾಗಿ ಸೊಗಡು ಶಿವಣ್ಣನವರಿಗೆ ಅನುಭವ ಹಾಗೂ ಕಾನೂನಿನ ಅರಿವು ಇದ್ದೇ ಇರುತ್ತದೆ. ಅನವಶ್ಯಕವಾಗಿ ಸುಳ್ಳು ಆರೋಪಗಳನ್ನು ಮಾಡುವ ನಿಟ್ಟಿನಲ್ಲಿ ಜನತೆಯನ್ನು ದಾರಿ ತಪ್ಪಿಸುವುದು ಸೊಗಡು ಶಿವಣ್ಣನವರ ಘನತೆಗೆ ತಕ್ಕುದಲ್ಲ. ತುಮಕೂರು ನಗರದ ಸರ್ವಾಂಗೀಣ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಾಳಜಿ ವಹಿಸಲಿ. ಈ ನಿಟ್ಟಿನಲ್ಲಿ ಹಾಲಿ ಶಾಸಕ ಡಾ. ರಫೀಕ್ ಅಹಮದ್ ಅವರ ಜತೆಯಲ್ಲಿ ಆರೋಗ್ಯಕರ ಚರ್ಚೆ ನಡೆಸಿ, ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಲಿ. ವಿನಾ ಕಾರಣ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳಲು ಕಾರಣವಾಗುವ, ಇಂತಹ ಅನಗತ್ಯ ರಾಜಕೀಯ ಮಾಡಿ, ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ಸರ್ಕಾರದೊಂದಿಗೆ ಸಹಕರಿಸಲಿ ಎಂದು ಷಫಿ ಅಹಮದ್ ಸಲಹೆ ನೀಡಿದ್ದಾರೆ.