ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಕ್ಕಳ ಸುಪ್ತ ಪ್ರತಿಭೆಗೆ ಪ್ರತಿಭಾ ಕಾರಂಜಿ ವೇದಿಕೆ

Vishwanath S
Updated On : 11 Dec 2013, 1:00 am

ತಿಪಟೂರು: ರಾಜ್ಯ ಸರ್ಕಾರ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಲವಾರು ಯೋಜನೆಗಳನ್ನು ಶಿಕ್ಷಣ ಇಲಾಖೆಯಲ್ಲಿ ರೂಪಿಸಿದೆ. ಅದರಲ್ಲಿ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡಲು ಮತ್ತು ಕಲೆ, ಸಾಹಿತ್ಯ, ನೃತ್ಯ, ನಾಟ್ಯ ಮತ್ತು ಸ್ಥಳೀಯ ಕಲೆಗಳ ಅಭಿವ್ಯಕ್ತಿ ಪಡಿಸುವುದಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳ ಪೋಷಕರ ಭಾಗವಹಿಸುವಿಕೆ ಕೊರತೆಯಿದ್ದು, ಮಕ್ಕಳ ಭಾಗವಹಿಸುವಿಕೆಗೆ ಪೋಷಕರು ಉತ್ತಮ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕೆಂದು ಶಾಸಕ ಕೆ. ಷಡಕ್ಷರಿ ಕರೆ ನೀಡಿದರು.
 ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವ್ಯಕ್ತಿಗೆ ಶಿಕ್ಷಣ ಎಷ್ಟು ಮುಖ್ಯವೋ ಸಂಸ್ಕಾರ, ಕಲೆ, ಸಾಹಿತ್ಯಿಕ ಚಟುವಟಿಕೆಗಳು ಮನಸ್ಸಿನ ಮೇಲೆ ಮುದ ನೀಡುತ್ತವೆ. ಮಕ್ಕಳು ಶಿಕ್ಷಣ ಪಡೆಯುವುದರ ಜೊತೆಗೆ ಕಲೆಗಳ ಉಳಿವು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕೆಂದು ಕರೆ ನೀಡಿದರು.
 ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ಪ್ರಭುಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಕ್ಷಣ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಮಕ್ಕಳ ಕ್ರಿಯಾತ್ಮಕ, ಭಾವನಾತ್ಮಕ, ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹಿಸಬೇಕು. ಸರ್ಕಾರದ ಈ ಕಾರ್ಯಕ್ರಮವು ಮಕ್ಕಳ ಪ್ರತಿಭೆಗಳನ್ನು ಬೆಳೆಸಲು ಸಹಕಾರಿಯಾಗುತ್ತವೆಂದರು.
 ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಎಸ್. ಗೀತಾ ಪ್ರತಿಭಾ ಕಾರಂಜಿಯ ಅಗತ್ಯತೆ, ಅವಶ್ಯಕತೆ, ಶಿಕ್ಷಣ ಮುಖ್ಯವಾಹಿನಿಗೆ ಹೇಗೆ ಸಹಕಾರಿಯಾಗುತ್ತದೆಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ರೇಣುಕಯ್ಯ, ಹಿರಿಯ ಸಹಶಿಕ್ಷಕಿ ಗಿರಿಜಮ್ಮ, ಈಶ್ವರಯ್ಯ, ಕೃಷ್ಣಪ್ಪ, ಎಚ್.ಬಿ. ಸಿದ್ದಯ್ಯ, ವನಜಾಕ್ಷಿ ಉಪಸ್ಥಿತರಿದ್ದರು.  ಕಾರ್ಯಕ್ರಮದ ಆಯೋಜನೆಯನ್ನು ಸಿ. ರಾಮಚಂದ್ರಪ್ಪ ನಿರ್ವಹಿಸಿದರು. ಪ್ರಭು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement