ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲಿ
ಮಧುಗಿರಿ: ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದಾಗ ವಿದ್ಯಾರ್ಥಿಗಳಲ್ಲಿ ಚಿಂತನಾ ಶೀಲತೆ ಬೆಳೆದು ಎಲ್ಲವನ್ನು ಪ್ರಶ್ನಿಸುವ ಶಕ್ತಿ ಮಕ್ಕಳಲ್ಲಿ ಮೂಡುತ್ತದೆ ಎಂದು ಡಯಟ್ ಪ್ರಾಚಾರ್ಯ ಗೋಪಾಲಕೃಷ್ಣ ಶಿಕ್ಷಕರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ರಾಜ್ಯ ಜೈವಿಕ ತಂತ್ರಜ್ಞಾನ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ವಿಜ್ಞಾನ ಕೇಂದ್ರದ ಹಾಗೂ ತುಮಕೂರು ಅಸೋಸಿಯೇಷನ್ ಫಾಕ್ಸೆ ಲೈನ್ಸ್ ಏಜುಕೇಷನ್ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪಟ್ಟಣದ ಮೌಂಟ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಬಯೋಸ್ಪಾರ್ಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಜ್ಞಾನ ಬೆಳವಣಿಗೆಗೆ ತಮ್ಮ ಸಂಸ್ಥೆ ಕೈ ಜೋಡಿಸಲಿದೆ ಎಂದರು. ವಿಷಯ ಪರಿವೀಕ್ಷಕ ವೇದಮೂರ್ತಿ, ವಿದ್ಯಾರ್ಥಿಗಳು ಬಯೋಸ್ಪಾರ್ಕ್ ಮಾದರಿಯಲ್ಲಿ ಮಿನುಗಬೇಕು ಎಂದರು. ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್, ಎಸ್ ಅಂಡ್ ಟಿ ಅಧಿಕಾರಿ ಮಾಲಶ್ರೀ ಮಾತನಾಡಿದರು.
ಪತ್ರಕರ್ತ ಸಿ.ಯತಿರಾಜು ಜೈವಿಕ ತಂತ್ರಜ್ಞಾನದ ಮಹತ್ವ ಅದರ ಉಪಯುಕ್ತತೆ ಮತ್ತು ಅಪಾಯಗಳ ಬಗ್ಗೆ ಉಪನ್ಯಾಸ ನೀಡಿದರು. ಕೃಷಿ ಅಧಿಕಾರಿ ಮಾಧುರಿ ಜೈವಿಕ ತಂತ್ರಜ್ಞಾನದ ಅರ್ಥ, ಅದರ ವ್ಯಾಪ್ತಿ ಮಹತ್ವದ ಬಗ್ಗೆ ಸ್ಥಿರ ಚಿತ್ರಿಕೆ ಪ್ರದರ್ಶನಾಧಾರಿತ ಉಪನ್ಯಾಸ ನೀಡಿದರು. ಜಿ. ಸಿದ್ದಗಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ, ಸಾ.ಶಿ ಇಲಾಖೆ ಇಸಿಓ ಕೆಲವು ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜಗದೀಶ್‌ಕುಮಾರ್ ವಂದಿಸಿದರು.