ಕುಂಚದಲ್ಲಿ ಚಿತ್ರ ಮೂಡಿಸಿ ಪ್ರತಿಭಟನೆ
ತುಮಕೂರು: ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ಖಂಡಿಸಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನನೈಸೇಷನ್ ಮತ್ತು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಕಲಾವಿದರು ಚಿತ್ರರಚನೆ ಮಾಡಿದರು.
ನಗರದ ಖಾಸಗಿ ಬಸ್ ನಿಲ್ದಾಣ ಎದುರು ಕಲಾವಿದರು ಚಿತ್ರ ರಚನೆಯ ಮೂಲಕ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ), ರಾಜ್ಯ ಅಧ್ಯಕ್ಷ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವು ದೇಶದೆಲ್ಲೆಡೆ ಹೋರಾಟದ ಕಿಚ್ಚನ್ನು ಹರಡಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಲು ಕಾರಣವಾದ ಅಶ್ಲೀಲ ಸಿನಿಮಾ, ಸಾಹಿತ್ಯ, ಜಾಹಿರಾತು, ಪೋಸ್ಟರ್ಗಳನ್ನು ತಡೆಗಟ್ಟುವಲ್ಲಿ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.
ಯುವ ಸಮೂಹ ಎಚ್ಚೆತ್ತುಕೊಳ್ಳಲಿ: ಇದು ವಿದ್ಯಾರ್ಥಿ, ಯುವಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದರೆ ಇತಿಹಾಸದುದ್ದಕ್ಕೂ ವಿದ್ಯಾರ್ಥಿ-ಯುವಜನರೇ ಬದಲಾವಣೆಯ ಮುಂಚೂಣಿಯಲ್ಲಿರುವವರು. ಅವರಲ್ಲಿ ಉನ್ನತ ನೀತಿ, ಸಂಸ್ಕೃತಿ, ನೈತಿಕತೆ ಬೆಳೆಸುವ ಅಗತ್ಯವಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟವು ಮೂಲಭೂತವಾಗಿ ಪುರುಷ ಪ್ರಧಾನ ಮನೋಭಾವನೆಯ ವಿರುದ್ಧ ಮತ್ತು ಮಹಿಳೆಯರನ್ನು ಲೈಂಗಿಕ ವಸ್ತುವನ್ನಾಗಿ ನೋಡುವುದರ ವಿರುದ್ಧ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಲಾಕೃತಿ ರಚನೆಗೆ ಉದ್ಘಾಟನಾ ಮೂಲಕ ಹಿರಿಯ ಕಲಾವಿದ ಬಾಬುರಾವ್ ಚಾಲನೆ ನೀಡಿದರು.
ಹಿರಿಯ ಕಲಾವಿದರಾದ ಕಿಶೋರ್ ಕುಮಾರ್, ಪ್ರಭು ಹರಸೂರು, ಅಶೋಕ್, ಇನ್ನಿತರರು ತಮ್ಮ ಪ್ರತಿರೋಧಕ್ಕೆ ಕುಂಚದಿಂದ ಬಣ್ಣಗಳಲ್ಲಿ ಅಭಿವ್ಯಕ್ತಿ ನೀಡಿದರು. ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿ ಕಲಾವಿದರು ಹಾಗೂ ವಿದ್ಯಾರ್ಥಿ-ಯುವಜನರು ಭಾಗವಹಿಸಿದ್ದರು. ಪ್ರಗತಿಪರ ಚಿಂತಕ ದೊರೈರಾಜ್ಕಲಾಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಗೂ ಮುನ್ನ ಎಲ್ಲರೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮುಖಂಡೆ ಪ್ರತಿಭಾ ಕುಮಾರಿ ಅಕಾಲಿಕ ನಿಧನಕ್ಕೆ ಮೌನ ವಹಿಸಿ ಶೋಕ ವ್ಯಕ್ತಪಡಿಸಿದರು. ಅವರು 19ರ ಹರೆಯದಿಂದಲೇ ಶೋಷಿತ ಸಮುದಾಯದ ಜನರ ಪರವಾಗಿ ಮತ್ತು ಮಹಿಳೆಯರ ವಿಮೋಚನೆಗಾಗಿ ಅಹರ್ನಿಶಿ ದುಡಿದರು. ಸಾವಿನ ಕಡೆಗಳಿಗೆಯವರೆಗೂ ಹೋರಾಟದ ಅಗ್ನಿಕುಂಡದಲ್ಲಿ ಬೆಳೆದ ಅಪರೂಪದ ಮಹಿಳಾ ಹೋರಾಟಗಾರ್ತಿಯಾಗಿದ್ದರು. ಅವರ ಅಕಾಲಿಕ ಸಾವು ಕೇವಲ ಆಘಾತವನ್ನಷ್ಟೇ ಅಲ್ಲದೆ ಅಷ್ಟರಮಟ್ಟಿಗೆ ಶೂನ್ಯವನ್ನೂ ತಂದಿದೆ ಎಂದು ಆವಿಷ್ಕಾರದ ರಾಜ್ಯ ಸಮಿತಿಯ ಸದಸ್ಯ ಎಸ್.ಎನ್.ಸ್ವಾಮಿ ಶ್ರದ್ಧಾಂಜಲಿ ಅರ್ಪಿಸುತ್ತಾ ಹೇಳಿದರು.
ಎಐಎಂಎಸ್ಎಸ್ ಜಿಲ್ಲಾ ಸಂಘಟನಾಕಾರ ಕಾಮ್ರೇಡ್ ಎಂ.ವಿ.ಕಲ್ಯಾಣಿ ಅಧ್ಯಕ್ಷತೆ ವಹಿಸಿದ್ದರು.