ಶಿರಾ ಜಾಮಿಯಾ ಮಸೀದಿ ಅಂಗಡಿ ಮಳಿಗೆಗಳು ಸಕ್ರಮ
ಕ.ಪ್ರ.ವಾರ್ತೆ , ತುಮಕೂರು , ಡಿ. 9
ಶಿರಾ ಕೋಮುಗಲಭೆಗೆ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಜಿಲ್ಲಾಡಳಿತದ ತಲೆ ಬಿಸಿಗೆ ಕಾರಣವಾಗಿದ್ದ 112 ಅಂಗಡಿ ಮಳಿಗೆಗಳ ವಿವಾದ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದೆ.
ಶಿರಾ ಜಾಮಿಯಾ ಮಸೀದಿ (ವಕ್ಫ್) ಗೆ ಸೇರಿರುವ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಅಂಗಡಿ ಮಳಿಗೆಗಳು ಸಕ್ರಮವಾಗಿವೆ ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ದ್ವಿ ಸದಸ್ಯ ಪೀಠ ತೀರ್ಪು ನೀಡಿದೆ.
ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಎಂದು ತೀರ್ಪು ನೀಡಿ, ಅರ್ಜಿದಾರ ಕಾಂತರಾಜುಗೆ 10 ಸಾವಿರ ರು. ದಂಡ ವಿಧಿಸುವ ಮೂಲಕ ನ್ಯಾಯಾಲಯ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಈ ಮೂಲಕ ಶಿರಾ ಸೇರಿದಂತೆ ತುಮಕೂರು ನಗರ ಹಾಗೂ ಇತರೆ ತಾಲೂಕುಗಳಲ್ಲಿ ಉಂಟಾಗಿದ್ದ ಉದ್ವಿಗ್ನತೆಗೆ ಅಧಿಕೃತ ತೆರೆ ಎಳೆದಿದೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಶಿರಾ ಜಾಮಿಯಾ ಮಸೀದಿ, ವಕ್ಫ್ ಸಮಿತಿಯ ಅಧ್ಯಕ್ಷ ಚಾಂದ್ ಫಾಷಾ ಕೆಳಕಂಡಂತೆ ಲಿಖಿತ ಮಾಹಿತಿಯನ್ನು ನೀಡಿದ್ದಾರೆ. ಶಿರಾ ನಗರದ ಟಿ.ಬಿ. ಸರ್ಕಲ್‌ನಲ್ಲಿರುವ ಜಾಮಿಯಾ ಮಸೀದಿಗೆ ಸೇರಿರುವ ಸ್ಥಳ (ವಕ್ಫ್) ಮಂಡಳಿಗೆ ಸೇರಿರುವ ಕಲ್ಲುಕೋಟೆ ನೂತನ ಸರ್ವೆ ನಂ. 49 / 267 ರಲ್ಲಿರುವ 10 ಎಕರೆ 10 ಗುಂಟೆ ಪ್ರದೇಶದ ಪೈಕಿ 1 ಎಕರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿ, 22-11-2013 ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದನ್ವಯ ಜಿಲ್ಲಾಧಿಕಾರಿಗಳು 1-8-2013 ರಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ, ಶಿರಾ ಟೌನ್ ಡೆವಲೆಪ್‌ಮೆಂಟ್ ಅಂಡ್ ರೆವೂಲ್ಯೂಷನ್ ಫೋರಂನ ಎಸ್.ವಿ. ಕಾಂತರಾಜು ಉಚ್ಚ ನ್ಯಾಯಾಲಯದಲ್ಲಿ ಸರ್ಕಾರದ ಹಾಗೂ ಅಧ್ಯಕ್ಷರು (ಜಾಮಿಯಾ ಮಸೀದಿ) (ವಕ್ಪ್) ಅವರ ವಿರುದ್ಧ ದಾವೆ ಹೂಡಿದ್ದರು. ವಾಣಿಜ್ಯ ಮಳಿಗೆಗಳು ಅಕ್ರಮವೆಂದು ದಾವೆ ಹೂಡಿದ್ದರು.
ಮುಖ್ಯ ನ್ಯಾಯಮೂರ್ತಿ ಗರಂ: ದಾವೆ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಾಘೇಲ ಹಾಗೂ ಎಸ್.ಎನ್. ಸತ್ಯನಾರಾಯಣ ಅವರ ಪೀಠದಲ್ಲಿ ಇತ್ಯರ್ಥಗೊಂಡಿದೆ. ಉಚ್ಚ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಒದಗಿಸಿದ ಎಸ್.ವಿ. ಕಾಂತರಾಜು ಅವರ ಮೇಲ್ಮನವಿಯನ್ನು 2-12-13 ರಂದು ವಜಾಗೊಳಿಸಿ, 10 ಸಾವಿರ ರು. ದಂಡ ವಿಧಿಸಿದ್ದು, ಜಿಲ್ಲಾಧಿಕಾರಿಗಳಿಗೆ ಮತ್ತು ಜಾಮಿಯಾ ಮಸೀದಿ ಶಿರಾ ಇವರಿಗೆ 15 ದಿನಗಳೊಳಗೆ ನೀಡುವಂತೆ ಆದೇಶಿಸಿದ್ದಾರೆ.
ಉದ್ವಿಗ್ನತೆಗೆ ಕಾರಣವಾಗಿದ್ದ ವಿವಾದ: ಶಿರಾದಲ್ಲಿ ಕೋಮುಗಲಭೆಗೆ, ಉದ್ವಿಗ್ನತೆಗೆ ಕಾರಣವಾಗಿದ್ದ ಈ ಅಂಗಡಿ ಮಳಿಗೆಗಳ ವಿವಾದ ಕೊನೆಗೂ ಶೀಘ್ರದಲ್ಲೇ ಅಂತ್ಯಕಂಡಿದ್ದು, ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವರೂ ಆಗಿರುವ ಟಿ.ಬಿ. ಜಯಚಂದ್ರ ಹಾಗೂ ಜಿಲ್ಲಾ ಪೊಲೀಸರು, ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಗಿದೆ. ಈ ಶಿರಾ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಶಿರಾ ಹಾಗೂ ತುಮಕೂರಿನಲ್ಲಿ ಹಿಂದೂ ಜಾಗರಣಾ ವೇದಿಕೆ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದರು. ಪ್ರತಿಯಾಗಿ ಜಾಮಿಯಾ ಮಸೀದಿ, ವಕ್ಫ್ ಮಂಡಳಿ ಸದಸ್ಯರು ಸುದ್ದಿ ಗೋಷ್ಠಿ ನಡೆಸಿದ್ದರು. ಶಿರಾದಲ್ಲಿ ಕೆಲ ದಿನಗಳ ಕಾಲ ನಿಷೇಧಾಜ್ಞೆ ಜಾರಿಯಾಗಿತ್ತು. ಈ ಘಟನೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮುಖಂಡರಾದ ರಾಜ್ಯ ಸಭಾ ಸದಸ್ಯರೂ ಆದ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಎ.ಎಚ್. ಶಿವಯೋಗಿಸ್ವಾವು, ಇತರರು ಜಿಲ್ಲಾಡಳಿತದ ಎಚ್ಚರಿಕೆ ಲೆಕ್ಕಿಸದೆ ಶಿರಾಕ್ಕೆ ಭೇಟಿ ನೀಡಲು ಯತ್ನಿಸಿದ್ದ ವೇಳೆ ಅವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿತ್ತು. ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‌ಗೌಡ ಶಿರಾ ಜಾಮಿಯಾ ಮಸೀದಿ 112 ಮಳಿಗೆಗಳು ಅಕ್ರಮ ಎಂದು ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಬಿಜೆಪಿ ಶಾಸಕ ಸಿ.ಟಿ. ರವಿ ಹಾಗೂ ಅರವಿಂದ ಲಿಂಬಾವಳಿ ಶಿರಾಕ್ಕೆ ಭೇಟಿ ನೀಡಿದ್ದರು. ಕಳೆದ ಆಗಸ್ಟ್‌ನಿಂದ ನಡೆದಿದ್ದ ಈ ಅಂಗಡಿ ಮಳಿಗೆಗಳ ಮುಸುಕಿನ ಗುದ್ದಾಟ, ಬಹಿರಂಗ ಕಾದಾಟಕ್ಕೆ ಹೈಕೋರ್ಟ್ ಅಧಿಕೃತ ತೆರೆ ಎಳೆದಿದೆ.
ಸುದ್ದಿಗೋಷ್ಠಿಯಲ್ಲಿ ಷಹಾಬುದ್ದೀನ್, ಶೇಕ್ ಸೇರಿದಂತೆ ಸಂಬಂಧಪಟ್ಟವರು ಉಪಸ್ಥಿತರಿದ್ದರು.