ಮಡೆ ಸ್ನಾನ-ಪಂಕ್ತಿ ಭೇದಕ್ಕೆ ಆಕ್ರೋಶ
ತುಮಕೂರು: ಮಡೆ ಸ್ನಾನ-ಪಂಕ್ತಿ ಭೇದ ವಿರೋಧಿಸಿ ಹಾಗೂ ಮೂಢನಂಬಿಕೆಗಳ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹಿಸಿ ಸಿಪಿಐ(ಎಂ) ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿತು.
ಹಳೇ ಮತೀಯ ಕೊಳೆಯಲ್ಲ ಹೊಸ ಮತೀಯ ಹೊಳೆಯಲ್ಲಿ ಕೊಚ್ಚಿ ಹೊಗಲಿ ಬರಲಿ ವಿಜ್ಞಾನ ಬುದ್ಧಿ ಎಂಬ ರಾಷ್ಟ್ರಕವಿ ಕುವೆಂಪು ರವರು ಕವನದ ಸಾಲುಗಳನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಂಡು ಮಡೆಸ್ನಾನ ಪಕ್ತಿಬೇದದಂತಹ ಅನಿಷ್ಟ ಪದ್ಧತಿಗಳನ್ನು ನಿಷೇಧಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಸಿಪಿಐ (ಎಂ) ಹಮ್ಮಿಕೊಂಡಿದ್ದ ಮಡೆಸ್ನಾನ-ಪಂಕ್ತಿಭೇದದಂತಹ ಆಚರಣೆಗಳನ್ನು ನಿಷೇಧಿಸಬೇಕು ಮತ್ತು ಮೂಢನಂಬಿಕೆಗಳ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟದ ಭಾಗವಾಗಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಿಧಿಯ ಆಸೆಗಾಗಿ ಚಿಂತಾಮಣಿಯಲ್ಲಿ 7 ವರ್ಷದ ಮಗುವನ್ನು ಬಲಿಕೊಡುವ ಸಂದರ್ಭದಲ್ಲಿ ಮಗು ತಪ್ಪಿಸಿಕೊಂಡು ಓಡಿ ಹೋಗಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ವಿಜ್ಞಾನ ಬೆಳೆದಿರುವ 21 ನೇ ಶತಮಾನದಲ್ಲೂ ಇಂತಹ ಆಚರಣೆಗಳನ್ನು ನಡೆಸುತ್ತಿರುವುದು ಮುಗ್ಧಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಾಗಿದೆ ಎಂದರು.
ಸರಿಯಲ್ಲ: ದೇಶದ ಸಂವಿಧಾನವನ್ನು ಒಪ್ಪಿ ಅಧಿಕಾರವನ್ನು ನಡೆಸುವ ರಾಜಕೀಯ ಪಕ್ಷಗಳು ಮತ್ತು ಒಂದು ಸಂವಿಧಾನವನ್ನು ಒಪ್ಪಿ ಜೀವಿಸುತ್ತಿರುವ ಜನರನ್ನು ಒಂದೇ ರೀತಿಯಲ್ಲಿ ನೋಡಬೇಕಾದ ಸಮಾಜದಲ್ಲಿ ಇಂತಹ ಅನಿಷ್ಟ ಪದ್ಧತಿಗಳೋ ಆಚರಣೆ ಸರಿಯಾದುದಲ್ಲ, ದೇಶದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುತ್ತಿರುವ ಜನರ ಸಮಸ್ಯೆಗಳ ಪರವಾಗಿ ಹೋರಾಡಬೇಕಾಗಿದೆ ಎಂದ ಅವರು ನಿಡುಮಾಮಿಡಿ ಚನ್ನಮಲ್ಲ ಸ್ವಾಮಿಗಳು ಮಡೆ-ಮಡೆ ಸ್ನಾನ ಮತ್ತು ಪಂಕ್ತಿ ಬೇದದಂತಹ ಆಚರಣೆಗಳನ್ನು ನಿಷೇಧಿಸಬೇಕು ಎಂದು ಹೋರಾಟವನ್ನು ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮೂಢನಂಬಿಕೆಗಳ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸುಪ್ರಿಂಕೋರ್ಟ್ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಹೇಳಿದೆ ಎಂಬುದನ್ನೆ ಬಂಡವಾಳವಾಗಿಸಿಕೊಂಡು ಈ ರೀತಿಯ ಆಚರಣೆಗಳನ್ನು ನಡೆಸುವುದು ಸರಿಯಾದುದಲ್ಲ. ಮನುಷ್ಯರನ್ನು ಮನುಷ್ಯರಾಗಿ ಕಾಣಬೇಕಾದ ಸಮಾಜದಲ್ಲಿ ಇಂದು ಜನರ ನಂಬಿಕೆಗಳನ್ನು ತಪ್ಪು ದಾರಿಗೆ ಏಳೆಯುವ ಕೆಲಸವನ್ನು ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿದ್ದಾರೆ ಎಂದ ಅವರು ಸಿಪಿಐ(ಎಂ) ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಹೋರಾಟದಲ್ಲಿ ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಎಸ್. ರಾಘವೇಂದ್ರ, ನಗರ ಸಮಿತಿಯ ಅಜ್ಜಪ್ಪ, ಕೊಳಗೇರಿಯ ಸೈಯದ್ ಆಲ್ತಾಫ್, ಪೌರಕಾರ್ಮಿಕರ ಸಂಘದ ರಾಜ್ಯ ಖಜಾಂಚಿ ಸಿ. ವೆಂಕಟೇಶ್, ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಪುಟ್ಟೇಗೌಡ, ಎಸ್.ಎಫ್.ಐನ ಶಿವಣ್ಣ, ನಗರ ಸಮಿತಿಯ ಮಂಜುನಾಥ್, ದಿಶಾ ಲೋಕೇಶ್, ರಾಘವೇಂದ್ರ, ಕಾಳೇಶ್ವರಿ ಕಾರ್ಮಿಕರ ಸಂಘದ ಮುತ್ತುರಾಜು, ಸುಗುಣಪೌಲ್ಟ್ರಿ ಫಾರಂ ಕಾರ್ಮಿಕ ಸಂಘದ ಬಸವರಾಜು, ಜೂನಿ, ಸ್ವಾಮಿ, ಭಾಗವಹಿಸಿದ್ದರು
ಗಂಭೀರ ಆರೋಪ
ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಹೋರಾಟವನ್ನು ಬೆಂಬಲಿಸಿ ಮಾತನಾಡಿ ಮನುಷ್ಯರ ನಂಬಿಕೆಗಳನ್ನು ಬಂಡವಾಳವಾಗಿಸಿಕೊಂಡು ಮೌಢ್ಯ ಆಚರಣೆಗೆ ಪ್ರೇರಣೆ ನೀಡಿ ಮಡೆಸ್ನಾನ-ಪಕ್ತಿಭೇದದಂತಹ ಆಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.