ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾಪಂ ಇಒ ಭೇಟಿ: ಪರಿಶೀಲನೆ

Vishwanath S
Updated On : 14 Dec 2013, 12:34 pm

ಕುಣಿಗಲ್: ತಾಲೂಕಿನ ನಾಗರಸಂದ್ರ ಗ್ರಾಪಂನಲ್ಲಿ ನಡೆದಿರುವ ಬಸವ ವಸತಿ ಯೋಜನೆ ಅಕ್ರಮಗಳ ಹಿನ್ನೆಲೆಯಲ್ಲಿ ಗುರುವಾರ ತಾಪಂ ಇಒ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ನಿರ್ಮಿಸಿರುವ ಸ್ಥಳದ ದಾಖಲೆ ಸಂಗ್ರಹಿಸಿದ್ದಾರೆ. ನಾಗಸಂದ್ರ ಗ್ರಾಪಂ ವ್ಯಾಪ್ಕಿಯಲ್ಲಿ ಬಸವವಸತಿ ಯೋಜನೆಯಡಿಯಲ್ಲಿ 2010-11ನೇ ಸಾಲಿನಲ್ಲಿ ವಿವಿಧ ಗ್ರಾಮಗಳಲ್ಲಿ ಗ್ರಾಪಂ ಸಿಬ್ಬಂದಿಗಳು ಶಾಮೀಲಾಗಿ ಅಕ್ರಮ ನಡೆಸಿರುವ ಬಗ್ಗೆ ಗ್ರಾಪಂ ಸದಸ್ಯರು ಆರೋಪ ಮಾಡಿದ ಹಿನ್ನೆಲೆಯಲ್ಲಿ, ಹೊಗರೆಗೆರೆ ಗ್ರಾಮದಲ್ಲಿ ಫಲಾನುಭವಿಯೊಬ್ಬರ ಹೆಸರಲ್ಲಿ ಗ್ರಾಪಂ ಸಿಬ್ಬಂದಿಗಳು ಕೆಲ ಜನಪ್ರತಿನಿಧಿಗಳೊಂದಿಗೆ ಶಾಮೀಲಾಗಿ ಯೋಜನೆ ಹಣ ನಗದೀಕರಿಸಿದ್ದು, ಪತ್ರಿಕೆಯಲ್ಲಿ ಈ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಗ್ರಾಪಂ ಸಿಬ್ಬಂದಿಗಳು, ನಗದೀಕರಿಸಿದ್ದ ಹಣವನ್ನು ಪುನಃ ಬ್ಯಾಂಕಿಗೆ ಕಟ್ಟಿದ್ದರು. ಈ ಬಗ್ಗೆ ಗ್ರಾಪಂ ಸದಸ್ಯರಾದ ತಿಮ್ಮಪ್ಪ ಇತರರು ತಾಪಂ ಇಒ ಅವರಿಗೆ ವಿವರವಾದ ದೂರು ನೀಡಿದ ಮೇರೆಗೆ, ಗುರುವಾರ ತಾಪಂ ಇಒ ಶಂಕರಪ್ಪ , ನಾಗಸಂದ್ರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಬಸವ ವಸತಿ ಯೋಜನೆಯಡಿಯಲ್ಲಿನ ವಿವಿಧ ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಇಂದಿನಿಂದ ದೇಗುಲ ಪ್ರಾರಂಭೋತ್ಸವ
ತಿಪಟೂರು: ನಗರದ ನೆಹರು ನಗರದಲ್ಲಿ ಸತ್ಯಗಣಪತಿ ಸ್ವಾಮಿ  ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಪ್ರಾರಂಭೋತ್ಸವ ಮಹೋತ್ಸವ ಇಂದು ಮತ್ತು ನಾಳೆ ನಡೆಯಲಿದೆ. 14ರಂದು ಗಣಪತಿ ಪೂಜೆ, ಪಂಚಕಲಶ, ನವಗ್ರಹ, ನವದುರ್ಗ, ಕಲಶಗಳ ಸ್ಥಾಪನೆ, ರುದ್ರಹೋಮ, ದುರ್ಗಾಹೋಮ ಸೇರಿದಂತೆ ಮತ್ತಿತರೆ ಕೈಂಕರ್ಯ ನಡೆಯಲಿವೆ. 15ರಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರು ಪರದೇಶಿಕೇಂದ್ರ ಸ್ವಾಮೀಜಿ, ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಕಂಚಾಘಟ್ಟ  ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಬಿಲ್ವ ವೃಕ್ಷಕ್ಕೆ ದೀಕ್ಷಾ ಸಂಸ್ಕಾರ ಕಾರ್ಯಕ್ರಮಗಳು ನಡೆಯಲಿವೆ. ಇದೇ ವೇಳೆ ನೆಹರು ನಗರ ಹಿತರಕ್ಷಣಾ ಸಮಿತಿ ತನ್ನ ಶಾಖೆ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ಶಾಸಕ ಕೆ.ಷಡಕ್ಷರಿ ನೆರವೇರಿಸಲಿದ್ದಾರೆ. ಕೆಜೆಪಿ ಮುಖಂಡ ಲೋಕೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.  ಮಾಜಿ ಶಾಸಕರಾದ ಬಿ.ಸಿ.ನಾಗೇಶ್, ಬಿ.ನಂಜಾಮರಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿವಾಕರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಹನುಮ ಜಯಂತಿ
ಹುಳಿಯಾರು: ಮಾರುತಿನಗರದ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವಾಲಯ ಜಿರ್ಣೋದ್ದಾರ ಸಮಿತಿ ಹಾಗೂ ಭಕ್ತಾಧಿಗಳಿಂದ ಹನುಮ ಜಯಂತಿ ಮಹೋತ್ಸವ  ಶನಿವಾರ ನಡೆಯಲಿದೆ. ಬೆಳಗ್ಗೆ ಅಭಿಷೇಕ ಹೋಮ,ಮಹಾ ಮಂಗಳಾರತಿ ಸಲ್ಲಿಸಿ, ನಂತರ 11 ಗಂಟೆಗೆ ಆಂಜನೇಯಸ್ವಾಮಿ ಮಹಾ ರಥೋತ್ಸವ ಜರುಗಲಿದೆ. ಭಕ್ತಾಧಿಗಳಿಗೆ ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ಹಾಗೂ ಸಂಜೆ 5.30 ರಿಂದ ಸ್ವಾಮಿಯವರ ರಾಜಬೀದಿ ಉತ್ಸವ ನಡೆಯಲಿದೆ. ಉತ್ಸವದಲ್ಲಿ ದಾವಣಗೆರೆಯ ಬಸವಕಲಾ ತಂಡದವರಿಂದ ನಂದಿ ಧ್ವಜಕುಣಿತ, ಬೆಳ್ತಂಗಡಿ ಗಿರಿಧರ ಶೆಟ್ಟಿ ಬೊಂಬೆ ಬಳಗದವರಿಂದ ಹಾಲಕ್ಕಿ ಕುಣಿತ, ಹುಲಿವೇಷ, ಮಂಡ್ಯದ ಸವಿತಾ ಮಹಿಳಾ ಕಲಾತಂಡದಿಂದ ಮಹಿಳಾ ಪೂಜಾ ಕುಣಿತ, ಹುಲಿಹಳ್ಳಿ ಬಸವಜ್ಯೋತಿ ಕಲಾತಂಡದವರಿಂದ  ಮಹಿಳಾ ವೀರಗಾಸೆ, ಮೈಸೂರು-ಚಾಮರಾಜನಗರ ಕಲಾತಂಡದವರಿಂದ ತಮಟೆ, ನಗಾರಿ ವಾದ್ಯ, ಬೆಂಗಳೂರಿನ ಅಣ್ಣಮ್ಮನ ತಮಟೆ ವಾದ್ಯ, ಸಾಗರದ ಐಸಿರಿ ಕಲಾತಂಡದವರಿಂದ ಮಹಿಳಾ ಡೊಳ್ಳುಕುಣಿತ,ಮಹಿಳಾ ಕೋಲಾಟ, ಲಂಬಾಣಿ ನೃತ್ಯ, ಹುಳಿಯಾರು ತಂಡದವರಿಂದ ನಾದಸ್ವರ ಸೇರಿದಂತೆ ಉತ್ಸವದುದ್ದಕ್ಕೂ ಅಮೋಘ ಮದ್ದಿನ ಪ್ರದರ್ಶನವಿ ರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
16,17ರಂದು ವಿಚಾರ ಸಂಕಿರಣ
ತುಮಕೂರು: ಚಿತ್ರದುರ್ಗ ನಗರದಲ್ಲಿ ಇದೇ ತಿಂಗಳ 16 ಮತ್ತು 17 ರಂದು ಕಾಡುಗೊಲ್ಲ ಜನಾಂಗದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗೊಲ್ಲರ ಹಿತರಕ್ಷಣ ಸಮಿತಿ ಕಾರ್ಯದರ್ಶಿ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ತಿಳಿಸಿದ್ದಾರೆ. ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಪ್ರಥಮ ಬಾರಿಗೆ ಬುಡಕಟ್ಟು ಸಂಪ್ರದಾಯವುಳ್ಳ ಕಾಡು ಗೊಲ್ಲರ ಬಗ್ಗೆ ವಿಚಾರ ಸಂಕಿರಣವನ್ನು ಡಿ. ದೇವರಾಜು ಅರಸು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿರುವುದ ಸಂತೋಷ ತಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕಾಡುಗೊಲ್ಲ ಜನಾಂಗ ವಿಚಾರ ಸಂಕಿರಣದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.  ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಮಾಗೋಡು ಕೆ. ನಾಗರಾಜು, ಸಮಿತಿ ಜಿಲ್ಲಾಧ್ಯಕ್ಷ ಹಾರೋಗೆರೆ ಕೆ. ಮಾರಣ್ಣ, ಜಿಲ್ಲಾ ಉಪಾಧ್ಯಕ್ಷ ಹುಣಸೆಕಟ್ಟೆ ದೊಡ್‌ಡಯ್ಯ, ಶಿರಾ ತಾಲೂಕು ಅಧ್ಯಕ್ಷ ಗೌಡಗೆರೆ ಚಂದ್ರಶೇಖರ್, ಶಿರಾ ಅಲೆಮಾರಿ ಬ್ಯಾಂಕ್ ಕಾರ್ಯದರ್ಶಿ ಕೆ. ಶಿವಲಿಂಗಮೂರ್ತಿ ಮತ್ತಿತರರು ಇದ್ದರು.
ಯುವಜನತೆಯಿಂದ ಮೂಲ ವಿಜ್ಞಾನ ನಿರ್ಲಕ್ಷ್ಯ: ಯತಿರಾಜು
ಕುಣಿಗಲ್: ಯುವಜನತೆ, ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ಕಡೆಗೆ ಹೆಚ್ಚಿನ ಗಮನಹರಿಸಿ, ತಂತ್ರಜ್ಞಾನ ಕ್ಷೇತ್ರದ ಕಡೆಗೆ ಹೋಗುತ್ತಿದ್ದು, ಮೂಲವಿಜ್ಞಾನವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ತುಮಕೂರು ವಿಜ್ಞಾನ ಕೇಂದ್ರದ ಸಹಾಯಕ ಕಾರ್ಯದರ್ಶಿ ಸಿ. ಯತಿರಾಜು ಕಳವಳ ವ್ಯಕ್ತಪಡಿಸಿದರು.  ಇತ್ತಿಚೆಗೆ ಪಟ್ಟಣದ ಮಹಾತ್ಮಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,  ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ತುಮಕೂರು ವಿಜ್ಞಾನ ಶಿಕ್ಷಣ ಸಂಸ್ಥೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ  ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬಯೋಸ್ಪಾಕರ್ ಕಾರ್ಯಕ್ರಮ-2013ರಲ್ಲಿ ಪಾಲ್ಗೊಂಡು ಪ್ರಾಸ್ತಾವಿಕ ಭಾಷಣ ಮಾಡಿ,ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಲ್ಲಿ ಮೂಲವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಈ ವಿಷಯದ ಬಗ್ಗೆ ಆಸಕ್ತಿ ಮತ್ತು ಗಮನಹರಿಸುವಂತೆ ಮಾಡಲು ಅವುಗಳಲ್ಲೇ ಸಂಶೋಧನೆ ಮಾಡುವ ವಿಜ್ಞಾನಿಗಳೊಂದಿಗೆ ನೇರಸಂವಾದ ಏರ್ಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನದ ಬಗ್ಗೆ ಆಸಕ್ತಿಯುಂಟು ಮಾಡಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದೆಂದರು.  ಡಿ.ಎಂ. ನಂಜುಂಡಪ್ಪನವರ ವರದಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ವೈಜ್ಞಾನಿಕ ಅರಿವಿನಲ್ಲಿ ಹಿಂದುಳಿದಿರುವ 4 ತಾಲೂಕುಗಳಲ್ಲಿ ಕುಣಿಗಲ್ ಕೂಡ ಒಂದಾಗಿರುವುದರಿಂದ, ಇಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.  ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಯ್ಯ ಕಾರ್ಯಕ್ರಮ ಉದ್ಘಾಟಿಸಿದ್ದು, ಬಿ.ಜಿ.ಎಸ್. ಕಾಲೇಜಿನ ಪ್ರಾಚಾರ್ಯ ಸಿ.ಚೌಡಪ್ಪ, ಸಂಪನ್ಮೂಲ ವ್ಯಕ್ತಿ ಡಾ. ಎ.ಮೌಲ್ಯಶ್ರೀ, ಪ್ರಭಾರ ಪ್ರಾಚಾರ್ಯ ಎಸ್. ಕುಮಾರಯ್ಯ   ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಹನುಮ ಜಯಂತಿ
ತಿಪಟೂರು: ವ್ಯಾಸರಾಯ ಪ್ರತಿಷ್ಠಾಪಿತ ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಸ್ವಾಮಿಯವರಿಗೆ ವಿಶೇಷಾ ಪೂಜಾ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸ್ವಾಮಿಯವರಿಗೆ 1108 ವಡೆ ಹಾರ ಸಮರ್ಪಣೆ ನಡೆಯಲಿದ್ದು, ಪವಮಾನ ಸೂಕ್ತ ಪಾರಾಯಣ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿರುತ್ತದೆ.
ಪರೀಕ್ಷೆ ಮುಂದೂಡಿಕೆ
ತುಮಕೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಡಿ.11 ರ ತುಮಕೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಇದೇ ತಿಂಗಳ 22 ರಂದು ನಡೆಸಲಾಗುವುದು. ಈ ಹಿಂದೆ ನಿಗದಿಪಡಿಸಿದ ವೇಳೆಯಲ್ಲಿಯೇ ಸದರಿ ಪರೀಕ್ಷೆಗಳು ನಡೆಯಲಿವೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
ರಾಗಿ ಬಣವೆಗೆ ಬೆಂಕಿ
ಗುಬ್ಬಿ: ಆಕಸ್ಮಿಕ ಬೆಂಕಿ ತಗುಲಿ ಸುಮಾರು 50 ಸಾವಿರ ರುಪಾಯಿ ಬೆಲೆಯ ರಾಗಿ ಹುಲ್ಲಿನ ಬಣವೆ ಸಂಪೂರ್ಣ ಭಸ್ಮವಾದ ಘಟನೆ ಶುಕ್ರವಾರ ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಮಯ್ಯ ಹಾಗೂ ಮುನಿಸ್ವಾಮಿ ತಮ್ಮ ಹೊಲದಲ್ಲಿ ಬಣವೆ ಹಾಕಿ ರಾಗಿ ಹುಲ್ಲು ಶೇಖರಿಸಿದ್ದರು.ಆಕಸ್ಮಿಕ ಬೆಂಕಿಗೆ ಸಂಪೂರ್ಣ ರಾಗಿ ಹುಲ್ಲು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಬೆಂಕಿ ನಂದಿಸಿತು. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement