ಉಪಲೋಕಾಯುಕ್ತರ ನಿರ್ದೇಶನ ಪಾಲಿಸುವಲ್ಲಿ ವಿಫಲ: ಆರೋಪ
ಕುಣಿಗಲ್: ತಾಲೂಕಿನ ಹೆಗಡತಿಹಳ್ಳಿ ಬಳಿಯ ಡಿಸ್ಟಲರಿ ಕಾರ್ಖಾನೆಯಿಂದ ಪರಿಸರ ಮಾಲಿನ್ಯವಾಗುತ್ತಿರುವ ವರದಿ ಸಲ್ಲಿಸುವ ನಿಟ್ಟಿನಲ್ಲಿ ಉಪಲೋಕಾಯುಕ್ತರ ನಿರ್ದೇಶನ ಪಾಲಿಸುವಲ್ಲಿ ಪರಿಸರ ಅಧಿಕಾರಿ ಮತ್ತು ತಹಸೀಲ್ದಾರ್ ನಿರ್ಲಕ್ಷ್ಯ ತೋರಿರುವುದರಿಂದ, ಅಧಿಕಾರಿಗಳ ವರ್ತನೆ ನಿಜಕ್ಕೂ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಸಂಸ್ಥೆಯ ಅಧ್ಯಕ್ಷ ಶಿವಪ್ಪ ತಿಳಿಸಿದ್ದಾರೆ.
ಈ ಬಗ್ಗೆ ವಿವರ ನೀಡಿದ ಅವರು, ತಾಲೂಕಿನ ಹೆಗ್ಗಡತಿಹಳ್ಳಿ ಸಮೀಪದಲ್ಲಿನ ಡಿಸ್ಟಲರಿ ಕಾರ್ಖಾನೆಯಿಂದ ವ್ಯಾಪಕ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ 2005ರಲ್ಲಿ ಸೂಕ್ತ ದಾಖಲೆಗಳೊಂದಿಗೆ, ಉಪಲೋಕಾಯುಕ್ತರ ಮುಂದೆ ಪ್ರಕರಣ ದಾಖಲಿಸಿದ್ದು ಅಂದಿನಿಂದ ಪ್ರಕರಣ ವಿಚಾರಣೆಯಲ್ಲಿದೆ. ಕೆಲ ತಿಂಗಳ ಹಿಂದೆ ತುಮಕೂರಿಗೆ ಉಪಲೋಕಾಯುಕ್ತರು ಭೇಟಿ ನೀಡಿದ ಅವಧಿಯಲ್ಲಿ ಪರಿಸರ ಅಧಿಕಾರಿ, ತಹಸೀಲ್ದಾರ್ ಹಾಗೂ ದೂರುದಾರರು ಮೂವರು ಸೇರಿ ಪರಿಸರ ಮಾಲಿನ್ಯವಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಈ ಸೂಚನೆಯ ಹಿನ್ನಲೆಯಲ್ಲಿ ತಹಸೀಲ್ದಾರ್ ಡಿ. 9ರಂದು ದೂರುದಾರರಿಗೆ ಆಗಮಿಸುವಂತೆ ಪತ್ರ ರವಾನಿಸಿ, ನಂತರ ಏಕಾಏಕಿ ಕೇವಲ ಅಧಿಕಾರಿಗಳೇ ಸ್ಥಳಕ್ಕೆ ತೆರಳಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಶಿವಪ್ಪ ಆರೋಪಿಸಿದರು. ಪರಿಸರ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಉಪಲೋಕಾಯುಕ್ತರ ಸೂಚನೆಯಂತೆ ತಮ್ಮನ್ನು ಬರಹೇಳಿ ನಂತರ ಅಧಿಕಾರಿಗಳೇ ತೆರಳಿರುವುದು, ಅಧಿಕಾರಿಗಳ ನಡೆ ನಿಜಕ್ಕೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು, ಮತ್ತೊಮ್ಮೆ ಸ್ಥಳ ಪರೀಕ್ಷೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.