ಕುಡಿದ ಮತ್ತಿನಲ್ಲಿ ದಾಂದಲೆ ನಡೆಸುತ್ತಿದ್ದವ ಕೊಲೆ
ಕುಣಿಗಲ್: ಕುಡಿದ ಮತ್ತಿನಲ್ಲಿ ದಿನವೂ ದಾಂಧಲೆ ನಡೆಸುತ್ತಿದ್ದ ವ್ಯಕ್ತಿಯ ವರ್ತನೆಗೆ ಬೆಸತ್ತ ಸೋದರಸಂಬಧಿ, ಆತನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಅಮೃತೂರು ಪೊಲೀಸ್ ಠಾಣೆಯ ಎಚ್.ಬಿ.ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಎಸ್.ಆರ್.ಚಂದ್ರಶೇಖರ (30) ಕೊಲೆಯಾದ ವ್ಯಕ್ತಿಯಾಗಿದ್ದು, ಈತ ತನ್ನ ಸೋದರ ಸಂಬಂಧಿ ಮಹಾಲಿಂಗನ ಮನೆಗೆ ತೆರಳಿ, ದಿನವೂ ಕುಡಿದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿ, ದಾಂಧಲೆ ನಡೆಸುತ್ತಿದ್ದ. ಎಂದಿನಂತೆ ಶನಿವಾರದಂದು ತೆರಳಿ ದಾಂಧಲೆ ನಡೆಸಿದ. ಬೇಸತ್ತ ಮಹಾಲಿಂಗ, ಹಾರೆಕೋಲಿನಿಂದ ಬಡಿದಿದ್ದರಿಂದ ಚಂದ್ರಶೇಖರ್ ಸ್ಥಳದಲ್ಲೆ ಮೃತಪಟ್ಟಿದ್ದು, ಗಾಬರಿಗೊಂಡ ಮಹಾಲಿಂಗ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮೃತನ ತಂದೆ ರಾಮಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಅಮೃತೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಎಎಸ್ಪಿ ಕಾರ್ತೀಕ್ ರೆಡ್ಡಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾಹನ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು
ಶಿರಾ: ಟೈರ್ ಬರ್ಸ್ಟ್ ಆದ ಕಾರಣ ಟಾಟಾ ಗೂಡ್ಸ್ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿಕೊಂಡು ಟೈರನ್ನು ರಿಪೇರಿ ಮಾಡಿಸಿಕೊಂಡು ಜಾಕನ್ನು ಆಟೋದಲ್ಲಿ ಇಟ್ಟುಕೊಳ್ಳುತ್ತಿದ್ದಾಗ ಶಿರಾ ಕಡೆಯಿಂದ ತುಮಕೂರು ಕಡೆಗೆ ಅತಿ ವೇಗವಾಗಿ ಬಂದ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಟಾಟಾ ಗೂಡ್ಸ್ ವಾಹನದ ಚಾಲಕ ಮತ್ತು ಮೆಕ್ಯಾನಿಕ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟವರೆಂದರೆ ಚಾಲಕ ನಾಗರಾಜು ಮತ್ತು ಮೆಕ್ಯಾನಿಕ್ ಸಯದ್ ಅಫ್ಸರ್ ಪಾಷ ಎಂದು ತಿಳಿದು ಬಂದಿದ್ದು, ಕ್ಯಾಂಟರ್ ವಾಹನದ ಚಾಲಕ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ ಎಂದು ಮಹಮದ್ ಮಲ್ ಎಂಬುವರು ಕಳ್ಳಂಬೆಳ್ಳ ಠಾಣೆಗೆ ದೂರು ನೀಡಿದ್ದಾರೆ. ಸದರಿ ದೂರನ್ನು ದಾಖಲಿಸಿ ಕಳ್ಳಂಬೆಳ್ಳ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಂದರ್ಬಾಹರ್ ಬಂಧನ
ಶಿರಾ: ತಾಲೂಕಿನ ಗುಮ್ಮನಹಳ್ಳಿ ಗೇಟ್ನಲ್ಲಿರುವ ರಾಜೇಶ್ ಎಂಬುವರ ಇಟ್ಟಿಗೆ ಫ್ಯಾಕ್ಟರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ನಿರತರಾಗಿದ್ದವರ ಮೇಲೆ ದಾಳಿ ನಡೆಸಿ, 4 ಜನ ಆರೋಪಿಗಳನ್ನು ಬಂಧಿಸಿ, ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ನಗದು ಹಣ, 2 ದ್ವಿಚಕ್ರ ವಾಹನ ಮತ್ತು ಜೂಜಾಟಕ್ಕೆ ಉಪಯೋಗಿಸಿದ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಣೆಯಾಗಿದ್ದ 1 ವರ್ಷದ ಹಸುಗೂಸು ಶವವಾಗಿ ಪತ್ತೆ
ತಿಪಟೂರು: ತಾಲೂಕಿನ ಕಸಬಾ ಹೋಬಳಿ ಈರಲಗೆರೆಯಲ್ಲಿ ಡಿ.9ರಂದು ಕಾಣೆಯಾಗಿದ್ದ 1ವರ್ಷದ ಹಸುಗೂಸು ಶನಿವಾರ ಶವವಾಗಿ ಅದೇ ಗ್ರಾಮದಲ್ಲಿ ಪತ್ತೆಯಾಗಿದೆ. ಗ್ರಾಮದ ಗೇಟ್ನಲ್ಲಿರುವ ಮನೆಯಲ್ಲಿ ವಾಸವಿದ್ದ ಸತೀಶ್ ಮತ್ತು ಹೆಂಡತಿ ಕೆಂಪದೇವಮ್ಮ ಎಂಬ ದಂಪತಿ 1 ವರ್ಷ 1ತಿಂಗಳ ಮಗುವೊಂದು ಡಿ.9ರಂದು ಮನೆ ಮುಂಭಾಗದಿಂದಲೇ ಕಾಣೆಯಾಗಿದ್ದ ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿತ್ತು. ಈ ಬಗ್ಗೆ 2-3 ದಿನಗಳಿಂದ ಪೊಲೀಸರು ಪತ್ತೆಕಾರ್ಯ ಚುರುಕುಗೊಳಿಸಿದ್ದರು. ಆದರೆ ಇಂದು ಬೆಳಿಗ್ಗೆ ಅವರ ಮನೆಯ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮಗುವಿನ ಶವವನ್ನು ಪರೀಕ್ಷೆಗೆ ತುಮಕೂರಿಗೆ ತೆಗೆದುಕೊಂಡು ಹೋಗಲಾಗಿದ್ದು ಕೊಲೆ ಪ್ರಕರಣವನ್ನು ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸ್ಥಳದಲ್ಲಿ ಎ.ಎಸ್.ಪಿ ಕಾರ್ತಿಕ್ ರೆಡ್ಡಿ, ಸಿಪಿಐ ಬಾಲಚಂದ್ರೇಗೌಡ ಹಾಜರಿದ್ದು, ಪ್ರಕರಣವನ್ನು ಆದಷ್ಟು ಬೇಗ ಭೇದಿಸಲಾಗುವುದೆಂದು ತಿಳಿಸಿದ್ದಾರೆ.
ಅತ್ಯಾಚಾರ ಯತ್ನ: ಆರೋಪಿಗಳ ಬಂಧನ
ಹೆಬ್ಬೂರು: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳನ್ನು ಬಂಧಿಸಿರುವ ಘಟನೆ ಹೊನ್ನುಡಿಕೆ ಸಮೀಪದ ವೀರನಾಯಕನಹಳ್ಳಿಯಲ್ಲಿ ನಡೆದಿದೆ. ಬಹಿರ್ದೆಸೆಗೆ ಹೋಗಿದ್ದ ಮಹಿಳೆ ಮೇಲೆ ಪುಟ್ಟರಾಜು ಮತ್ತು ರವಿಕುಮಾರ್ ಎಂಬುವರು ಅತ್ಯಾಚಾರವೆಸಗಲು ವಿಫಲ ಪ್ರಯತ್ನ ನಡೆಸಿದ್ದರು. ಈ ಸಂಬಂಧ ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.