ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಒಡೆಯರ್‌ಗೆ ಯಂಗ್ ಚಾಲೆಂಜರ್ಸ್ ಶ್ರದ್ಧಾಂಜಲಿ

Vishwanath S
Updated On : 11 Dec 2013, 1:00 am

ತುಮಕೂರು: ಮೈಸೂರು ರಾಜವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ತುಮಕೂರಿನ ಯಂಗ್ ಚಾಲೆಂಜರ್ಸ್ ಕ್ರೀಡಾ ಕ್ಲಬ್ ಸಂತಾಪ ಸೂಚಿಸಿದೆ. ನರಸಿಂಹರಾಜ ಒಡೆಯರ್ ನಿಧನದಿಂದ ಕ್ರೀಡಾ ಕ್ಷೇತ್ರಕ್ಕೆ ಅಪಾರ ನಷ್ಟವುಂಟಾಗಿದೆ ಎಂದು ಯಂಗ್ ಚಾಲೆಂಜರ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಆರ್. ವೇಣುಗೋಪಾಲ್ ಕೃಷ್ಣ, ಹಾಲಿ ಅಧ್ಯಕ್ಷ ಎಚ್.ಎ. ವಿಜಯಕುಮಾರ್, ಕಾರ್ಯದರ್ಶಿ ಎ.ಎನ್. ಪ್ರಭಾಕರ್ ಹಾಗೂ ಸಂಸ್ಥೆಯ ಎಲ್ಲ ಸದಸ್ಯರು ಕಂಬನಿ ಮಿಡಿದಿದ್ದಾರೆ.
ಹಳೆಯ ನೆನಪು: 1980 ರಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಸ್ಥೆ ತುಮಕೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಯಲ್ಲಿ ಪತ್ನಿ ಪ್ರಮೋದಾ ದೇವಿಯವರೊಡನೆ ಭಾಗವಹಿಸಿ ಬಹುಮಾನ ವಿತರಿಸಿದ್ದನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಆರ್. ವೇಣುಗೋಪಾಲ್ ಕೃಷ್ಣ ಹಾಗೂ ಸದಸ್ಯರು ನೆನಪಿಸಿಕೊಂಡಿದ್ದಾರೆ.
ಗಣ್ಯರ ಸಂತಾಪ
ತಿಪಟೂರು: ಮೈಸೂರು ರಾಜ ವಂಶಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನ ಮೈಸೂರು ರಾಜವಂಶಕ್ಕೆ ತುಂಬಲಾರದ ನಷ್ಟ ಎಂದು ನಗರದ ಹತ್ತು ಹಲವು ಗಣ್ಯರು ತೀವ್ರ ಸಂತಾಪ ವ್ಬಕ್ತಪಡಿಸಿದ್ದಾರೆ.
ಕೆಜೆಪಿ ಮುಖಂಡ ಲೋಕೇಶ್ವರ, ಚೌಡೇಶ್ವರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್, ಚಾಮುಂಡೇಶ್ವರಿ ಸಹಕಾರಿ ಸಂಘದ ಅಧ್ಯಕ್ಷೆ ವಿಶಾಲ ಸೋಮಶೇಖರ್, ಕಿರುತೆರೆ ನಟ ದಯಾನಂದ ಸಾಗರ್, ಜೆಡಿಎಸ್ ಮುಖಂಡರಾದ ತಡಸೂರು ಗುರುಮೂರ್ತಿ, ನಟರಾಜು, ಉದ್ಯಮಿ ಬಾಲಕೃಷ್ಣ ರೈ, ನವನಿರ್ಮಾಣ ವೇದಿಕೆ ಸದಾಶಿವಯ್ಯ, ಪತ್ರಕರ್ತ ಭಾಸ್ಕರ್, ಕರವೇ ರಾಜ್ಯಾಧ್ಯಕ್ಷ ಸಿದ್ದಾಪುರ ವಿಯಜ್, ರಾಜ್ಯ ಯಾದವಸೇನೆ ರಾಜ್ಯಾಧ್ಯಕ್ಷ ಪ್ರಕಾಶ್ ಯಾದವ್, ಬಿಸಲೇಹಳ್ಳಿ ಜಗದೀಶ್‌ಮತ್ತಿತರರು  ಸಂತಾಪ ವ್ಯಕ್ತಪಡಿಸಿದ್ದಾರೆ.
ನಿವೃತ್ತ ನೌಕರರ ದಿನಾಚರಣೆ
ತಿಪಟೂರು: ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ನಿವೃತ್ತ ನೌಕರರ ದಿನಾಚರಣೆ, ಸರ್ವ ಸದಸ್ಯರ ಸಭೆ ಮತ್ತು ಹಿರಿಯ ನೌಕರರ ಸನ್ಮಾನ ಸಮಾರಂಭವನ್ನು ಡಿ.17ರ ಮಂಗಳವಾರ ಪಟ್ಟಣದ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ 75 ವರ್ಷ ತುಂಬಿದ ಸಂಘದ ಸದಸ್ಯರುಗಳಿಗೆ ಅಭಿನಂದಿಸಲಾಗುವುದು. ಹೆಚ್ಚಿನ ವಿವರಗಳಿಗೆ ಸಂಘದ ಅಧ್ಯಕ್ಷರಾದ ಜಿ.ಟಿ.ಶಂಕರೇಗೌಡ ಮೊ.9448343863 ಅಥವಾ ಕೆ.ಬಾಲಕೃಷ್ಣ ಪ್ರಧಾನ ಕಾರ್ಯದರ್ಶಿ ಮೊ. 9986362875ರವರನ್ನು ಸಂಪರ್ಕಿಸಬಹುದು.
ಸಭೆಗೆ ತಾಲೂಕಿನ ಎಲ್ಲಾ ನಿವೃತ್ತ ನೌಕರರ ಸಂಘದ ಸದಸ್ಯರುಗಳು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಸಂಘವು ತಿಳಿಸಿದೆ.  
ಸುಭಾಸ್‌ಚಂದ್ರ ಬಸಪ್ಪ ಬಸವರೆಡ್ಡಿಗೆ ಡಾಕ್ಟರೇಟ್
ತಿಪಟೂರು: ಪಟ್ಟಣದ ಕಲ್ಪತರು ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಸುಭಾಸ್‌ಚಂದ್ರ ಬಸಪ್ಪ ಬಸವರೆಡ್ಡಿ ಅವರು ತಿಪಟೂರು ತಾಲೂಕಿನ ಅಂತರ್ಜಲ ಗುಣಮಟ್ಟ ಎಂಬ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಡಾ.ಈ.ಟಿ.ಪುಟ್ಟಯ್ಯ ಹಾಗೂ ಡಾ.ಹೀನಾ ಕೌಸರ್ ಇವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನೆಗೆ ಡಾಕ್ಟರೇಟ್ ಸಿಕ್ಕಿದೆ.
ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾದರೆ ಸಮಸ್ಯೆ ನಿವಾರಣೆ ಸಾಧ್ಯ
ಕುಣಿಗಲ್: ದೇಶದ ಮುಂದಿನ ಪೀಳಿಗೆಯ ಪ್ರಜೆಗಳಾದ ಇಂದಿನ ಮಕ್ಕಳು ಹಾಗೂ ಯುವ ಜನತೆ ಭ್ರಷ್ಟಾಚಾರ  ನಿಯಂತ್ರಣಕ್ಕೆ ಪರಿಣಾಮಕಾರಿ ಪಾತ್ರ ವಹಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರ ಸಮಸ್ಯೆ ನಿವಾರಣೆ ಸಾಧ್ಯವೆಂದು ತಹಸೀಲ್ದಾರ್ ಪುಟ್ಟನರಸಯ್ಯ ತಿಳಿಸಿದರು. ಮಂಗಳವಾರ, ಮಾನವಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ತಾಲೂಕು ಘಟಕ, ತಾಲೂಕು ಕಚೇರಿ ಅವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿನಲ್ಲಿ ಮಾನವಹಕ್ಕುಗಳು ಉಲ್ಲಂಘನೆಯಾದ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತಿಲ್ಲ. ಮಾನವ ಹಕ್ಕುಗಳ ಅಗತ್ಯ ಸಂರಕ್ಷಣೆ ನಿಟ್ಟಿನಲ್ಲಿ ತಾಲೂಕು ಆಡಳಿತ ಪರಿಣಾಮ ಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಾನವೀಯ ಮೌಲ್ಯಗಳನ್ನು ಆದರಿಸಿ, ಗೌರವಿಸುವಂತೆ ಎಲ್ಲಾ ಧರ್ಮಗಳು ಸಾರಿಹೇಳುತ್ತಿದ್ದರೂ ಕೆಲವೊಂದು ಸ್ವಾರ್ಥಸಾಧನೆಯಿಂದ ಮಾನವಹಕ್ಕುಗಳಿಗೆ ಧಕ್ಕೆ ಬರುವಂತಾಗಿರುವುದು ದೌರ್ಭಾಗ್ಯದ ಸಂಗತಿ. ದೇಶದ ಯುವಜನತೆ ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ಕಂಕಣಬದ್ಧರಾಗಿ ಹೋರಾಟ ನಡೆಸಿದಾಗ ಮಾತ್ರ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೆಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಶಂಕರಪ್ಪ, ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ಮಾನವಹಕ್ಕುಗಳ ಸಂರಕ್ಷಣೆ ನಿಟ್ಟಿನಲ್ಲಿ ಅಗತ್ಟ ಕ್ರಮ ಕೈಗೊಳ್ಳಲಾಗಿದೆ. ತಾಪಂ ಸೇರಿದಂತೆ ಗ್ರಾಪಂಗಳಲ್ಲಿನ ಭ್ರಷ್ಟಾಚಾರ ಪ್ರಕರಣಗಳು ತಮ್ಮ ಗಮನಕ್ಕೆ ಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದೆಂದರು.
