ಕುಲದ ಹೆಸರಲ್ಲಿ ಗೊಂದಲ ಸೃಷ್ಟಿ ಸ್ವಾಸ್ತ್ಯ ಸಮಾಜಕ್ಕೆ ಮಾರಕ
ಕುಣಿಗಲ್: ದಾಸಶ್ರೇಷ್ಠ ಕನಕದಾಸರು ಹೇಳಿದಂತೆ ಪ್ರಸ್ತುತ ದಿನಗಳಲ್ಲಿ ಕುಲಕುಲವೆಂದು ಬಡಿದಾಡಿಕೊಳ್ಳುತ್ತಿದ್ದು, ಯಾರೂ ಕುಲದ ನೆಲೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡದೆ, ವಿನಾಕಾರಣ ಕುಲದ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಸ್ವಾಸ್ತ್ಯ ಸಮಾಜಕ್ಕೆ ಮಾರಕ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಿ. ಶಿವಶಂಕರ್ ತಿಳಿಸಿದರು.
ಭಾನುವಾರ, ಪಟ್ಟಣದ ಕಂದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಹಮ್ಮಿಕೊಂಡಿದ್ದ ಭಾರತರತ್ನ ಬಿ.ಆರ್.ಅಂಬೇಡ್ಕರ್ 57ನೇ ಪರಿನಿರ್ವಾಣ ದಿನ ಮತ್ತು ಬಹುಜನ ನಾಯಕರ ಸ್ಮರಣಾದಿನದ ಅಧ್ಯಕ್ಷತೆವಹಿಸಿ ಮಾತನಾಡಿ, ದೇಶದ ಎಲ್ಲಾ ವರ್ಗದ ಜನತೆ ಸರಿಸಮಾನರಾಗಿ ಬಾಳಿ ಬದುಕುವ ನಿಟ್ಟಿನಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿದಂತಹ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದರಿಂದ ಎಲ್ಲಾ ವರ್ಗದವರೂ ನೆಮ್ಮದಿಯಾಗಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗಿದೆ. ಅಲ್ಲದೆ, ಬ್ರಿಟೀಶರ ಕಾಲದಲ್ಲೆ ಮೊಟ್ಟಮೊದಲ ಬಾರಿಗೆ ಸಾಮಾನ್ಯ ಜನತೆಯೂ ಮತದಾನ ಮಾಡುವ ನಿಟ್ಟಿನಲ್ಲಿ ಅಂದಿನ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಂತಹ ಮಹಾನ್ ನಾಯಕನನ್ನು ಇಂದು ಕೇವಲ ಒಂದುವರ್ಗಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದ ಅವರು, ದಲಿತ ವರ್ಗಗಳಲ್ಲಿನ ಕೆಲ ಮುಖಂಡರು ಸ್ವಾರ್ಥಸಾಧನೆಗೆ ಜನಾಂಗವನ್ನು ಪರಿಣಾಮಕಾರಿಯಾಗಿ ಮುನ್ನಡೆಸದ ಕಾರಣ ಇಂದು ದಲಿತರು ಹಿಂದುಳಿಯುವಂತಾಗಿದೆ ಎಂದು ವಿಷಾದಿಸಿದರು.
ಖಂಡನೀಯ: ತಹಸೀಲ್ದಾರ್ ಪುಟ್ಟನರಸಯ್ಯ, ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು, ಅವರು ದಲಿತ ವರ್ಗದವರೆಂಬ ಒಂದೇ ಕಾರಣಕ್ಕೆ ಅವರ ಪ್ರತಿಭೆಯನ್ನು ಗುರುತಿಸದ ಕೆಲ ವರ್ಗದ ಜನತೆ, ಸಂವಿಧಾನವನ್ನು ಅವರು ಬೇರೆಯವರಿಂದ ನಕಲು ಮಾಡಿ ಬರೆದಿದ್ದಾರೆಂದು ಅಪಪ್ರಚಾರ ಮಾಡುತ್ತಿರುವುದು ನಿಜಕ್ಕೂ ಖಂಡನೀಯ ಎಂದರು. ದಲಿತ ವರ್ಗದಲ್ಲಿನ ಹಲವು ಗುಂಪುಗಳ ಬಗ್ಗೆ ಭಿನ್ನಾಭಿಪ್ರಾಯ ತೊರೆದು ರಾಜಕೀಯವಾಗಿ ಸಬಲರಾದಾಗ ಮಾತ್ರ, ಅಂಬೇಡ್ಕರ್ ಅವರು ಕಂಡ ಕನಸಿನಂತೆ ದಲಿತರು ಎಲ್ಲಾ ರೀತಿಯಲ್ಲೂ ಮುಂದುವರೆಯಲು ಸಾಧ್ಯವೆಂದರು.
ಮುಖಂಡರಾದ ಬಿ.ಡಿ. ಕುಮಾರ್, ತಾಪಂ ಮಾಜಿ ಸದಸ್ಯ ವೆಂಕಟಗಿರಿಯಪ್ಪ, ವಕೀಲರಾದ ರಾಜಶೇಖರ್ ಮಾತನಾಡಿದರು. ಶ್ರೀನಿವಾಸ್, ಕೃಷ್ಣಪ್ಪ, ರಾಜು ಇತರರು ಪಾಲ್ಗೊಂಡಿದ್ದು, ಪಿಎಸೈ ಗುರುಪ್ರಸಾದ್, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಅಚ್ಚರಿ ಮೂಡಿಸಿದ ತಹಸೀಲ್ದಾರ್ ಮಾತು
ಅಂಬೇಡ್ಕರ್ ಪರಿನಿರ್ವಾಣ ಕುರಿತು ಸಭೆಯಲ್ಲಿ ತಹಸೀಲ್ದಾರ್ ಪುಟ್ಟನರಸಯ್ಯ ಪ್ರಸಕ್ತ ರಾಜಕಾರಣದ ಬಗೆಗೆ ಮಾತನಾಡಿದ್ದು ಸಭೆಯಲ್ಲಿ ಕೆಲಕಾಲ ಅಚ್ಚರಿಗೆ ಕಾರಣವಾಯಿತು. ದಲಿತರಾದ ಬಾಬುಜಗಜೀವನರಾಂ ಪ್ರಧಾನಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಇಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ಯಾಗಲು, ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲೂ ಆಗಲಿಲ್ಲ. ಜನಾಂಗದಲ್ಲಿ ವಿವಿಧ ಪಂಗಡಗಳಲ್ಲಿ ಭೇದ ಭಾವದಿಂದ ರಾಜಕೀಯ ಶಕ್ತಿಸಾಧಿಸಲಾಗುತ್ತಿಲ್ಲ. ಕೊರಟೆಗೆರೆ, ಮಧುಗಿರಿ ಮತ್ತು ಶಿರಾ ಕ್ಷೇತ್ರದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಒಮ್ಮತವಾಗಿ ಶ್ರಮಿಸಿದಲ್ಲಿ ರಾಜಕೀಯ ಶಕ್ತಿಪಡೆಯಬಹುದಾಗಿದೆ. ಜನಾಂಗದವರು ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕೆಂದಾಗ ಸಭಿಕರಲ್ಲಿ ಅಚ್ಚರಿಗೆ ಕಾರಣವಾಯಿತು.