ಮೋದಿ ಅಲೆಗೆ ಕಾಂಗ್ರೆಸ್ ತತ್ತರ: ಜಗದೀಶ್
ಚಿಕ್ಕನಾಯಕನಹಳ್ಳಿ: ಕಾಂಗ್ರೆಸ್ ಭ್ರಷ್ಟಾಚಾರವನ್ನು ಮತದಾರರು ಸಹಿಸುವುದಿಲ್ಲ ಎಂಬುದಕ್ಕೆ ಉತ್ತರದ ರಾಜ್ಯಗಳ ಚುನಾವಣಾ ಫಲಿತಾಂಶ ದೃಢಪಡಿಸಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ನುಡಿದರು.
ಭಾನುವಾರ ಅವರು ಪಟ್ಟಣದ ಸರ್ಕಲ್‌ನಲ್ಲಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿ ಮಾತನಾಡುತ್ತಿದ್ದರು. ಈಗ ಬಂದಿರುವ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದ್ದು, ಪಕ್ಷದ ಮುಖಂಡರಾದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು
ತಡೆಯಲು ಸಾಧ್ಯವಿಲ್ಲ. ಇದುವರೆಗೂ ದೇಶವನ್ನಾಳಿದ ಕಾಂಗ್ರೆಸ್ ಸಿಬಿಐ ಉಪಯೋಗಿಸಿಕೊಂಡು ವಿರೋಧ ಪಕ್ಷಗಳ ಶಕ್ತಿಯನ್ನು ಕುಗ್ಗಿಸುವ ತಂತ್ರಗಾರಿಕೆ ಮುಂದೆ ನಡೆಯುವುದಿಲ್ಲ. ಭಾರತದ ಅಭಿವೃದ್ಧಿ ದಿಕ್ಕಿಗೆ ಹೆದ್ದಾರಿ ಈ ಫಲಿತಾಂಶ. ಬಿಜೆಪಿ ಮುಖ್ಯಮಂತ್ರಿಗಳಿದ್ದ ರಾಜ್ಯಗಳಲ್ಲಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವ ಮೂಲಕ ಪ್ರಾಮಾಣಿಕ ಸೇವೆಗೆ ಬಹುಮಾನ ನೀಡಿದ್ದಾರೆ ಎಂದರು. ವಿಜಯೋತ್ಸವದಲ್ಲಿ ನಗರ ಬಿಜೆಪಿ ಅಧ್ಯಕ್ಷ ಕುದುರೆಗಾಡಿ ನರಸಿಂಹ ಮೂರ್ತಿ, ಮಾಜಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚೇತನ್ ಪ್ರಸಾದ್, ಸುಂದರರಾಜ್, ಗಂಗಾಧರ್, ಶಿವಕುಮಾರ್, ಸಾವಶೆಟ್ಟಿಹಳ್ಳಿ ಮರುಳಸಿದ್ದಯ್ಯ, ಕಂದಿಕೆರೆ ರಾಜ್‌ಕುಮಾರ್ ಮತ್ತು ರಂಗನಾಥ್,ಎಸ್ಸಿ ಘಟಕದ ಲಕ್ಷ್ಮಯ್ಯ, ಮೇಲನಹಳ್ಳಿ ಹರೀಶ್ ಮುಂತಾದವರಿದ್ದರು.