ಸುದ್ದಿ ಸಂಕ್ಷೇಪ
ಒಲಂಪಿಯಾಡ್ಗೆ ಆಯ್ಕೆ
ತಿಪಟೂರು: ರಾಜ್ಯ ಮಟ್ಟದ ವಿಜ್ಞಾನ ಒಲಂಪಿಯಾಡ್ಗೆ ತಾಲೂಕಿನ ದಸರೀಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ಜಿ.ರೇವತಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಬಸವವಸತಿ ಯೋಜನೆಯಲ್ಲಿ ವ್ಯಾಪಕ ಅಕ್ರಮ
ಕುಣಿಗಲ್: ತಾಲೂಕಿನ ನಾಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವವಸತಿ ಯೋಜನೆಯಡಿಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಶ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಗ್ರಾಪಂ ಸದಸ್ಯರಾದ ಆರ್.ತಿಮ್ಮಪ್ಪ, ರಮೇಶ್ ಆಗ್ರಹಿಸಿದ್ದಾರೆ.
ಈ ಬಗ್ಗೆ ವಿವರ ನೀಡಿರುವ ಅವರು, ಸರ್ಕಾರ ಗ್ರಾಮಾಂತರ ಪ್ರದೇಶದಲ್ಲಿ ಗುಡಿಸಲು ರಹಿತ ರಾಜ್ಯ ಮಾಡುವ ಉದ್ದೇಶದಿಂದ ಬಸವವಸತಿ ಯೋಜನೆ ಜಾರಿಗೆ ತಂದಿದ್ದು, ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸಭೆಗಳನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2010-11ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ನಾಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 116 ಫಲಾನುಭವಿಗಳ ಆಯ್ಕೆ ಮಾಡಲಾಗಿದ್ದು ಈ ಪೈಕಿ ಬಹುತೇಕರಿಗೆ ಮನೆ ನಿರ್ಮಿಸಲು ಸಹಾಯ ಧನ ಮಂಜೂರು ಮಾಡಲಾಗಿದೆ.
ನಾಗಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಡ್ಡಿಗೆರೆ, ಹೊಗರಗೆರೆ, ಚೊಟ್ಟನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳ ಆಯ್ಕೆಮಾಡಿ, ಸಹಾಯಧನ ವಿತರಣೆಗೆ ಕ್ರಮ ಕೈಗೊಂಡಿದ್ದು ಈ ಪೈಕಿ ಕೆಲ ಗ್ರಾಮಗಳಲ್ಲಿ ಅನುಮೋದನೆಗೊಂಡ ಫಲಾನುಭವಿಗಳು ಮನೆಯನ್ನು ಕಟ್ಟಿಕೊಳ್ಳದೆ ಬೇರೆಯವರು ಕಟ್ಟಿರುವ ಮನೆಗಳ ಮುಂದೆ ನಿಂತು ಭಾವಚಿತ್ರತೆಗೆಸಿ, ದಾಖಲೆಗಳನ್ನು ಲಗತ್ತಿಸಿ ನೀಡಿದ್ದರೆ, ಮತ್ತೆ ಕೆಲವರು ಗ್ರಾಫಿಕ್ ತಂತ್ರಬಳಸಿ ಸಹಾಯಧನ ಪಡೆದಿದ್ದಾರೆ. ಸದರಿ ಅಕ್ರಮದಲ್ಲಿ ಗ್ರಾಪಂನ ಸಿಬ್ಬಂದಿ ಸೇರಿದಂತೆ ವಸತಿ ಯೋಜನೆಯ ನೋಡಲ್ ಅಧಿಕಾರಿಗಳು ಇತರರು ಪಾಲ್ಗೊಂಡಿರುವ ಶಂಕೆ ವ್ಯಾಪಕವಾಗಿದೆ.
ಪಟಾಕಿ ಸಿಡಿಸಿ ಬಿಜೆಪಿ ಸಂಭ್ರಮ
ತಿಪಟೂರು: ದೇಶದ 4 ರಾಜ್ಯಗಳಲ್ಲಿಯ ಚುನಾವಣಾ ಫಲಿತಾಂಶ ಬಹುತೇಕ ಬಿಜೆಪಿ ಪಾಲಾಗಿರುವುದನ್ನು ತಾಲೂಕು ಬಿಜೆಪಿ ಘಟಕ ಪಟಾಕಿ ಹಚ್ಚಿ, ಸಿಹಿ ಹಂಚುವ ಮೂಲಕ ನಗರಸಭಾ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿತು. ಈ ಸಂದರ್ಭದಲ್ಲಿ ಕಾರ್ಯಕರ್ತರ ಹರ್ಷ ಮುಗಿಲು ಮುಟ್ಟಿತ್ತು. ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್, ಮಾಜಿ ಶಾಸಕ ನಾಗೇಶ್, ಎಪಿಎಂಸಿ ಅಧ್ಯಕ್ಷ ಪ್ರಕಾಶ್, ತಾಲೂಕು ಅಧ್ಯಕ್ಷ ಗಂಗಾಧರ್, ಮುಖಂಡ ಬಿಸಲೇಹಳ್ಳಿ ಜಗದೀಶ್ ಸೇರಿದಂತೆ ಮತ್ತಿತತರಿದ್ದರು.