ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭೆ ಅನಾವರಣ
ತುಮಕೂರು: ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆ ಅನಾವರಣ ಆಗುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೋಮು ಭಾಸ್ಕರಾಚಾರ್ ಅಭಿಪ್ರಾಯಪಟ್ಟರು. ಅವರು ವೀರಸೌಧ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮಲ್ಲಿ ಸಾಹಿತ್ಯ ಪ್ರಜ್ಞೆ ಮೂಡುವಂತಹ ಕೆಲಸಗಳು ಆಗಬೇಕಾಗಿದೆ ಎಂದರು. ನಾಡು ನುಡಿಯನ್ನು ಬಿಂಬಿಸುವ ಕಾರ್ಯಕ್ರಮವನ್ನು ಹೆಚ್ಚೆಚ್ಚು ಆಯೋಜಿಸಬೇಕಾದ ಅನಿವಾರ್ಯತೆ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ವಿದ್ಯಾರ್ಥಿಗಳಿಗೆ ನಾಡು, ನುಡಿಯ ಬಗ್ಗೆ, ದೇಶಭಕ್ತಿ ಗೀತೆಗಳನ್ನು ಕಲಿಸಿ ಅವುಗಳನ್ನು ಒಂದೇ ವೇದಿಕೆಯಲ್ಲಿ ಪ್ರಚುರಪಡಿಸುವುದು ನಿಜಕ್ಕೂ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿಕ್ಕಮಕ್ಕಳ ವಯೋವಾನಕ್ಕೆ ತಕ್ಕ ಹಾಡುಗಳನ್ನು ಹಾಡಿಸುವ ಪ್ರಯತ್ನ ಇದಾಗಿದ್ದು ಇದೊಂದು ಸಾರ್ಥಕ ಕೆಲಸ ಎಂದು ಬಣ್ಣಿಸಿದರು. ದೇಶಭಕ್ತಿ ಗೀತೆ, ನಾಡಗೀತೆ ಗಾಯನ ಪ್ರೇಕ್ಷಕರಿಗೆ ಮುದ ತಂದುಕೊಟ್ಟಿದೆ ಎಂದರು.
ಬಿಜೆಪಿಗೆ ಕೆಜೆಪಿ ಅರ್ಜಿ ಹಾಕಿಲ್ಲ: ಜ್ಯೋತಿ ಗಣೇಶ್
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಅಂತ ಕೆಜೆಪಿ ವತಿಯಿಂದ ಯಾರೂ ಅರ್ಜಿ ಹಾಕಿಲ್ಲ. ಗೋಗರೆದಿಲ್ಲ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ನಗರ ಅಭ್ಯರ್ಥಿಯಾಗಿ ಸುಮಾರು 40 ಸಾವಿರ ಮತ ಪಡೆದ ಜ್ಯೋತಿ ಗಣೇಶ್ ನೇರ ವಾಗ್ದಾಳಿ ನಡೆಸಿದ್ದಾರೆ. ಅವರು ತುಮಕೂರಿನಲ್ಲಿ ಕೆಜೆಪಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ಗೌಡ, ಕೆಜೆಪಿ ಕುರಿತು ಕೇವಲವಾಗಿ ಮಾತನಾಡಿರುವುದಕ್ಕೆ ಮೇಲಿನಂತೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಜೆಪಿ ಎಂದರೆ ಏನು ಎಂಬುದನ್ನು ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೋರಿಸಿಯಾಗಿದೆ ಎಂದು ಮಾರ್ಮಿಕವಾಗಿ ಜ್ಯೋತಿ ಗಣೇಶ್ ನುಡಿದರು. ತುಮಕೂರು ಲೋಕಸಭಾ ಕ್ಷೇತಕ್ಕೆ ಸಂಬಂಧಿಸಿದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ ಎಂದು ಜ್ಯೋತಿ ಗಣೇಶ್ ನೆನಪಿಸಿದ್ದಾರೆ.
ಕನ್ನಡ ಪರ ಸಂಘಟನೆಗಳ ಕೊಡುಗೆ ಅಪಾರ
ತುಮಕೂರು: ಕನ್ನಡ ನಾಡು, ನುಡಿ ರಕ್ಷಣೆ ಮಾಡುವಲ್ಲಿ ಕನ್ನಡ ಪರ ಸಂಘಟನೆಗಳ ಕೊಡುಗೆ ಅಪಾರ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ಶ್ಲಾಘಿಸಿದರು. ಅವರು ನಗರದ ಲಿಂಗಾಪುರದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತ್ಯ, ಸಂಸ್ಕೃತಿ, ಕಲೆ ಜತೆಗೆ ನಾಡಿನ ಗಡಿ ಭಾಗಗಳಲ್ಲಿ ಉಂಟಾಗುವಂತಹ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವಲ್ಲಿ ಕನ್ನಡ ಪರ ಸಂಘಟನೆಗಳು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು. ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ರಾಜ್ಯದ ಹೊರಗೂ ಮತ್ತು ಒಳಗೂ ಹೋರಾಟ ಮಾಡುವಂತಹ ಪರಿಸ್ಥಿತಿ ಒದಗಿ ಬಂದಿದೆ. ಗಡಿ ಭಾಗಗಳಲ್ಲಿ ನೆರೆಯ ರಾಜ್ಯಗಳ ಕಾಟ ಒಂದೆಡೆಯಾದರೆ ರಾಜ್ಯದ ಒಳಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕನ್ನಡ ಭಾಷೆ, ಕನ್ನಡ ಸಾಂಸ್ಕೃತಿಕ ವಲಯ ನಲಗುವಂತಾಗಿದೆ ಎಂದು ವಿಷಾದಿಸಿದರು.
ಆಧುನಿಕ ತಂತ್ರಜ್ಞಾನ ಉಪನ್ಯಾಸ
ತಿಪಟೂರು: ನಗರದ ಕಲ್ಪತರು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನ ಕುರಿತ ಉಪನ್ಯಾಸ ಕಾರ್ಯಕ್ರಮಕ್ಕೆ ತುಮಕೂರಿನ ನಾಸಾ ವಿಜ್ಞಾನಿ ಡಾ.ನಜೀರ್ ಅಹಮದ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಆಧುನಿಕ ತಂತ್ರಜ್ಞಾನದಿಂದ ಹೆಚ್ಚಿನ ಜ್ಞಾನ ವೃದ್ಧಿಸಿಕೊಳ್ಳುವ ಬಗ್ಗೆ ಹಾಗೂ ತುಮಕೂರಿನಿಂದ ನಾಸಾದವರೆಗಿನ ಪಯಣದ ಬಗ್ಗೆ ಉಪನ್ಯಾಸ ನೀಡಿದರು.
ಮಕ್ಕಳ ಬೆಳವಣಿಗೆಗೆ ಒತ್ತಡ ಬಾಧಕ: ಡಾ.ಜಯದೇವಪ್ಪ
ತಿಪಟೂರು: ಮಕ್ಕಳ ಶಿಕ್ಷಣ ವ್ಯವಸ್ಥೆ, ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಮುಕ್ತವಾಗಿರಬೇಕು. ಇಲ್ಲವಾದರೆ ಗುಲಾಮಗಿರಿ ಶಿಕ್ಷಣದಿಂದಾಗಿ ಅಮೆರಿಕ ಅಥವಾ ಇಂಗ್ಲೆಂಡ್ ಮತ್ತೆ ನಮ್ಮ ಆಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯದೇವಪ್ಪ ತಿಳಿಸಿದರು. ಪಟ್ಟಣದ ವಿವೇಕಾನಂದ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಯಲು ಸೀಮೆ ಸಾಂಸ್ಕೃತಿಕ ಸಂಘದಿಂದ ಏರ್ಪಡಿಸಿದ್ದ ಹೇಮಾವತಿ ವಾಣಿ ಪತ್ರಿಕೆ ಬಿಡುಗಡೆ ಮತ್ತು ಮಕ್ಕಳ ಶಿಕ್ಷಣದಲ್ಲಿ ಒತ್ತಡ ಎಂಬ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಭಾವನೆ ಬಿಟ್ಟು ಸಮಾಜಮುಖಿ ಜೀವನ ನಡೆಸುವಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆಂದರು. ತುಮಕೂರು ವಿ.ವಿಯ ಪ್ರಾಧ್ಯಾಪಕ ಡಾ.ಶ್ರೀಪಾದಭಟ್ ಉಪನ್ಯಾಸ ನೀಡಿ ಪ್ರತಿಯೊಬ್ಬ ಪೋಷಕರು ತಮ್ಮ ಮಗು ಎಂಜಿನಿಯರಿಂಗ್, ವೈದ್ಯ ಆಗಬೇಕೆಂದು ಇಚ್ಛಿಸಬಾರದು ಎಂದರು.
ಶಿರಾ: ಆಂಜನೇಯ ಸ್ವಾಮಿ ವಿಗ್ರಹ ಪತ್ತೆ
ಶಿರಾ: ನಗರದ ಟೌನ್ ಕೋ-ಆಪರೇಟೀವ್ ಬ್ಯಾಂಕ್ ಎದುರಿನ ಪೊಲೀಸ್ ವಸತಿ ನಿಲಯ ಕಾಂಪೌಂಡ್ನಲ್ಲಿರುವ ಬಿಲ್ವಪತ್ರೆ ಗಣಪತಿ ದೇವಸ್ಥಾನ ಹಿಂದೆ ಯಾರೋ ಪುರಾತನ ಕಾಲದ ಕಪ್ಪು ಕಲ್ಲಿನಿಂದ ಕೆತ್ತಿರುವ ಶ್ರೀ ಆಂಜನೇಯ ಸ್ವಾಮಿ ವಿಗ್ರಹವನ್ನು ತಂದು ಹಾಕಿ ಹೋಗಿದ್ದಾರೆ. ದೇವಸ್ಥಾನದ ಆರ್ಚಕರು ಹನುಮ ಜಯಂತಿ ಪ್ರಯುಕ್ತ ದೇವಸ್ಥಾನಕ್ಕೆ ಪೂಜೆಗೆಂದು ಹೋದಾಗ ಈ ವಿಗ್ರಹ ಕಂಡು ಬಂದಿದ್ದು ಈ ವಿಗ್ರಹವನ್ನು ಯಾರೋ ರಾತ್ರಿ ಹೊತ್ತು ತಂದು ಹಾಕಿದ್ದಾರೆ. ಸ್ಥಳಕ್ಕೆ ಕಾಳಿದಾಸ ನಗರದ ಮುಖಂಡರಾದ ಸುರೇಶ್ ಅವರು ಭೇಟಿ ನೀಡಿ ಸದರಿ ವಿಗ್ರಹವಿರುವ ಸ್ಥಳದಲ್ಲಿ ದೇವಸ್ಥಾನ ಅಭಿವೃದ್ಧಿ ಮಾಡಲಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.
ಪಾವಗಡ: ನಾಳೆ ಜೆಡಿಎಸ್ ಬೃಹತ್ ಪ್ರತಿಭಟನೆ
ಪಾವಗಡ: ಶೇಂಗಾ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ನದಿ ಮೂಲದ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಹಾಗೂ ತಾಲೂಕಿನ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ನೇತೃತ್ವದಲ್ಲಿ ಡಿ.16ರಂದು ಬೆಳಿಗ್ಗೆ 11ಗಂಟೆಗೆ ಸರ್ಕಾರದ ಧೋರಣೆ ವಿರುದ್ಧ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಾ.ಜೆಡಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದ ಇತರೆ ಜಿಲ್ಲೆಗಳ ಕಬ್ಬು, ಬತ್ತ ಸೇರಿದಂತೆ ಅಲೂಗಡ್ಡೆ ಇತರೆ ಬೆಳೆಗಳಿಗೆ ಸರ್ಕಾರ ರೈತರಿಗೆ ನೀಡುವಂತ ಬೆಂಬಲ ಬೆಲೆ ತಾಲೂಕಿನ ರೈತರ ಜೀವನಾಡಿಯಾದ ಕಡಲೇ ಕಾಯಿ ಬೆಳೆಗೂ ಬೆಂಬಲ ಬೆಲೆ ನೀಡಿ ಪ್ರತಿವರ್ಷ ಬೆಳೆ ನಷ್ಟಕ್ಕೀಡಾಗಿ ಸಂಕಷ್ಟ ಅನುಭವಿಸುವ ರೈತರಿಗೆ ಅನುಕೂಲ ಕಲ್ಪಿಸಬೇಕು. ಫ್ಲೋರೈಡ್ಯುಕ್ತ ನೀರಿನ ಸೇವನೆಯಿಂದ ಅನಾರೋಗ್ಯಗಳಿಗೆ ತುತ್ತಾಗಿ ಈಗಾಗಲೇ ತಾಲೂಕಿನ ಜನತೆ ತತ್ತರಿಸಿದ್ದು ನದಿ ಮೂಲದ ಕುಡಿಯುವ ನೀರು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ತಂದೆ - ತಾಯಿ ಇರೋ ಮಕ್ಕಳು ನಾವು : ಲೋಕೇಶ್ವರ್
ತುಮಕೂರು: ನಾವು ತಬ್ಬಲಿ ಮಕ್ಕಳಲ್ಲ. ತಂದೆ - ತಾಯಿ ಇರೋ ಮಕ್ಕಳು. ಇದು ಬಿಜೆಪಿಯವರಿಗೆ ನೆನಪಿರಲಿ. ಬೇಕಾ ಬಿಟ್ಟಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಕೆಜೆಪಿ ಮುಖಂಡ ಲೋಕೇಶ್ವರ್ ತಾಕೀತು ಮಾಡಿದ್ದಾರೆ. ಅವರು ತುಮಕೂರಿನಲ್ಲಿ ಕೆಜೆಪಿ ವತಿಯಿಂದ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗ ಬಿಜೆಪಿ-ಕೆಜೆಪಿ ವಿಲೀನ ಕುರಿತಂತೆ ಮಾತು ಕತೆ ನಡೆಯುತ್ತಿರೋದು ಗೊತ್ತಿರುವ ಸಂಗತಿ. ಇಂತಹ ಸಂದರ್ಭದಲ್ಲಿ, ಜಿಲ್ಲಾ ಬಿಜೆಪಿ ಮುಖಂಡರು, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ಗೌಡ ಕೆಜೆಪಿ ಲೆಕ್ಕಕ್ಕಿಲ್ಲ ಎಂಬಂತೆ ಮಾತನಾಡಿರುವುದು ಖಂಡನೀಯ. ಕೆಜೆಪಿ ತುಮಕೂರು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಗಣನೀಯ ಸಾಧನೆ ಮಾಡಿದೆ. ಹೆಚ್ಚಿನ ಮತ ಪಡೆದಿದೆ. ಇದೂ ಕೂಡ ಬಿಜೆಪಿ ಮಂದಿಗೆ ನೆನಪಿರಲಿ ಎಂದರು. ಮಾಜಿ ಸಿಎಂ ಯಡಿಯೂರಪ್ಪ ಏನು ಹೇಳುತ್ತಾರೋ, ಸೂಚನೆ ಕೊಡುತ್ತಾರೋ ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಮೋದಿ ಪಿಎಂ ಆಗೋದು ಬಿಜೆಪಿಗೆ ಬೇಕಿಲ್ಲ: ಹೆಬ್ಬಾಕ ರವಿ
ತುಮಕೂರು: ನರೇಂದ್ರ ಮೋದಿ ಪ್ರಧಾನಿಯಾಗೋದು ಬಿಜೆಪಿಗೆ ಬೇಕಿಲ್ಲ. ಅವರ ವರ್ತನೆ, ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಮಾರ್ಮಿಕವಾಗಿ ನುಡಿದರು. ಅವರು ತುಮಕೂರಿನಲ್ಲಿ ಕೆಜೆಪಿ ವತಿಯಿಂದ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಜೆಪಿ ವಿಲೀನವಾಗಲಿ ಅಥವಾ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಖಚಿತ ಎಂಬ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸುರೇಶ್ಗೌಡರ ಹೇಳಿಕೆಗೆ ಹೆಬ್ಬಾಕ ರವಿ ಮೇಲಿನಂತೆ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಬಿಜೆಪಿಗೆ ಬಂದರೆ ಹೆಚ್ಚಿನ ಲೋಕಸಭಾ ಸ್ಥಾನ ಗಳಿಸಲು ಸಾಧ್ಯ. ಇಲ್ಲದಿದ್ದರೆ ಕಷ್ಟ ಎಂದು ಹೇಳುವ ಮೂಲಕ ಯಡಿಯೂರಪ್ಪನವರ ಶಕ್ತಿ ಕುರಿತಂತೆ ಬಿಜೆಪಿ ಮಂದಿ ಬಹಿರಂಗವಾಗೇ ಗುಣಗಾನ ಮಾಡುತ್ತಾರೆ. ಕೆಜೆಪಿ ವಿಲೀನ ಅಥವಾ ಹೊಂದಾಣಿಕೆ ಕುರಿತಂತೆ ಬಿಜೆಪಿಯವರೇ ಬಹಿರಂಗವಾಗಿ ಉತ್ಸುಕರಾಗಿ ಹೇಳುತ್ತಾರೆ. ಇನ್ನೊಂದೆಡೆ ಕೆಜೆಪಿಯನ್ನು ಕಡೆಗಣಿಸಿ ಮಾತನಾಡುತ್ತಾರೆ ಎಂದರು.
ನಾಳೆ ರಾಮನಗರದಲ್ಲಿ ಎಚ್ಡಿಕೆ ಹುಟ್ಟುಹಬ್ಬ
ರಾಮನಗರ: ಈ ಜಿಲ್ಲೆಯ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಈ ಬಾರಿಯೂ ನಗರದಲ್ಲಿ ಡಿ.16ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಹೇಳಿದರು. ಕುಮಾರಸ್ವಾಮಿ ಅವರು ಈ ಬಾರಿ ರಾಜ್ಯದ ವಿವಿಧ ದೇವಾಲಯಗಳಿಗೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಕಡೆಗೆ, ಜಿಲ್ಲೆಯ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಮನಗರದಲ್ಲೇ ಆಚರಣೆಗೆ ಸಮ್ಮತಿಸಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹುಟ್ಟುಹಬ್ಬ ಪ್ರಯಕ್ತ ಡಿ.16ರಂದು ಬೆಳಗ್ಗೆ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲಾಗುವುದು. ಕುಮಾರಸ್ವಾಮಿ ಸಂಜೆ 4ಕ್ಕೆ ನಗರಕ್ಕೆ ಆಗಮಿಸಲಿದ್ದು, ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ನೆರವೇರಿಸಿದ ನಂತರ ಚರ್ಚ್, ಮಸೀದಿಯಲ್ಲೂ ಪ್ರಾರ್ಥನೆ ಸಲ್ಲಿಸುವರು ಎಂದರು.
ಡಿಸಿ ನೇತೃತ್ವದಲ್ಲಿ ಕಾರ್ಯಾಗಾರ
ರಾಮನಗರ: ಜಡ್ಡುಗಟ್ಟಿರುವ ರಾಮನಗರ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿ, ಆಮೂಲಾಗ್ರ ಬದಲಾವಣೆಗೆ ಪಣ ತೊಟ್ಟಿರುವ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಅಧೀನ ಅಧಿಕಾರಿಗಳಿಗೆ ಒತ್ತಡ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮೌಲ್ಯಗಳನ್ನು ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಿದ್ದರು. ಖುದ್ದು ಆಸಕ್ತಿ ವಹಿಸಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿದ ಡಾ.ವಿಶ್ವನಾಥ್, ಇಡೀ ದಿನ ಅಧಿಕಾರಿಗಳೊಟ್ಟಿಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಈ ವೇಳೆ ಅವರು ವೃತ್ತಿ ನೈಪುಣ್ಯತೆ, ಒತ್ತಡ ನಿಭಾವಣೆ, ಜನಸ್ಪಂದನೆ, ಕಾನೂನು ಪಾಲನೆ ಕುರಿತು ಹಿತೋಪದೇಶದ ಜತೆಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಜನಸಂಪರ್ಕದಲ್ಲಿರುವ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಒತ್ತಡ ಅನುಭವಿಸುತ್ತಾರೆ. ಇಂಥವರಿಗೆ ಒಂದಿಷ್ಟು ಒತ್ತಡ ನಿವಾರಣೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡರೆ ಹೆಚ್ಚಿನ ರೀತಿಯಲ್ಲಿ ಜನಸೇವೆ ಮಾಡಲು ಅನುಕೂಲವಾಗುತ್ತದೆ ಎಂದರು.
ಟಿವಿ ಪೆಡಂಭೂತವಿದ್ದಂತೆ: ಭೂಹಳ್ಳಿ ಪುಟ್ಟಸ್ವಾಮಿ
ರಾಮನಗರ: ದೂರದರ್ಶನದ ಪೆಟ್ಟಿಗೆ ಪೆಡಂಭೂತ ಇದ್ದಂತೆ. ಇದು ಮಕ್ಕಳಲ್ಲಿ ಆಲೋಚನೆಮಾಡುವ ಅವಕಾಶ ಕಸಿದುಕೊಂಡಿದೆ. ಗೃಹಿಣಿಯರ ನಿದ್ದೆಗೆಡಿಸಿದೆ. ವೃದ್ಧರ ವಿಶ್ರಾಂತಿಯನ್ನು ಕಿತ್ತುಕೊಂಡಿದೆ. ಜನಪದ ಕಲೆಗಳನ್ನು ಅಳಿಸಿಹಾಕುತ್ತಿದೆ ಎಂದು ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ಟಿವಿಯ ಅನಾಹುತಗಳನ್ನು ಅನಾವರಣ ಮಾಡಿದರು. ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಬಾಲಿಕಾ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಅಂತರ ಶಾಲಾ ಮಟ್ಟದ ಜನಪದ ಗೀತೆಗಳ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಟಿವಿ ನೋಡುವುದು ದೈಹಿಕ ದೌರ್ಬಲ್ಯವಾಗಿ ಮಾತ್ರ ಉಳಿದಿಲ್ಲ. ಅದು ಮಾನಸಿಕ ವೇದನೆಗೆ ಗುರಿಪಡಿಸುತ್ತಿದೆ ಎಂದು ಎಚ್ಚರಿಸಿದರು. ಜನಪದ ಗೀತೆಗಳು ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ, ನಮ್ಮ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುವ, ಸಂಗೀತ, ಸಾಹಿತ್ಯವನ್ನು ಸಂಯೋಜಿಸ ಬೇಕು ಎಂದರು.
ಎ.ಡಿ.ಪೈ. ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ತರಬೇತಿ
ರಾಮನಗರ: ತಾಲೂಕಿನ ಬಿಡದಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಎ.ಡಿ.ಪೈ. ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೆನರಾ ಬ್ಯಾಂಕಿನ 25 ಮಂದಿ ವ್ಯವಹಾರ ಪ್ರತಿನಿಧಿಗಳಿಗೆ ಒಂದು ವಾರದ ವಿಶೇಷ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ಸಾಕ್ಷರತೆ ಹಾಗೂ ಆರ್ಥಿಕ ಸೇರ್ಪಡೆಯ ಕಾರ್ಯಕ್ರಮಮದನ್ವಯ ಕೆನರಾ ಬ್ಯಾಂಕಿನಿಂದ ಆಯ್ಕೆ ಮಾಡಲ್ಪಟ್ಟ ಸುಮಾರು 25 ಮಂದಿ ವ್ಯವಹಾರ ಕುರಿತು ಈ ತರಬೇತಿ ನಡೆಯಿತು. ಬ್ಯಾಂಕಿಂಗ್ ಪರಿವೆಯೇ ಇಲ್ಲದ ಜನರಿಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗುವಂತೆ ತರಬೇತಿ ಹೊಂದಿದ ಪ್ರತಿನಿಧಿಗಳಿಗೆ ಕೆನರಾ ಬ್ಯಾಂಕಿನ ಉಪ ಮಹಾ ಪ್ರಬಂಧಕ ಸುನೀಲ್ ಕುರ್ತಕೋಟಿ ಕಿವಿಮಾತು ಹೇಳಿದರು. ಬ್ಯಾಂಕ್ ಖಾತೆ ತೆರೆಸುವ ಮೂಲಕ ದೇಶದ ಕಟ್ಟಕಡೆಯ ನಾಗರಿಕರನ್ನು ಕೂಡಿಕೊಂಡು ಸಮೃದ್ಧ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಜವಾಬ್ದಾರಿ ನಿಭಾಯಿಸಬೇಕು ಎಂದು ತಿಳಿಸಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ಗಾಗಿ ಇಂದು ಏಕತಾ ಓಟ
ತುಮಕೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನಾದರ್ಶಗಳು, ಮೌಲ್ಯಗಳನ್ನು ತಿಳಿಸುವ ಸಲುವಾಗಿ ಡಿ.15 ರಂದು ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕತಾ ಓಟ ಹೆಸರಿನ ರಸ್ತೆ ಓಟ ಆಯೋಜಿಸಿದ್ದು ಇದರ ಭಾಗವಾಗಿ ತುಮಕೂರಿನಲ್ಲಿ ಭಾನುವಾರ ಬೆಳಗ್ಗೆ ತುಮಕೂರು ವಿವಿ ಮುಂಭಾಗದಿಂದ ರಸ್ತೆ ಓಟ ಆಯೋಜಿಸಲಾಗಿದೆ. ಇಡೀ ದೇಶದಲ್ಲಿ ಒಂದೇ ಹೆಸರಿನಲ್ಲಿ, ಒಂದೇ ಉದ್ದೇಶದಿಂದ, ಅತಿಹೆಚ್ಚು ಕೇಂದ್ರಗಳಲ್ಲಿ, ಕೋಟ್ಯಂತರ ಜನರು ಪಾಲ್ಗೊಳ್ಳುತ್ತಿರುವ ಏಕತಾ ಓಟವು ಗಿನ್ನಿಸ್ ದಾಖಲೆಯಾಗಲಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ. ತುಮಕೂರಿನಲ್ಲಿ, ತುಮಕೂರು ವಿಶ್ವ ವಿದ್ಯಾಲಯದ ಮುಂಭಾಗದಿಂದ ಟೌನ್ ಹಾಲ್ ವೃತ್ತದವರೆಗೆ ಏಕತಾ ಓಟ ಆಯೋಜಿಸಲಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ನಾಗರಿಕರು, ಧಾರ್ಮಿಕ ಮುಖಂಡರು, ಸಾಧು ಸಂತರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಕವಿಗಳು, ಬರಹಗಾರರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ದಲಿತ್ ಪ್ಯಾಂಥರ್ ಕಾರ್ಯಕ್ರಮ
ಚನ್ನಪಟ್ಟಣದಲ್ಲಿ ನಡೆದ ದಲಿತ್ ಪ್ಯಾಂಥರ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ವಿ.ಚಂದ್ರಶೇಖರ್, ಹಾಪ್ಸ್ಕಾಮ್ಸ್ ಮಾಜಿ ನಿರ್ದೇಶಕ ಅಕ್ಕೂರು ಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೊತ್ತನೂರು ಎಂ.ಮುನಿಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ರಾಗಿ ಒಕ್ಕಣೆಗೆ ರಸ್ತೆ ಕಣ, ಪ್ರಯಾಣಿಕರಿಗೆ ಕಿರಿಕಿರಿ
ಚನ್ನಪಟ್ಟಣ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ರಾಗಿ ಒಕ್ಕಣೆಗೆ ರಸ್ತೆಯನ್ನೇ ಕಣವನ್ನಾಗಿ ಪರಿವರ್ತಿಸಿ ಕೊಂಡಿದ್ದು ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಎದುರಾಗಿದೆ. ಬಹುಪಾಲು ಮಂದಿ ಕೆರೆ ಏರಿ,ತಿರುವುಗಳ ಬಳಿಯೇ ರಾಗಿ ಹುಲ್ಲುಗಳನ್ನು ಹಾಕುತ್ತಿದ್ದು ಇದರಿಂದಾಗಿ ದ್ವಿಚಕ್ರವಾಹನ ಸವಾರರು ಜಾರಿ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಸಾಕಷ್ಟಿದ್ದು ಪ್ರಯಾಣಿಕರ ಗೋಳು ಹೇಳತೀರದಾಗಿದೆ. ನೀರಿನ ಕೊರತೆಯಿಂದಾಗಿ ಕಣ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರಸ್ತೆಯಲ್ಲೇ ಒಕ್ಕಣೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ರಸ್ತೆಯೇ ಕಣವಾಗಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮಾತ್ರ ಇನ್ನಿಲ್ಲದ ಕಿರಿಕಿರಿ ಎದುರಿಸುವಂತಾಗಿದೆ. ರಾಗಿ ಒಕ್ಕಣೆಯ ಸಮಯದಲ್ಲಿ ತೂರುವ ಹೊಟ್ಟು ಪ್ರಯಾಣಿಕರ ಕಣ್ಣಿಗೆ ತುಂಬಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ ಎಂದರು.
ಚನ್ನಪಟ್ಟಣ ತಾಲೂಕಿನಾದ್ಯಂತ ಹನುಮ ಜಯಂತಿ
ಚನ್ನಪಟ್ಟಣ: ತಾಲೂಕಿನಾದ್ಯಂತ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ತಾಲೂಕಿನ ವಿವಿಧ ಹನುಮಾನ್ ದೇವಾಲಯದಲ್ಲಿ ವಿಶೇಷಪೂಜೆ, ಅನ್ನಸಂತರ್ಪಣೆ, ಪ್ರಸಛಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ಹನುಮಾನ್ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತಾದಿಗಳು, ಭಾವ ಪುನೀತರಾದರು. ಹನುಮಜಯಂತಿ ಅಂಗವಾಗಿ ಕೆಲ ದೇವಾಲಯಗಳಲ್ಲಿ ಹೋಮಹವನಗಳು ನಡೆದವು. ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಬೆಳಿಗೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಬೆಣ್ಣೆಯಿಂದ ಅಲಂಕೃತನಾದ ಹನುಮಂತನ ದರ್ಶನ ಪಡೆದರು. ದೇವರಹೊಸಹಳ್ಳಿಯ ಸಂಜೀವರಾಯ ಸ್ವಾಮಿ ದೇವಾಲಯದಲ್ಲಿ ಸಹ ಹನುಮಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹನುಮಜಯಂತಿ ಪ್ರಯುಕ್ತ ವಿಶೇಷ ಅಲಂಕಾರ, ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಅವರು ಹೇಳಿದ್ದು
ಕೆಲವರು ನನ್ನನ್ನು ಅಹಿಂದ ಪರವಾದ ಮುಖ್ಯಮಂತ್ರಿ ಎನ್ನುತ್ತಾರೆ. ನಾನು ಅಹಿಂದ, ಸಾಮಾಜಿಕ ನ್ಯಾಯದ ಪರ ಮತ್ತು ಎಲ್ಲ ಜಾತಿಯ ಬಡವರ ಪರವೂ ಹೌದು. ಅವಕಾಶ ವಂಚಿತರಿಗೆ ಅವಕಾಶ ಒದಗಿಸುವುದು ಸರ್ಕಾರದ ಉದ್ದೇಶ.
- ಸಿದ್ದರಾಮಯ್ಯ,
ಮುಖ್ಯಮಂತ್ರಿ
ಒಳಮರ್ಮ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಕೇವಲ ಅಹಿಂದ ಜಪ ಮಾಡಿದರೆ ವ್ಯತಿರಿಕ್ತ ಪರಿಣಾಮ ಬೀರೀತು ಎಂಬಭಯ ಎದುರಾದಂತಿದೆ!
ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
@VishweshwarBhat