ಒಕ್ಕಲಿಗರ ಸಂಘದ ಚುನಾವಣೆ ಸಭೆ
ತಿಪಟೂರು: ಕೇಂದ್ರ ಒಕ್ಕಲಿಗರ ಸಂಘದ ಚುನಾವಣೆಗೆ ಸಂಬಂಧಪಟ್ಟಂತೆ ಚರ್ಚಿಸಲು ತಾಲೂಕಿನಲ್ಲಿ ಕೇಂದ್ರ ಒಕ್ಕಲಿಗರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಸದಸ್ಯರು ಮತ್ತು ಸಮಾಜ ಬಂಧುಗಳ ಸಭೆಯನ್ನು ಡಿ.14ರಂದು ಶನಿವಾರ ಮಧ್ಯಾಹ್ನ 1ಗಂಟೆಗೆ ಪಟ್ಟಣದ ಒಕ್ಕಲಿಗರ ಸಂಘದ ಆವರಣದಲ್ಲಿ ಸಭೆಯನ್ನು ಕರೆಯಲಾಗಿದೆ. ಆದ್ದರಿಂದ ಈ ಸಭೆಗೆ ಎಲ್ಲಾ ತಾಲೂಕಿನ ಕೇಂದ್ರ ಸಂಘದ ಸದಸ್ಯರುಗಳು, ಸಮಾಜ ಬಂಧುಗಳು ಹಾಜರಾಗಿ ಸಹಕರಿಸಬೇಕೆಂದು ತಾ. ಒಕ್ಕಲಿಗರ ಸಂಘದ ಅಧ್ಯಕ್ಷರಾದ ಚಿದಾನಂದ್ ತಿಳಿಸಿದ್ದಾರೆ.  
ಆಚಾರ್ಯ ವಿದ್ಯಾಪೀಠದಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ತುಮಕೂರು: ತುಮಕೂರಿನ ಸರಸ್ವತಿಪುರಂನಲ್ಲಿರುವ ಆಚಾರ್ಯ ವಿದ್ಯಾಪೀಠದ ವತಿಯಿಂದ ಸೈಟಿಯಾ 2013 ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಶಾಲೆಯ ಎಲ್.ಕೆ.ಜಿ ಯಿಂದ 10 ನೇ ತರಗತಿಯವರೆಗಿನ ನೂರಾರು ಮಕ್ಕಳು ವಿವಿಧ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಗಣಿತ ಉಪನ್ಯಾಸಕ ಶಿವಣ್ಣ, ಮಕ್ಕಳು ಓದಿನ ಜೊತೆಗೆ ವಿಜ್ಞಾನದ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ. ಆಧುನಿಕ ತಂತ್ರಜ್ಞಾನದ ಜೊತೆಗೆ ವಿಜ್ಞಾನದ ಆವಿಷ್ಕಾರಗಳ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ ಅದರ ಬಗ್ಗೆ ಕುತೂಹಲ ಹೊಂದಿ, ಆವಿಷ್ಕಾರದ ಹಿಂದಿನ ತಂತ್ರಜ್ಞಾನವನ್ನು ಅರಿತುಕೊಂಡರೆ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದರು.
ಈ ನಿಟ್ಟಿನಲ್ಲಿ ಶಿಕ್ಷಕರು ಸಹ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡಬೇಕು. ಆ ಮೂಲಕ ಮೂಢನಂಬಿಕೆಯನ್ನು ಹೊಡೆದೋಡಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಬೇಕಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಅಶ್ವಿನಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರ ನೀಡಲಾಗಿದೆ. ಇದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
 ವಿಜ್ಞಾನ ಶಿಕ್ಷಕ ಶ್ರೀಧರ್, ಮುಖ್ಯ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕರಾದ ಯಶೋಧ, ರಮ, ಪದ್ಮ ಮತ್ತಿತರರು ಉಪಸ್ಥಿತರಿದ್ದರು.
ಕವನ ವಾಚನ ಕಾರ್ಯಕ್ರಮ
ಶಿರಾ: ಸಿರಿಗನ್ನಡ ವೇದಿಕೆ ಶಿರಾ ಘಟಕದ ವತಿಯಿಂದ ಕನ್ನಡ ನಾಡು ನುಡಿ, ಕಲೆ ಕಾವ್ಯ, ಕವನ ಸಾಹಿತ್ಯಗಳ ಬಗ್ಗೆ ಆಸಕ್ತಿ ಮೂಡಿಸಲು ಯುವ ಸಾಹಿತಿಗಳು ಉದಯೋನ್ಮುಖ ಬರಹಗಾರರು ಮತ್ತು ಸಾಹಿತ್ಯಾಸಕ್ತರನ್ನು
ಪ್ರೋತ್ಸಾಹಿಸುವ ಸಲುವಾಗಿ ಡಿ. 29 ರಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಕವನ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಸಾಹಿತ್ಯಾಸಕ್ತರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದ್ದು,  ಸ್ವಯಂ ರಚಿಸಿದ ಒಂದು ಕವನವನ್ನು ಅಧ್ಯಕ್ಷರು ಸಿರಿಗನ್ನಡ ವೇದಿಕೆ ಶಿರಾ ಘಟಕ, ಶ್ರೀ ಬೀರಲಿಂಗೇಶ್ವರ ಸ್ವಾಮಿ ನಿಲಯ, ಜಿ.ಪಂ. ಕಚೇರಿ ಎದುರು,
ಅಂಬೇಡ್ಕರ್ ಭವನ ರಸ್ತೆ, ಶಿರಾ ಟೌನ್, ಮೊ- 8197748719, ಇವರಲ್ಲಿ ಡಿ. 25 ರೊಳಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಯತೀಶ್.ವಿ.ಎನ್-9980294165, ಕಳ್ಳಂಬೆಳ್ಳ ಜಯರಾಂ-8197748719 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಬಿಜೆಪಿ ಭರ್ಜರಿ ಗೆಲವಿಗೆ ಸಂಭ್ರಮಾಚರಣೆ
ಕ,ಪ್ರ,ವಾರ್ತೆ ಮಧುಗಿರಿ  ಡಿ.10
ಉತ್ತರದ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿ ಭರ್ಜರಿ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಮಧುಗಿರಿ ತಾಲೂಕು ಭಾರತೀಯ ಜನತಾ ಪಕ್ಷದಿಂದ ತಾ.ಘಟಕದ  ಅಧ್ಯಕ್ಷ ಬಿ.ಎನ್. ಲಕ್ಷ್ಮೀಪತಿ  ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಡೂಂಲೈಟ್  ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಪಟ್ಟರು.
ಈ ಸಂಭ್ರಮಾಚರಣೆಯಲ್ಲಿ  ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಪಿ.ನಾರಾಯಣ್, ಹಿಂದುಳಿದ ವರ್ಗದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಸುನೀಲ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಶಿವರಾಂ, ಯೋಗೀಶ್,ಪರಶುರಾಮ್, ಶಂಕರ್, ಜಗದೀಶ್, ಲೋಕೇಶ್, ರವಿಕಿರಣ್, ಕಾಂತರಾಜು, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.  
ಕೆರೆ ಸಮೀಪ ಹಸು ಕೊಂದ ಚಿರತೆ
ಮಧುಗಿರಿ: ರೈತನೋರ್ವ ತನ್ನ  ಜಮೀನಿನಲ್ಲಿ ಹಸು ಮೇಯಲು ಬಿಟ್ಟು ತನ್ನ ಪಾಡಿಗೆ ತಾನೂ ಜಮೀನಿನ ಕೆಲಸದಲ್ಲಿ ತೊಡಗಿದ್ದಾಗ ಏಕಾಏಕಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿ ಸಾಯಿಸಿರುವ ಘಟನೆ ಮಧುಗಿರಿ ಪಟ್ಟಣದ ಚೋಳೇನಹಳ್ಳಿ ಕೆರೆ  ಸಮೀಪ ನಡೆದಿದೆ. ಪಟ್ಟಣದ ನಿವಾಸಿ ಮೀನಪ್ಪ ಎಂಬ ರೈತನಿಗೆ ಸೇರಿದ ಈ  ಹಸು  ಎಂದು ಗುರುತಿಸಲಾಗಿದ್ದು, ಮೀನಪ್ಪ ತನ್ನ  ಜಮೀನಿನ ಕೆಲಸದಲ್ಲಿ ನಿರತನಾಗಿದ್ದಾಗ ಸೋಮವಾರ ಸಂಜೆ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ  ಚಿರತೆ ಏಕಾಏಕಿ  ದಾಳಿ  ಮಾಡಿ  ಸಾಯಿಸಿದೆ. ಮಾಲೀಕ ಮೀನಪ್ಪ ಚಿರತೆ  ಕಂಡು ಹೌಹಾರಿದ್ದಾನೆ. ತಕ್ಷಣ ಆಕ್ಕಪಕ್ಕದ ಜನರನ್ನು ಕೂಗಿ  ಕಷ್ಟಪಟ್ಟು ಚಿರತೆ ಓಡಿಸಿದ್ದಾನೆ.
ಗ್ರಾಪಂ ಕಚೇರಿ ಬಾಗಿಲು ಹಾಕಿ ರೈತರ ಪ್ರತಿಭಟನೆ
ಶಿರಾ: ತಾಲೂಕಿನ ಮದಲೂರು ಗ್ರಾ.ಪಂ. ನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಅವ್ಯವಹಾರಗಳು ನಡೆದಿದ್ದು, ಜಾಬ್‌ಕಾರ್ಡ್‌ಗೆ ಸಂಬಂಧಪಟ್ಟಂತೆ ಅಚಾತುರ್ಯಗಳು ನಡೆದಿದ್ದು ಇವುಗಳನ್ನು ತಡೆಗಟ್ಟಿ ನ್ಯಾಯ ಒದಗಿಸಿಕೊಡಬೇಕೆಂದು ಗ್ರಾ.ಪಂ. ಕಚೇರಿ ಬಾಗಿಲು ಹಾಕಿ ಸ್ಥಳಿಯ ರೈತರು ಪ್ರತಿಭಟನೆ ನಡೆಸಿದರು.
ಆಂಜನೇಯಸ್ವಾಮಿ ಜಯಂತಿ, ಬ್ರಹ್ಮರಥೋತ್ಸವ       
ಮಧುಗಿರಿ: ಶ್ರೀಕಲ್ಯಾಣ ಆಂಜನೇಯಸ್ವಾಮಿ ಜಯಂತಿ ಪ್ರಯುಕ್ತ  ಮತ್ತು ಬ್ರಹ್ಮರಥೋತ್ಸವದ ಕಾರಣದಿಂದಾಗಿ ಡಿ.13 ರಿಂದ 16ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ 4 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. 13ನೇ ಶುಕ್ರವಾರ ಬೆಳಿಗ್ಗೆ ವಿನಾಯಕ ಸ್ವಾಮಿ ಶ್ರೀಆಂಜನೇಯಸ್ವಾಮಿ ಮತ್ತು ನವಗ್ರಹಗಳಿಗೆ ಪಂಚಾಮೃತ ಅಭಿಷೇಕ, ವೇದ ಪರಾಯಣ, 9ಕ್ಕೆ ಸಹಸ್ರನಾಮ ಅರ್ಚನೆ, 11.30ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ 6. 30ಕ್ಕೆ ಸೇವಾ ಕರ್ತರಿಂದ  ಶ್ರೀಸೀತಾರಾಮರ ಕಲ್ಯಾಣೋತ್ಸವ ನಡೆಯಲಿದೆ.
14ರ ಶನಿವಾರ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆ 8ಕ್ಕೆ ವೇದ ಪಾರಾಯಣ, ಪಂಚಾಮೃತ ಅಭಿಷೇಕ, ನವಗ್ರಹ ಪೂಜೆ ಜಪ ಮಧ್ಯಾಹ್ನ 12-30ಕ್ಕೆ ಬ್ರಹ್ಮರಥೋತ್ಸವ ಹೂವಿನ ರಥದಲ್ಲಿ ಶ್ರೀಸೀತಾರಾಮ ಲಕ್ಷಣ ಆಂಜನೇಯಸ್ವಾಮಿ ಉತ್ಸವ ನಡೆಯಲಿದೆ. ಸಂಜೆ 6ಕ್ಕೆ ಮಹಿಳಾ ಸಮಾಜ ಮತ್ತು ವಾಸವಿ ಮಹಿಳಾ ಸಂಘದವರಿಂದ ಭಜನೆ ಕಾರ್ಯಕ್ರಮ, 7ಕ್ಕೆ ಉಯ್ಯಾಲೋತ್ಸವ, 15ರ ಭಾನುವಾರ ಪಂಚಾಮೃತ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ವಸಂತೋತ್ಸವ, ಸಂಜೆ 6ಕ್ಕೆ ಶಯನೋತ್ಸವ 16 ರಂದು ಮಹಾಮಂಗಳಾರತಿ ನಡೆಯಲಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವೀ ಶಸ್ತ್ರ ಚಿಕಿತ್ಸೆ
ಶಿರಾ: ಸರ್ಕಾರಿ ಆಸ್ಪತ್ರೆಗಳೆಂದು ಮೂಗು ಮುರಿಯುವ ಜನತೆಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಲ್ಲಿದ್ದ 4 ಕೆಜಿಗೂ ಹೆಚ್ಚು ತೂಕದ ಗಡ್ಡೆಯನ್ನು ಹೊರತೆಗೆದು ವೈದ್ಯರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಉಮಾದೇವಿ ಎಂಬುವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಅವರನ್ನು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ  ತಪಾಸಣೆ ನಡೆಸಿದಾಗ ಅವರ ಹೊಟ್ಟೆಯಲ್ಲಿ ಸುಮಾರು 4 ಕೆಜೆ ತೂಕದ ಗಡ್ಡೆ ಕಂಡುಬಂದಿದೆ.
ಸದರಿ ಗಡ್ಡೆಯನ್ನು ತೆಗೆಯಬೇಕೆಂದು ಬಯಸಿದ ಶಿರಾ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಮುಬಾರಕ್, ಡಾ.ಡಿ.ಎಂ.ಗೌಡ, ಡಾ.ಮಾಲಿನಿ, ಡಾ.ನರೇಂದ್ರ ಬಾಬು ಮತ್ತು ಸಿಬ್ಬಂದಿ ವರ್ಗ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊಟ್ಟೆಯಿಂದ ಹೊರ ತೆಗೆದಿದ್ದು ಉಮಾದೇವಿ ಅವರು ಆರೋಗ್ಯದಿಂದಿದ್ದಾರೆ.
ಪದಾಧಿಕಾರಿಗಳ ಆಯ್ಕೆ ಕುರಿತು ಪೂರ್ವಭಾವಿ ಸಭೆ  
ಮಧುಗಿರಿ: ಇಲ್ಲಿನ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಡಿ.11ರ ಬುಧವಾರ  ಸಂಜೆ 4 ಗಂಟೆಗೆ ಮಧುಗಿರಿ ತಾಲೂಕು ಸಂಗೊಳ್ಳಿ ರಾಯಣ್ಣ ಯುವ ಸೇನಾ ವತಿಯಿಂದ ಪದಾಧಿಕಾರಿಗಳ ಆಯ್ಕೆ ಕುರಿತು ಪೂರ್ವಭಾವಿ ಸಭೆ  ಕರೆಯಲಾಗಿದೆ ಎಂದು ಸಂಘದ ಪ್ರಾಧಾನ ಕಾರ್ಯದರ್ಶಿ ಕೆ.ಎಸ್.ಪ್ರವೀಣ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘಟನೆ ಸದೃಢಗೊಳಿಸಲು ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಅವರ ಆದೇಶದಂತೆ ಸಭೆ ಅಧ್ಯಕ್ಷತೆಯನ್ನು ತಾಲೂಕು ಘಟಕದ  ಸಂಸ್ಥಾಪಕ ಅಧ್ಯಕ್ಷ  ರಮೇಶ್ ಕನಕದಾಸ್ ವಹಿಸಲಿದ್ದಾರೆ.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement