ಅಂಬೇಡ್ಕರ್ ಮೌಲ್ಯ, ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಿ
ತುಮಕೂರು: ಅಂಬೇಡ್ಕರ್ ಮೌಲ್ಯ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಟಿ. ಗಂಗಾಧರಯ್ಯ ಕರೆ ನೀಡಿದರು.
ಅವರು ಭಾವೈಕ್ಯ ಫೌಂಡೇಷನ್ ಫಾರ್ ರೂರಲ್ ಆರ್ಗನೈಜೇಷನ್, ಗೌತಮ ಬುದ್ಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಭಸ್ತಿ ಪೌಂಡೇಷನ್ ಆಶ್ರಯದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದರು.
ಇಂದಿನ ಯುವ ಸಮುದಾಯ ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಗಳು, ತತ್ವ, ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದಿನ ತಲೆಮಾರನ್ನು ಪ್ರಭಾವಿಸುವಂತಾಗಬೇಕು ಎಂದರು.
ಪ್ರಾಚೀನ ಹಿಂದೂ ಸಮಾಜದಲ್ಲಿ ಅಸ್ಥಿತ್ವದಲ್ಲಿದ್ದ ಕಂದಾಚಾರ, ಮೂಡನಂಬಿಕೆಗಳು ಕೆಳಸಮಾಜಗಳನ್ನು ನಿರಂತರವಾಗಿ ಶೋಷಿಸಿದ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ದಿಟ್ಟ ನಿಲುವು ಹಾಗೂ ಸಾಮಾಜಿಕ ಪರಿವರ್ತನಾ ಹೋರಾಟಗಳು ಅನೇಕ ವರ್ಗಗಳಿಗೆ ಮೀಸಲಾತಿ, ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.
ಮಧುಗಿರಿ ತಾಲೂಕು ವೈದ್ಯಾಧಿಕಾರಿ ಡಾ. ಪ್ರಸನ್ನಕುಮಾರ್ ಮಾತನಾಡಿ ಅಂಬೇಡ್ಕರ್ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಿತರಾಗಬೇಕೆಂದು ಕರೆ ನೀಡಿದರು.
ನಿವೃತ್ತ ವಿಶೇಷ ಅಧಿಕಾರಿ ಎ.ಎನ್. ಗೋವಿಂದರಾಜು ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಸ್ತಿ ಫೌಂಡೇಷನ್ ಕಾರ್ಯದರ್ಶಿ ಭೀಮ ಸುಂದರಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆಪಿನಕಟ್ಟೆ ಬಸವರಾಜಪ್ಪ, ಎಲ್.ಡಿ. ನಾರಾಯಣಮೂರ್ತಿ, ರಾಜು, ಶಿವಣ್ಣ, ಮಹದೇವ್ ಭಾಗವಹಿಸಿದ್ದರು. ಶಶಿಕಾಂತರಾವ್ ನಿರೂಪಿಸಿದರು. ಲಕ್ಷ್ಮೀರಂಗಯ್ಯ ವಂದಿಸಿದರು.