'ಮಕ್ಕಳ ಪ್ರತಿಭೆ ಹೊರತರುವ ಕೆಲಸವಾಗಲಿ'
ಮಧುಗಿರಿ: ಪಠ್ಯೇತರ ಚಟುವಟಿಕೆ ಜೊತೆಗೆ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಸಾಣೆ ಹಿಡಿದು ದೇಶದ ಉತ್ತಮ ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕಕ್ಷರ ಮೇಲಿದೆ ಎಂದು ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾ.ಶಿ ಇಲಾಖೆ ಮತ್ತು ವಿವಿಧ ಇಲಾಖೆಗಳಿಂದ ಏರ್ಪಟಾಗಿದ್ದ ಕಸಬಾ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಿಡಿಪಿಐ ಟಿ.ಎಸ್.ಆಂಜನಪ್ಪ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಸರಿ ದಾರಿಗೆ ತರುವ ಮೂಲಕ ಪೋಷಕರು ಮತ್ತು ಶಿಕ್ಷಕರು ಶ್ರಮ ವಹಿಸಬೇಕು. ಶಿಕ್ಷಕರು ಮಾಡಿದ ಪಾಠ ಪ್ರವಚನಗಳನ್ನು ಅಂದಂದೆ ಪರಿಶೀಲಿಸಬೇಕು. ಅದಕ್ಕೆ ಪೂರಕವಾಗಿ ಪೋಷಕರು ಮಗು ಶಾಲೆಯಿಂದ ಮನೆಗೆ ಬಂದಾಗ ಪಾಠದ ಬಗ್ಗೆ ಗಮನ ಹರಿಸಿ ಮನನ ಮಾಡಿದಾಗ ಅದು ಮಗುವಿನ ಮನಸ್ಸಿನಲ್ಲಿ ಉಳಿದು ಜ್ಞಾಪನ ಶಕ್ತಿ ಹೆಚ್ಚುತ್ತದೆ ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬದುಕು ಹಸನು ಮಾಡಲು ಪೂರಕವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಾದ ಮಂಜುನಾಥ್, ರಾಮಾಂಜಿನರೆಡ್ಡಿ, ಶಿವಕುಮಾರ್, ಕೆ.ಎನ್.ಹನುಮಂತರಾಯಪ್ಪ, ದೈಹಿಕ ಶಿಕ್ಷಕ ಗುರುರಾಜ್, ಅಶ್ವತ್ಥಪ್ಪ ಮತ್ತಿತರರು ಉಪಸ್ಥಿತರಿದ್ದರು.