ಕುಟುಂಬ ಪದ್ಧತಿ ಆಧಾರದ ಮೇಲೆ ಸಂಸ್ಕೃತಿ ಉಳಿವು
ಕುಣಿಗಲ್: ಭಾರತೀಯ ಸಂಸ್ಕೃತಿ ಅವಲಂಬಿತವಾಗಿರುವುದು ಪ್ರಾಚೀನ ಕಾಲದಿಂದ ಅನುಸರಿಸಿಕೊಂಡು ಬಂದಿರುವ ಕುಟುಂಬ ಪದ್ಧತಿ ಆಧಾರದ ಮೇಲೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪಿ.ಶಶಿರೇಖಾ ತಿಳಿಸಿದರು.
ಅಮೃತೂರು ಎ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಮೃತೂರು ಗ್ರಾಮ ಪಂಚಾಯ್ತಿ, ಸಂಯುಕ್ತ ಆಶ್ರಯದಲ್ಲಿ ನಡೆದ
ಕುಟುಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಕುಟುಂಬೋತ್ಸವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಗರ ಪ್ರದೇಶದಲ್ಲಿ ನಡೆಯುವ ಮೂಲಕ ಒಟ್ಟು ಕುಟುಂಬಗಳಿಂದಾಗುವ ಪ್ರಯೋಜನೆ ಮತ್ತು ಅದರ ಪ್ರಾಮುಖ್ಯತೆ ಜನತೆ ಮನವರಿಕೆಯಾಗಿ, ಕುಟುಂಬಗಳಲ್ಲಿ ಸಾಮರಸ್ಯ ಹೆಚ್ಚಾಗಿ ನೆಮ್ಮದಿಯ ಜೀವನ ಸಾಗಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ವಾತಾವರಣ ಸೃಷ್ಟಿ: ರಂಗನಿರ್ದೇಶಕಿ ಸುಷ್ಮಾ ಸುರೇಶ್ ಮಾತನಾಡಿ ಕುಟುಂಬಗಳಲ್ಲಿ ಹಿರಿಯರು ತಮ್ಮ ಸ್ಥಾನಗಳನ್ನು ತ್ಯಾಗ ಮಾಡಿ ಪ್ರೀತಿಯಿಂದ ಕಿರಿಯರನ್ನು ನಡೆಸಿಕೊಂಡಾಗ ಮಾತ್ರ ಕಿರಿಯರು ಹಿರಿಯರನ್ನು ಪ್ರೀತಿಯಿಂದ ಗೌರವಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಎಲ್ಲರೂ ಕಿರಿಯರನ್ನೇ ಹಿಯಾಳಿಸುತ್ತಿದ್ದರೆ ಕಿರಿಯರಲ್ಲಿ ಕೀಳರಿಮೆ ಉಂಟಾಗಿ ಹಿರಿಯರನ್ನು ಗೌರವಿಸುವ ಸಂದರ್ಭಗಳು ಕ್ಷೀಣಿಸುತ್ತವೆ. ಹಿರಿಯರು, ಕಿರಿಯರಿಗಾಗಿ ಸಹನಶೀಲತೆಯಿಂದ ಒಂದೆಡೆ ತ್ಯಾಗ ಮಾಡಿದರೆ ಮತ್ತೊಂದೆಡೆ ಕಿರಿಯರ ಪ್ರೀತಿ, ವಿಶ್ವಾಸಗಳನನು ಗಳಿಸಿ, ಕುಟುಂಬದಲ್ಲಿ ಉತ್ತಮ ಸಾಮರಸ್ಯ ಕಾಪಾಡಿ ಎಲ್ಲರಲ್ಲೂ ಮಧುರ ಬಾಂಧವ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಕಸಾಪ ಅಧ್ಯಕ್ಷ ದಿನೇಶ್ ಕುಮಾರ್, ಕುಟುಂಬದಲ್ಲಿ ಸಂಬಂಧಗಳು ಕ್ಷೀಣಿಸುತ್ತಿದ್ದು, ಅಮ್ಮ, ಅಪ್ಪ, ಅಣ್ಣ, ತಮ್ಮ ಅಕ್ಕ, ತಂಗಿ, ಸೋದರಮಾವ ಇಂತಹ ಪದಗಳೆ ಮಾಯವಾಗಿ ಅಂಕಲ್ ಮತ್ತು ಆಂಟಿ ಎರಡೇ ಪದಗಳು ರಾರಾಜಿಸುತ್ತಿರುವುದು ಅತಂಕಕಾರಿ ಎಂದರು.
ಪ್ರಾಂಶುಪಾಲರಾದ ಜಯಲಕ್ಷ್ಮಿ ಪ್ರಕಾಶ್, ಹಿರಿಯರು ಮತ್ತು ಕಿರಿಯರಲ್ಲಿ ಪರಸ್ಪರ ಹೊಂದಾಣಿಕೆ, ಪ್ರೀತಿ ವಿಶ್ವಾಸಗಳಿದ್ದು, ಹಿರಿಯರು ಕಿರಿಯರಿಗೆ ಉತ್ತಮಮಾರ್ಗದರ್ಶಕರಾಗಿ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ವೃದ್ಧಾಶ್ರಮವಾಗುವುದನ್ನು ತಪ್ಪಿಸಬಹುದು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದು, ಎಸ್.ಬಿ.ಲೋಕೇಶ್, ಮಂಜುಳ ಬಸವರಾಜ್, ಯೋಗ ಶಿಕ್ಷಕ ಬಿ.ಎಂ.ವೀರಣ್ಣ, ಪಿಎಸೈ ಮಂಜುನಾಥ ಹೂಗಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಚಂದ್ರಶೇಖರ್, ಸುಜಾತ ಉದಯ್, ಜ್ಞಾನ ವಿಕಾಸ ಕೇಂದ್ರದ ಮಹಿಳಾ ಪ್ರತಿನಿಧಿಗಳು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.