ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪೊಲೀಸರ ಕಿರುಕುಳ ತಪ್ಪಿಸಲು ಒತ್ತಾಯ

Vishwanath S
Updated On : 14 Dec 2013, 12:34 pm

ಶ್ರೀನಿವಾಸಪುರ: ತಾಲೂಕಿನ ರಾಯಲ್ಪಾಡು ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಈ ಠಾಣೆ ಸಬ್ ಇನ್ಸ್‌ಪೆಕ್ಟರ್ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇಲ್ಲಿನ ಸಬ್ ಇನ್ಸ್‌ಪೆಕ್ಟರ್ ಮತ್ತು 4 ಜನ ಪೊಲೀಸರು ಆಂಧ್ರಪ್ರದೇಶದ ಕಡೆಯಿಂದ ಬರುವ ಎಲ್ಲಾ ಲಾರಿ ಮತ್ತು ಟೆಂಪೋಗಳನ್ನು ನಿಲ್ಲಿಸಿ ದಾಖಲೆಗಳೆಲ್ಲವೂ ಸರಿಯಿದ್ದರೂ ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಪೊಲೀಸರ ಈ ನಡವಳಿಕೆಯಿಂದಾಗಿ ಸಾರ್ವಜನಿಕರು ಭಯ ಬೀತರಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳು ಇತ್ತ ಗಮನ ಹರಿಸಿ ಪೊಲೀಸರಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಿದ್ದಾರೆ.
ಇಂದು ಹನುಮ ಅಲ್ಲಲ್ಲಿ ಜಯಂತಿ
ಕೋಲಾರ: ಹನುಮ ಜಯಂತಿ ಪ್ರಯುಕ್ತ ಡಿ.14 ರಂದು ಬೆಳಗ್ಗೆ 7.30 ಗಂಟೆಗೆ ನಗರದ ಪಾಲಸಂದ್ರ ಲೇಔಟ್ ಪಶುವೈದ್ಯ ಆವರಣದಲ್ಲಿರುವ ವರದಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. 10 ಗಂಟೆಗೆ ಮಹಾಮಂಗಳಾರತಿ ಹಾಗೂ 11.30ಕ್ಕೆ ಉತ್ಸವ ಮೂರ್ತಿಯ ಮೆರವಣಿಗೆ ಏರ್ಪಡಿಸಲಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ನಿಲ್ದಾಣದ ಬಳಿ ಬಸ್ ನಿಲ್ಲಿಸಲು ಮನವಿ
ಶ್ರೀನಿವಾಸಪುರ: ನೂತನವಾಗಿ ಪ್ರಾರಂಭಗೊಂಡಿರುವ ರೈಲು ಪ್ರಯಾಣ ದರ ಕಡಿಮೆಯಿದ್ದರೂ ಪಟ್ಟಣದ ರೈಲ್ವೆ ನಿಲ್ದಾಣದಿಂದ ಮನೆಗೆ ತೆರಳಲು  ಆಟೋಗಳಿಗೆ ಅಧಿಕ ಹಣ ತೆರಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸಲು ರೈಲ್ವೆ ನಿಲ್ದಾಣದ ಬಳಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ರೈಲ್ವೆ ನಿಲ್ದಾಣ ಊರಾಚೆ ಇದ್ದು ರೈಲಿನಲ್ಲಿ ಬರುವ ಪ್ರಯಾಣಿಕರು ಮನೆ ತಲುಪಲು 30 ರು.ಗಳನ್ನು ಆಟೋಗಳಿಗೆ ನೀಡಬೇಕಿದೆ. ಆದ್ದರಿಂದ ಕೋಲಾರ - ಬೆಂಗಳೂರು ಕಡೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಕಡ್ಡಾಯವಾಗಿ ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಲು ಅನುವು ಮಾಡಬೇಕೆಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಲ್ಲಿ ಸಾರ್ವಜನಿಕರು ಈ ಸಂಬಂಧ  ಮನವಿ ಮಾಡಿದ್ದಾರೆ.
ಗುಬ್ಬಿ ತಾಲೂಕು ಕಸಾಪ ವತಿಯಿಂದ ಸಾಹಿತ್ಯ ಸಂಜೆ  ಕಾರ್ಯಕ್ರಮ
ಗುಬ್ಬಿ ನಾಡು-ನುಡಿ ಸಂಸ್ಕತಿ-ಪರಂಪರೆ  ಉಳಿಸಿ ಬೆಳೆಸುವತ್ತ ಇಂದಿನ ಯುವ ಜನಾಂಗ ಪ್ರಾಮಾಣಿಕ ಪ್ರಯತ್ನಮಾಡಬೇಕೆಂದು ಜಿಲ್ಲಾ  ಕಸಾಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್ ಕಿವಿಮಾತು ಹೇಳಿದರು. ತಾಲೂಕಿನ ಕಡಬಾ ಹೋಬಳಿ ಬೆನಕನಗೊಂದಿ ಗ್ರಾಮದಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಉಪನ್ಯಾಸ ನೀಡಿದ ಶಿವಪ್ಪ ಮಾದಾಪುರ ಮಾತನಾಡಿ, ಕನ್ನಡ ಭಾಷೆಗೆ ಮಹತ್ವದ ಸ್ಥಾನವಿದ್ದು ಪ್ರತಿಯೊಬ್ಬ ಕನ್ನಡಿಗರೂ ನಮ್ಮ ಭಾಷೆ, ನೆಲ, ಜಲ,ಸಂಸ್ಕೃತಿ  ಉಳಿಸಿ ಬೆಳೆಸುವತ್ತ ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಹಿತ್ಯ ಮತ್ತು ಸಂಸ್ಕತಿಯ ಕಂಪು ಹಸುರಾಗಿದೆ ಅದನ್ನು ಉಳಿಸಿ ಬೆಳೆಸುವಂತಹ ಕೆಲಸ ಇಂದಿನ ಯುವಜನಾಂಗದ ಮೇಲಿದೆ ಎಂದರು.  ತಾಲೂಕು ಕಸಾಪ ಕಾರ್ಯದರ್ಶಿ ಜಿ.ಗೋವಿಂದಯ್ಯ ಮಾತನಾಡಿ, ನಮ್ಮ ಭಾಷೆಯನ್ನು ಕನ್ನಡಿಗರಾದ ನಾವು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮುಂದಾಗಬೇಕೆಂದರು. ಸ್ಥಳೀಯ ಮುಖಂಡರಾದ ಹುಚ್ಚೇಗೌಡ, ಸಣ್ಣರಂಗಯ್ಯ, ಅರ್ಜುನಯ್ಯ, ನಾಗರಾಜು, ತಿಮ್ಮಯ್ಯ, ಲಕ್ಕೇಗೌಡ, ಸಿದ್ದೇಗೌಡ, ಬಿ.ಆರ್.ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜ.6 ರಿಂದ ಆರ್‌ಟಿಇ  ಪ್ರವೇಶ ಪ್ರಕ್ರಿಯೆ
ಮಧುಗಿರಿ:  ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಖಾಸಗಿ ಅನುದಾನ ರಹಿತ ಅನುದಾನಿತ ಶಾಲೆಗಳಲ್ಲಿ ಮುಂದಿನ ಜ.6 ರಿಂದ ಪ್ರವೇಶ ಪ್ರಕ್ರಿಯೆಯ ಪ್ರಾರಂಭವಾಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ರಾಮಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಕ್ಷಣ ಹಕ್ಕು ಅಧಿನಿಯಮ ಪ್ರಕಾರ 14-15ನೇ ಸಾಲಿಗೆ 1ನೇ ತರಗತಿ ಅಥವಾ  ಪೂರ್ವ ಪ್ರಾಥಮಿಕ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಶಿಕ್ಷಣ ಹಕ್ಕು ಕಾಯ್ದೆಯಡಿ ಶೇ.25ರಷ್ಟು ಸೀಟುಗಳಿಗೆ ದಾಖಲಾತಿ ಕೋರಿ ಪೋಷಕರ ವೇಳಾ ಪಟ್ಟಿ ಅನುಸಾರ ಅರ್ಜಿ ಸಲ್ಲಿಸಬಹುದು. ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿರುವ ಅಂದರೆ ವಾರ್ಷಿಕ 1 ಲಕ್ಷ ರು.ಆದಾಯ ಮಿತಿಯೊಳಗಿನ ಕುಟುಂಬದ ಮಕ್ಕಳನ್ನು ಮೊದಲು ಪರಿಗಣಿಸಲಾಗುತ್ತದೆ.ನಂತರ ಇನ್ನೂ ಸೀಟುಗಳ ಉಳಿಕೆ ಇದ್ದಲ್ಲಿ 1 ಲಕ್ಷ ರು ನಿಂದ 3.5 ಲಕ್ಷ ರು.ವರೆಗೆ ಆದಾಯ ಇರುವವರನ್ನು ಪರಿಗಣಿಸಲಾಗುತ್ತದೆ.ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಆರ್.ಟಿ.ಇ.ಅಡಿ ದಾಖಾಲಾತಿ ಪಡೆಯಲು ಅರ್ಜಿ ಸಲ್ಲಿಸಬಹುದು.ಆರ್.ಟಿ.ಇ.ಅಡಿಯಲ್ಲಿ ದಾಖಾಲಾತಿ ಪಡೆದ ಮಕ್ಕಳ ಖರ್ಚು-ವೆಚ್ಚಗಳನ್ನು ಸರ್ಕಾರವೇ ಭರಿಸುತ್ತದೆ.ನಿಗಧಿ ಪಡಿಸಲಾದ ಅರ್ಜಿ ನಮೊನೆಗಳು ಈ ಕಚೇರಿಯಲ್ಲಿ ಹಾಗೂ ಸಂಬಂಧಪಟ್ಟ ಶಾಲೆಗಳಲ್ಲಿಯೂ ಲಭ್ಯವಿರುತ್ತದೆ.ಅಲ್ಲದೆ ವೆಬಬ್ಸೈಟಟ್ನಿಂದ ಉಚಿತವಾಗಿ ಡೌನ್ಲೋಡ್ಮಾಡಿಕೊಳ್ಳಬಹುದು.ಜ.6 ರಂದು ಈ ಕಚೇರಿಯಲ್ಲಿ ಪ್ರತಿ ಶಾಲಯಲ್ಲಿ ಲಭ್ಯವಿರುವ ಶೇ.25ರಷ್ಟು ಸೀಟುಗಳನ್ನು ಪ್ರಕಟಿಸಲಾಗುತ್ತದೆ.ಶಾಲಾ ದಾಖಾಲಾತಿ ಕೋರಿ ಪೋಷಕರು ಜ.7,8 ರೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದು ಮಾ.3 ರಿಂದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿವೆ ಅರ್ಹರು ಇದರ ಸದುಪಯೋಗ ಪಡದು ಕೊಳ್ಳುವಂತೆ ವೈ.ಎನ್.ರಾಮಕೃಷ್ಣಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.
5ರಂದೇ ವೇತನ ನೀಡಲು ಒತ್ತಾಯ
ಕೋಲಾರ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಇನ್ನು ಮುಂದೆ ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನ ಬಿಡುಗಡೆ ಮಾಡುವಂತೆ ಬಂಗಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡರು ಜಿಪಂ ಅಧ್ಯಕ್ಷರಿಗೆ ಮನವಿ ಪತ್ರ ಮೂಲಕ ಒತ್ತಾಯಿಸಿದ್ದಾರೆ. ತಿಂಗಳ ಮೊದಲ ದಿನವೇ ಸರ್ಕಾರಿ ನೌಕರರಿಗೆ ವೇತನ ನೀಡಬೇಕೆಂಬ ಸರ್ಕಾರದ ನಿಯಮವಿದ್ದರೂ ನವೆಂಬರ್ ತಿಂಗಳ ವೇತನ ಇನ್ನೂ ಬಿಡುಗಡೆವಾಗಿಲ್ಲವಾದ್ದರಿಂದ ಶಿಕ್ಷಕರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಸಂಘದ ಪದಾಧಿಕಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಬಂಗಾರಪೇಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಹರಿನಾರಾಯಣ, ಪತ್ರಿಕಾ ಕಾರ್ಯದರ್ಶಿ ಎಂ.ಆರ್.ದೇವರಾಜ್, ಮಾಜಿ ಅಧ್ಯಕ್ಷ ಬಿ.ಆರ್.ಚಿನ್ನಪ್ಪರೆಡ್ಡಿ, ಪ್ರತಿನಿಧಿಗಳಾದ ಆರ್.ಸಂಜೀವಪ್ಪ, ಎಂ.ಆರ್.ಆಂಜನೇಯಗೌಡ, ಎ.ರಮೇಶ್, ಎಂ.ಆರ್.ಮಾರ್ಕೊಂಡಪ್ಪ ಇದ್ದರು.
ಆರೋಗ್ಯ ಶಿಬಿರ
ಕೋಲಾರ: ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ದೇವರಾಜ್ ಅರಸ್ ವೈದ್ಯಕೀಯ ಮಹಾ ವಿದ್ಯಾಲಯವು ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಡಿ.14 ರಂದು ಶನಿವಾರ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಎಲ್ಲಾ ತಜ್ಞರು ಭಾಗವಹಿಸಲಿದ್ದು ಕಾಯಿಲೆಗಳಿಗೆ ಸಂಬಂಧಪಟ್ಟ ತಜ್ಞರಿಂದ ಚಿಕಿತ್ಸೆ ನೀಡಲಿದ್ದಾರೆಂದು ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೃಷ್ಣಮೂರ್ತಿ ಮತ್ತು ಎನ್.ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಇಂದು ಕಾರ್ಯಾಗಾರ
ಕೋಲಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಡಿ.14 ರಂದು ಬೆಳಗ್ಗೆ 11 ಗಂಟೆಗೆ ಒಂದು ದಿನದ ಕುಟುಂಬ ಕಲ್ಯಾಣ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಡಾ.ಫಯಾಜ್ ಖಾನ್ ತಿಳಿಸಿದ್ದಾರೆ. ಡಾ.ಎನ್.ರಾಜಕುಮಾರ್, ಡಾ.ಸುಧಾ, ಡಾ.ಜಗನ್ನಾಥ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement