ಮರಳು ಮಾಫಿಯಾಗೆ ಶಿರಾ ಬಲಿ: ಸೊಗಡು
ತುಮಕೂರು: ಶಿರಾದಲ್ಲಿ ನಡೆದಿರುವ ವಿಪರೀತ ಮರಳು ದಂಧೆ ಹಿನ್ನೆಲೆಯಲ್ಲಿ ಅಂತರ್ಜಲ ಬತ್ತುವ ಆತಂಕ ಎದುರಾಗಿದ್ದು, ಜನತೆ ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆತಂಕ ವ್ಯಕ್ತಪಡಿಸಿದರು.
ಅವರು ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರ ಸ್ವಕ್ಷೇತ್ರದಲ್ಲಿ ಈ ಮರಳು ದಂಧೆ ನಡೆದಿರುವುದು ಆಘಾತಕಾರಿ. ಈಗಾಗಲೇ ಮರಳು ದಂಧೆಯಿಂದಾಗಿ ಶಿರಾದಲ್ಲಿ ರೈತರ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಮೊದಲೂರು ಕೆರೆ ಸೇರಿದಂತೆ ಇತರೆ ಸುಮಾರು 40 ಕ್ಕೂ ಹೆಚ್ಚು ಕಡೆ ಮರಳು ದಂಧೆ ನಿರಂತರವಾಗಿ ಹಗಲು, ರಾತ್ರಿ ನಡೆದಿದೆ. ಬೆಂಗಳೂರಿಗೆ ಮರಳು ಸರಬರಾಜು ರಾಜಾ-ರೋಷವಾಗಿ ನಡೆದಿದೆ. ಶೀಘ್ರದಲ್ಲೇ ಶಿರಾ ಹಾಳಾಗಿ ಹೋಗಲಿದೆ. ಜನತೆ ಭಾರೀ ಸಮಸ್ಯೆ ಎದುರಿಸಲಿದ್ದಾರೆ ಎಂದು ಸೊಗಡು ಭವಿಷ್ಯ ನುಡಿದರು. ಮರಳು ದಂಧೆ ನಿರಂತರವಾಗಿ ನಡೆದಿರುವ 6 ಹೋಬಳಿಗಳ 40 ಹಳ್ಳಿಗಳ ವಿವರವನ್ನು ಸೊಗಡು ಶಿವಣ್ಣ ನೀಡಿದರು. ಆ ಭಾಗದ ಜನತೆ ಮರಳು ದಂಧೆ ಹಿನ್ನೆಲೆಯಲ್ಲಿ ತಮ್ಮ ಮುಂದೆ ಕಣ್ಣೀರು ಹಾಕಿದರು ಎಂದು ಸೊಗಡು ತಿಳಿಸಿದರು.
ಶಿರಾ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿಯ ಅಮಾಯಕ ಕಾರ್ಯಕರ್ತರನ್ನು ಗುರಿ ಮಾಡಿರುವುದು ಖಂಡನೀಯ. 23 ಮಂದಿ ವಿರುದ್ದ ಕೇಸು ದಾಖಲಿಸಲಾಗಿದೆ. ಜಿಲ್ಲಾ ಪೊಲೀಸರ ವಿರುದ್ದ ಜೈಲ್ ಭರೋ ಚಳುವಳಿ ನಡೆಸಲು ಹಿಂಜರಿಯಲ್ಲ ಎಂದು ಸೊಗಡು ಎಚ್ಚರಿಕೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಬೇಕು. ಜತೆಗೆ ಮರಳು ದಂಧೆಯನ್ನು ಕೂಡಲೇ ನಿಲ್ಲಿಸಿ, ಶಿರಾ ಜನತೆಯ ಹಿತಾಸಕ್ತಿ ಕಾಪಾಡಬೇಕು ಎಂದು ಸೊಗಡು ಒತ್ತಾಯಿಸಿದರು.