ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ
ಕ.ಪ್ರ. ವಾರ್ತೆ ಕುಣಿಗಲ್ ಡಿ. 8
ಸ್ವಚ್ಛತೆ ಬಗ್ಗೆ ನಾಗರಿಕರಲ್ಲಿನ ಅರಿವಿನ ಕೊರತೆ ಹೆಚ್ಚಾಗಿರುವ ಕಾರಣ, ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ. ಪುರಸಭೆ ವತಿಯಿಂದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಹಕಾರದಿಂದ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅನ್ನದಾನಿ ತಿಳಿಸಿದರು.
ಪಟ್ಟಣದ 19 ಹಾಗೂ 20ನೇ ವಾರ್ಡ್ನಲ್ಲಿ ಪುರಸಭೆ, ಬಿಜಿಎಸ್ ಪ.ಪೂ.ಕಾಲೇಜನ ಎನ್ಎಸ್ಎಸ್ ವಿದ್ಯಾರ್ಥಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣ ಪ್ರದೇಶವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬೆಳವಣಿಗೆಗೆ ತಕ್ಕಂತೆ ಪೌರಸೇವೆಗಳು ಪೂರಕವಾಗಿ ವಿಸ್ತರಣೆಗೆ ಹಲವು ತಾಂತ್ರಿಕ ಅಡಚಣೆಗಳು ಎದುರಾಗಿದ್ದು, ನೈರ್ಮಲ್ಯ ಸಂರಕ್ಷಣೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಪುರಸಭೆಯಲ್ಲಿ ಪೌರಕಾರ್ಮಿಕರ ಕೊರತೆ ನಡುವೆ ಖಾಸಗಿ ಗುತ್ತಿಗೆ ಆಧಾರದ ಸಿಬ್ಬಂದಿ ನಿರೀಕ್ಷಿತವಾಗಿ ಸೇವೆಗೆ ಲಭ್ಯವಾಗದೆ ಕಸ ವಿಲೆವಾರಿ ಸೇರಿದಂತೆ ಸ್ವಚ್ಛತಾ ಕಾರ್ಯ ನಿರೀಕ್ಷಿತ ವೇಗದಲ್ಲಿ ಸಾಧ್ಯವಾಗುತ್ತಿಲ್ಲ ಎಂದರು.
ಪುರಸಭೆಯ ಜೊತೆಯಲ್ಲಿ ನಾಗರಿಕರು ಸ್ವಚ್ಛತೆ ನಿರ್ವಹಣೆಗೆ ತಮ್ಮ ಅಮೂಲ್ಯ ಸಹಕಾರ ನೀಡಿದಲ್ಲಿ ಸ್ವಚ್ಛತೆ ನಿರ್ವಹಣೆಕಾರ್ಯ ಸಂಪೂರ್ಣ ಯಶಸ್ವಿಯಾಗಿ ಮಾಡಬಹುದಾಗಿದೆ. ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಎಂಬುದರ ಬಗ್ಗೆ ಅರಿವು ಮೂಡಿಸಲು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡು, ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶನಿವಾರ ಮೊದಲ ಹಂತವಾಗಿ 19, 20ನೇ ವಾರ್ಡ್ನಲ್ಲಿ ಹಮ್ಮಿಕೊಂಡಿದ್ದು ನಂತರ ಮುಂದಿನ ದಿನಗಳಲ್ಲಿ ವಿವಿದ ವಾರ್ಡ್ಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದರು.
ಕಾರ್ಯಕ್ರಮದ ಮುನ್ನ ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತೆ ಮೂಡಿಸಲು ಪಟ್ಟಣದ ಕುವೆಂಪುನಗರದ ಬಿಜಿಎಸ್ ಕಾಲೇಜಿನಿಂದ ಮುಖ್ಯರಸ್ತೆಗಳಲ್ಲಿ ಜಾಥಾ ನಡೆಸಿ, 19ನೇ ವಾರ್ಡ್ನ ಪಾರ್ಕ್ ಬಳಿ ಅಂತ್ಯಗೊಳಿಸಿ, 19ನೇ ವಾರ್ಡ್ನ ಪಾರ್ಕ್ನಲ್ಲಿ, ರಸ್ತೆ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು. ಪುರಸಭೆ ಸದಸ್ಯರಾದ ಶಂಕರ್, ಪರಿಸರ ಅಭಿಯಂತರೆ ಶಿಲ್ಪ, ಅರೋಗ್ಯ ನಿರೀಕ್ಷಕಿ ವರಲಕ್ಷ್ಮಿ ಮತ್ತು ಪುರಸಭೆ ಸಿಬ್ಬಂದಿ ಸೇರಿದಂತೆ ಬಿಜಿಎಸ್ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ತೆನಾಲಿ ರಾಮಕೃಷ್ಣ ಇತರರು ಇದ್ದರು.