13, 14 ರಂದು ನೂಪುರ ಚರಣ ನೃತ್ಯೋತ್ಸವ
ತುಮಕೂರು: ತುಮಕೂರಿನ ಶ್ರೀ ರಾಜರಾಜೇಶ್ವರ ನೃತ್ಯ ಕಲಾ ಮಂದಿರ ಟ್ರಸ್ಟ್ ವತಿಯಿಂದ 51 ನೇ ವಾರ್ಷಿಕ ನೂಪುರ ಚರಣ ನೃತ್ಯೋತ್ಸವವನ್ನು ಡಿ.13-14 ರಂದು ನಗರದ ಡಾ. ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ನಾಟ್ಯಶ್ರೀ ಕೆ.ಎಂ.ರಾಮನ್ ಹಾಗೂ ಹರೀಶ್ ರಾಮನ್ ತಿಳಿಸಿದರು.
ಅವರು ತುಮಕೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೃತ್ಯೋತ್ಸವ ವಿವರ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ನೂಪುರ ಚರಣ ನೃತ್ಯೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಡಿ. 13 ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ ಉದ್ಘಾಟನಾ ಸಾನಿಧ್ಯವನ್ನು ಚಿಕ್ಕಪೇಟೆ ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಅಪ್ಪಿನಕಟ್ಟೆ ಪಾಲ್ಗೊಳ್ಳುವರು. ಸಾಹಿತಿ ಕವಿತಾಕೃಷ್ಣ ಅಧ್ಯಕ್ಷತೆ ವಹಿಸುವರು. ಈ ವೇಳೆ ನೃತ್ಯ ಮಂದಿರದ ಜೂನಿಯರ್ ವಿದ್ಯಾರ್ಥಿನಿಯರು ವಿದ್ವಾನ್ ಹರೀಶ್ರಾಮನ್ ಸಂಯೋಜನೆಯಲ್ಲಿ ಅಷ್ಟಲಕ್ಷ್ಮೀ ಸ್ತುತಿ ಭರತನಾಟ್ಯ ಸಾದರಪಡಿಸುವರು.
ಬೆಂಗಳೂರು ನಾರಾಯಣ ಹೃದಯಾಲಯದ ಖ್ಯಾತ ಹೃದಯ ತಜ್ಞ ಡಾ.ಕೆ.ಪ್ರವೀಣ್ಕುಮಾರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದರು.
ಪ್ರಶಸ್ತಿ ಪ್ರದಾನ: ಡಿ.14 ರಂದು ಸಂಜೆ 6 ರಿಂದ 7.30 ರವರೆಗೆ ಕಲಾಮಂದಿರದ ಜೂನಿಯರ್ ಹಾಗೂ ಸೀನಿಯರ್ ವಿದ್ಯಾರ್ಥಿನಿಯರಿಂದ ಪಂದನಲ್ಲೂರ್ ಶೈಲಿಯ ನೃತ್ಯ ಪ್ರದರ್ಶನ ಜರುಗಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಮೃದುಂಗ ವಿದ್ವಾನ್ ಎಂ.ಆರ್. ರಂಗಸ್ವಾಮಿ ಅವರಿಗೆ 5 ಸಾವಿರ ಮೊತ್ತದ ಕೆ.ಎಂ.ರಾಮನ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಗೀತಾ ರುದ್ರೇಶ್, ನಗರಸಭೆ ಸದಸ್ಯ ರಾಮಕೃಷ್ಣ ಪಾಲ್ಗೊಳ್ಳುವರು.
ನಿಲಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಇದೇ ವೇಳೆ ನೆನಪಿನ ಕಾಣಿಕೆಯನ್ನು ಸಾಹಿತಿ ಕವಿತಾಕೃಷ್ಣ ಅಧ್ಯಕ್ಷತೆಯಲ್ಲಿ ವಿತರಿಸಲಾಗುವುದು ಎಂದರು. ಎರಡು ದಿನಗಳ ನೃತ್ಯೋತ್ಸವದಲ್ಲಿ ಪಕ್ಕವಾದ್ಯ ಕಲಾವಿದರಾಗಿ ನಾಟ್ಯಶ್ರೀ ಕೆ.ಎಂ.ರಾಮನ್, ವಿದ್ವಾನ್ ಹರೀಶ್ ರಾಮನ್, ಗಿರೀಶ್ ರಾಮನ್ ಪಾಲ್ಗೊಳ್ಳಲಿದ್ದು, ರಘುನಂದನ್ ಹಾಡುಗಾರಿಕೆ, ಬೆಟ್ಟವೆಂಕಟೇಶ್ ಮೃದಂಗಂ, ಕೊಳಲು ವಿದ್ವಾನ್ ಭಾಸ್ಕರ್, ಇಳಂಗೋವನ್ ತಂಡದವರು ವರ್ಣಾಲಂಕಾರ ನಡೆಸಿಕೊಡವರು ಎಂದರು. ಸಾಹಿತಿ ಕವಿತಾಕೃಷ್ಣ ಹಾಜರಿದ್ದರು.