ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಕ್ಷ ನಿಷ್ಠರಿಗೆ ಟಿಕೆಟ್ ನೀಡಿ

Vishwanath S
Updated On : 14 Dec 2013, 12:32 pm

ಕ.ಪ್ರ.ವಾರ್ತೆ ,  ತುಮಕೂರು ,  ಡಿ. 13
ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಏಕಾಏಕಿ ಪಕ್ಷಕ್ಕೆ ಬಂದು ಅಭ್ಯರ್ಥಿಯಾದವರ ಪರ ಕೂಲಿ ಆಳುಗಳಂತೆ ದುಡಿದು ಗೆಲ್ಲಿಸಿದ್ದಾಗಿದೆ. ಅವರ ವರ್ತನೆಯಿಂದೆ ಸಾಕಾಗಿ ಹೋಗಿದೆ. ಬೇಕಾದಷ್ಟು ಅನುಭವಿಸಿದ್ದೇವೆ. ಇನ್ನು ಮುಂದೆ ಹೈಕಮಾಂಡ್ ಸೇರಿದಂತೆ, ಯಾರೇ ಹೇಳಿದರೂ ಸರಿ ಕೂಲಿ ಆಳುಗಳಂತೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್‌ಗೌಡ ಗುಡುಗಿದರು.
ಈ ಸಂಬಂಧ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮ ಕೂರು ಸಂಸದ ಜಿ.ಎಸ್.ಬಸವರಾಜ್ ವಿರುದ್ಧ ಸೂಚ್ಯವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.   
ಕಳೆದ ಲೋಕಸಭಾ ಚುನಾವಣೆಯ ಸಂದರ್ಭ, ಸನ್ನಿವೇಶ ಹಾಗಿತ್ತು. ಅಂದು ಬಿಜೆಪಿಗೆ ಏಕಾಏಕಿ ಬಂದ ಅಭ್ಯರ್ಥಿಯ ಪರ ಕೂಲಿ ಆಳುಗಳಂತೆ ದುಡಿದೆವು. ಅವರೀಗ ಪಕ್ಷದಲ್ಲಿಲ್ಲ. ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬರಲಿ, ಬಿಡಲಿ. ಕೆಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿ, ಬಿಡಲಿ, ವಿಲೀನವಾಗಲಿ, ಬಿಡಲಿ, ಅದಕ್ಕೂ ನಮಗೂ ಸಂಬಂಧವಿಲ್ಲ. ತುಮಕೂರು ಲೋಕಸಭಾ ಅಭ್ಯರ್ಥಿ ಆಯ್ಕೆ ಜಿಲ್ಲಾ ಮುಖಂಡರಿಗೆ ಬಿಟ್ಟದ್ದು. ನಾವು ತೀರ್ಮಾನ ಮಾಡಿ ಕಳುಹಿಸಿದ ಹೆಸರುಗಳಲ್ಲಿ ಒಂದನ್ನು ಹೈಕಮಾಂಡ್ ಸೂಚಿಸಲಿದೆ. ಪಕ್ಷದ ಮೂಲ ನಿವಾಸಿಗಳಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.
ಬಿಎಸ್‌ವೈ ಜತೆ ಆಪ್ತತೆ ಇದ್ದದು ನಿಜ: ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲಿದ್ದ ವೇಳೆ ತಂದೆ ಎಂದಿದ್ದು, ಅವರ ನೀಲಿಕಣ್ಣಿನ ಹುಡುಗನಾಗಿದ್ದು ನಿಜ. ಆದರೆ ಬಿಎಸ್‌ವೈ ಪಕ್ಷ ಬಿಟ್ಟ ನಂತರ ಅವರಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅದೆಲ್ಲಾ ಮುಗಿದ ಅಧ್ಯಾಯ ಎಂದು ಪ್ರಶ್ನೆಯೊಂದಕ್ಕೆ ಸುರೇಶ್‌ಗೌಡ ಉತ್ತರಿಸಿದರು.
ಆಯ್ಕೆ ಪ್ರಕ್ರಿಯೆ ಶುರು: ತುಮಕೂರು ಲೋಕಸಭಾ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ನಮ್ಮ ಜಿಲ್ಲೆಗೆ ನಾವೇ ಹೈಕಮಾಂಡ್. ಆದ್ಯತೆ ಮೇರೆಗೆ 4 ಮಂದಿಯನ್ನು ತುಮಕೂರು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಲು ಹೈಕಮಾಂಡ್‌ಗೆ ಪಟ್ಟಿ ಕಳುಹಿಸಲಾಗುವುದು. ತುಮಕೂರು ನಗರದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ, ತಿಪಟೂರಿನ ಮಾಜಿ ಶಾಸಕ ಬಿ.ಸಿ. ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕಿರಣ್ ಕುಮಾರ್ ಅವರನ್ನು ಕ್ರಮವಾಗಿ ಅಭ್ಯರ್ಥಿಗಳೆಂದು ಹೆಸರಿಸಲಾಗಿದೆ. ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ. ತಾವು  ಅಭ್ಯರ್ಥಿಯಲ್ಲ. ಹೈಕಮಾಂಡ್ ಸೂಚಿಸಿದರೆ,  ಅಂತಹ ಸಂದರ್ಭ ಒದಗಿ ಬಂದರೆ ನೋಡೋಣ ಎಂದು ಸುರೇಶ್‌ಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರವಾಸ ಪಟ್ಟಿ: ಡಿ. 16 ರೊಳಗೆ ಬಿಜೆಪಿ ಬೂತ್ ಮಟ್ಟದ ಪ್ರವಾಸ ಪಟ್ಟಿ ಸಿದ್ದಪಡಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 2531 ಬೂತ್‌ಗಳಿವೆ. ಡಿ.20 ರಿಂದ 22 ರವರೆಗೆ 50 ಸಾವಿರ ಸಕ್ರಿಯ ಕಾರ್ಯಕರ್ತರು ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಡಿ. 24 ರಂದು ಜಿಪಂ ವ್ಯಾಪ್ತಿಯ ಶಕ್ತಿ ಕೇಂದ್ರಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಡಿ. 25 ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಆಚರಿಸಲಾಗುವುದು. ಜನವರಿ 1 ರಿಂದ ಬಿಜೆಪಿ ವತಿಯಿಂದ ಬೂತ್‌ಮಟ್ಟದಲ್ಲಿ ಹಣ ಸಂಗ್ರಹ ಅಭಿಯಾನ ಆರಂಭಿಸಲಾಗುವುದು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ಮಾಜಿ ಸಚಿವ ಸೊಗಡು ಶಿವಣ್ಣ, ತಿಪಟೂರು ಮಾಜಿ ಶಾಸಕ ಬಿ.ಸಿ. ನಾಗೇಶ್, ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement