ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರ ಕಿರುಕುಳ; ಆರೋಪ
ತುಮಕೂರು: ಶಿರಾ ಕೋಮುಗಲಭೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಬಿಜೆಪಿ ಕಾರ್ಯಕರ್ತರಿಗೆ, ಅಮಾಯಕರಿಗೆ ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ತುಮಕೂರಿನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಪಾತ್ರ ಇದರಲ್ಲಿ ಪ್ರಮುಖವಾಗಿದೆ ಎಂದು ದೂರಿದರು. ಪೊಲೀಸರ ಈ ಧೋರಣೆಯನ್ನು ಖಂಡಿಸಿ ಮುಂದಿನ ಸೋಮವಾರ ಬಿಜೆಪಿ ಪತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಉಪಸ್ಥಿತರಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿ ಜೈಲ್ ಭರೋಗೆ ಸಿದ್ಧವಿದೆ ಎಂದು ಎಚ್ಚರಿಕೆ ನೀಡಿದರು.
ಸರ್ದಾರ್ ವಲ್ಲಭ ಭಾಯ್ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ವತಿಯಿಂದ ಅವರ ಪುಣ್ಯತಿಥಿ ಅಂಗವಾಗಿ ಡಿ. 15 ರಂದು ಏಕತಾ ಓಟ ಮತ್ತು ಏಕತಾ ನಡಿಗೆಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲೂ ಹಮ್ಮಿಕೊಳ್ಳಲಾಗಿದ್ದು, ತುಮಕೂರು ವಿವಿ ಮುಂಭಾಗದಿಂದ ಟೌನ್‌ಹಾಲ್ ವೃತ್ತದವರೆಗೂ ಅಂದು ಬೆಳಗ್ಗೆ 9ಕ್ಕೆ ಓಟ ಏರ್ಪಡಿಸಲಾಗಿದೆ. 12 ವರ್ಷ ಮೀರಿದ ಎಲ್ಲರೂ ಈ ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.
ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಾಣಕ್ಕಾಗಿ ದೇಶಾದ್ಯಂತ ಗ್ರಾಮಗಳಿಂದ 5 ರಿಂದ 10 ಗ್ರಾಂ ಮಣ್ಣು ಹಾಗೂ ರೈತರು ಉಪಯೋಗಿಸಿದ ಕಬ್ಬಿಣದ ತುಣುಕುಗಳನ್ನು ಸಂಗ್ರಹಿಸಿ ಗುಜರಾತ್‌ಗೆ ಕಳುಹಿಸಲಾಗುವುದು. ಇದರಿಂದ ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಲಾಗುವುದು ಎಂದು ನಂದೀಶ್ ತಿಳಿಸಿದರು.