ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತ್ತೆ ಕಾಡಾನೆಗಳ ಹಾವಳಿ, ಬೆಳೆ ನಾಶ

Vishwanath S
Updated On : 11 Dec 2013, 12:59 pm

ಗುಬ್ಬಿ: ತಾಲೂಕಿನಲ್ಲಿ ಕಳೆದೆರಡು ತಿಂಗಳುಗಳಿಂದಲೂ ಗುಬ್ಬಿ ಮತ್ತು ತುಮಕೂರು ತಾಲೂಕುಗಳಲ್ಲಿ ವಾಸ್ತವ್ಯ ಹೂಡಿದ್ದ 6 ಕಾಡಾನೆಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೇ ಸಾಗಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಹರಸಾಹಸ ಪಡುತ್ತಿದ್ದರೂ ಮತ್ತೆ ಹಿಂತಿರುಗಿದ 6 ಕಾಡಾನೆಗಳು ಕಳೆದೆರಡು ದಿನಗಳ ಹಿಂದೆಯಷ್ಟೆ ಕಾಗ್ಗೆರೆಯಲ್ಲಿ ಕಾಣಿಸಿಕೊಂಡಿವೆ.
ಕಳೆದ ರಾತ್ರಿ ತಾಲೂಕಿನ ಎಂ.ಎಚ್. ಪಟ್ಣ ಕೆರೆಯಲ್ಲಿ ಬೀಡುಬಿಟ್ಟಿದ್ದು ಕೆರೆಯ ಸುತ್ತಮುತ್ತಲ ಬತ್ತದಗದ್ದೆ, ತೆಂಗಿನ ಗಿಡ, ಬಾಳೆಗಿಡ, ಸೇರಿದಂತೆ ರೈತರ ಬೆಳೆಗಳನ್ನು ತುಳಿದು ಹಾಳುಮಾಡಿವೆ.
ಕೆರೆಗಳಲ್ಲಿ ಹೇಮಾವತಿ ನೀರು ತುಂಬಿರುವ ಹಿನ್ನೆಲೆಯಲ್ಲಿ ನೀರಿನಲ್ಲಿ ವಿಹಾರ ನಡೆಸಿದ್ದು, ರಾತ್ರಿಯಾಗುತ್ತಿದ್ದಂತೆ ಕೆರೆಯ ಅಕ್ಕಪಕ್ಕದ ರೈತರ ಬೆಳೆಗಳನ್ನು ತಿಂದು ಹಾಳುಮಾಡತೊಡಗಿವೆ. ಆನೆಗಳು  ಸಂಚರಿಸುತ್ತಿರುವ ದಾರಿಯುದ್ದಕ್ಕು ಹಲವಾರು  ರೈತರ ಬೆಳೆಗಳನ್ನು ನಾಶಮಾಡಿ ಇದೀಗ ಎಂ.ಎಚ್.ಪಟ್ಟಣ ಕೆರೆಯಲ್ಲಿ ಬೀಡುಬಿಟ್ಟಿವೆ.
ಇಡೀ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಪರಣಮಿಸಿದ ಆನೆಗಳು ಪಥದಲ್ಲಿ ಸಾಗದೆ ಎಲ್ಲಂದರಲ್ಲಿ ಅಡ್ಡಾಡಿವೆ. ಮಾರ್ಗ ಮಧ್ಯೆ ಎಂ.ಹೆಚ್.ಪಟ್ಣ ಕೆರೆಯ ಪಕ್ಕದಲ್ಲಿಯೇ ಇರುವ ಕಳ್ಳಿಪಾಳ್ಯ ಗ್ರಾಮದ ರೈತ ಶಂಕರೇಗೌಡ ಅವರ ಕೊಯ್ಲು ಮಾಡುವ ಹಂತದಲ್ಲಿದ್ದ 2 ಎಕರೆ ಬತ್ತದ ಗದ್ದೆಯನ್ನು ಸಂಪೂರ್ಣ ಹಾಳು ಮಾಡಿದ್ದು ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಜತೆಯಲ್ಲಿ 20 ಬಾಳೆಗಿಡಗಳು, 10 ಅಡಕೆ ಗಿಡ ಸೇರಿದಂತೆ ಹಲಸು, ಸೌತೇಕಾಯಿ, ಟಮೋಟೋ ಗಿಡಗಳು, ಬದನೆಕಾಯಿ ಗಿಡಗಳನ್ನು ಹಾಳು ಮಾಡಿವೆ. ನಂತರ ಲೋಕೇಶ್ ಎಂಬ ರೈತನ 1 ಎಕರೆ ಕೊಯ್ಲು ಮಾಡುವ ಹಂತದ ಬತ್ತದ ಗದ್ದೆ ಹಾಳು ಮಾಡಿದೆ.
ಕಳೆದ ಬಾರಿ ಎಂ.ಹೆಚ್.ಪಟ್ಣ ಕೆರೆಗೆ ಬಂದಾಗಲೂ ಶಂಕರೇಗೌಡ ಎಂಬ ರೈತರ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ತುಳಿದು ಹಾಳು ಮಾಡಿದ್ದವು. ಕೆರೆಕಟ್ಟೆಯಲ್ಲಿ ಕಂಡ ನೀರು ಆನೆಗಳು ವಿಹಾರಕ್ಕೆ ಅನುವು ಮಾಡಿದಂತಾಗಿದೆ. ಮರಳಿ ಕಾಡಿನತ್ತ ಸಾಗಲು ತಡ ಮಾಡುತ್ತಿರುವ ಆನೆಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಅರಣ್ಯಧಾಮಕ್ಕೆ ಓಡಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ ವಲಯ ಅರಣ್ಯಾಧಿಕಾರಿ ಹರೀಶ್, ಒಂದು ವಾರದಿಂದ ಆನೆಗಳ ಚಲನವಲನವನ್ನು ಗಮನಿಸಲಾಗುತ್ತಿದೆ. ಆನೆಗಳು ಸಂಚರಿಸುವ ಗ್ರಾಮಗಳ ಜನತೆಗೆ ಸೂಕ್ತ ಎಚ್ಚರಿಕೆ ನೀಡಲಾಗುತ್ತಿದ್ದು ಯಾವುದೇ ರೀತಿಯ ಅಪಾಯ ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಮುಂಜಾಗ್ರತೆಯಾಗಿ ಕೈಗೊಳ್ಳಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement