28 ಲಕ್ಷಕ್ಕೆ ವಿಲೇವಾರಿಯಾದ ತಾಪಂ ಮಳಿಗೆಗಳು
ಚಿಕ್ಕನಾಯಕನಹಳ್ಳಿ: ಪಟ್ಟಣದ ಹೃದಯ ಭಾಗವಾದ ನೆಹರು ಸರ್ಕಲ್ ಬಳಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಸೋಮವಾರ ತಾಪಂ ಸಭಾಂಗಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಯಿತು.
ತಾಲೂಕು ಪಂಚಾಯ್ತಿ ನಿಧಿ 3ರಲ್ಲಿ ನಿರ್ಮಿಸಿದ್ದ ಮಳಿಗೆಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು 3ವರ್ಷಗಳಿಂದ ಹಲವಾರು ಬಾರಿ ಪ್ರಯತ್ನಿಸಿದ್ದರೂ ಸಹ ಅನೇಕ ಅಡೆತಡೆಗಳಿಂದ ಪ್ರಯತ್ನ ಕೈಗೂಡಿರಲಿಲ್ಲ.
ಆದರೆ ಹಾಲಿ ತಾಪಂ ಅಧ್ಯಕ್ಷರಾದ ಎಚ್.ಆರ್. ಶಶಿಧರ್ ಅವರು, ತಾಲೂಕು ಪಂಚಾಯ್ತಿ ಸಮಿತಿಯ ಅನುದಾನದಲ್ಲಿ ನಿರ್ಮಿಸಿರುವ ಮಳಿಗೆಗಳ ಹರಾಜು ಮಾಡದೆ ಸಮಿತಿಗೆ ನಷ್ಟವುಂಟಾಗುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ಹರಾಜು ಮಾಡಲೇಬೇಕೆಂಬ ಹಟಕ್ಕೆ ಬಿದ್ದ ಪರಿಣಾಮ, ಎಲ್ಲಾ ಸದಸ್ಯರ ಸಹಕಾರದಿಂದ ಪ್ರಯತ್ನ ಕೈಗೂಡಿತೆಂದು ಅವರು ಹೇಳಿದರು.
ಪ್ರಾರಂಭದಲ್ಲಿ ಹರಾಜು ಪ್ರಕ್ರಿಯೆಯೆಗೆ ಅಡ್ಡಿಪಡಿಸಲು ಕೆಲವು ಹಿತಾಸಕ್ತರು ಪ್ರಯತ್ನಿಸಿದರೂ ತಾಪಂ ಸದಸ್ಯರು ನಾವು ನಮ್ಮ ಕರ್ತವ್ಯ ಮಾಡುತ್ತೇವೆ, ನಿಮಗೆ ಸರಿಕಾಣದಿದ್ದರೆ ನ್ಯಾಯಲಯಕ್ಕೆ ಹೋಗಿ ಎಂಬ ಉತ್ತರ ನೀಡಿ ಹರಾಜು ಪ್ರಕ್ರಿಯೆ ಪ್ರಾರಂಭಿಸಿದರು.
ಮುಂಗಡ ಹೆಚ್ಚಾಯಿತು, ಬಾಡಿಗೆ ಕಡಿಮೆ ನಿಗದಿಪಡಿಸಿ ಎಂಬ ಹಲವು ಬೇಡಿಕೆಗಳನ್ನು ಸದಸ್ಯರು ತಿರಸ್ಕರಿಸಿದರು. ಇದು ಕಾನೂನು ವ್ಯಾಪ್ತಿಗೊಳಪಟ್ಟ ವಿಚಾರ, ನಮ್ಮ ಕಚೇರಿಯ ಲೆಕ್ಕಪರಿಶೋಧಕರ ಅಭಿಪ್ರಾಯದ ಪ್ರಕಾರ ಒಮ್ಮೆ ಕೈಗೊಂಡ ನಿರ್ಣಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಧ್ಯಕ್ಷರು ಉತ್ತರಿಸಿದರು. ಮಳಿಗೆಗಳಲ್ಲಿ ಒಂದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟು, ಪ್ರತಿಮಳಿಗೆಯನ್ನು ಪ್ರತ್ಯೇಕವಾಗಿ ಹರಾಜು ಮಾಡಲಾಗಿ ಒಟ್ಟು 28 ಲಕ್ಷ ರು.ಗಳು ಮುಂಗಡ ರೂಪದಲ್ಲಿ ಬಂದಿದೆ. ಬಾಡಿಗೆಯನ್ನು ಲಕ್ಷಕ್ಕೆ ಸಾವಿರದಂತೆ ಪ್ರತಿ ತಿಂಗಳು 28 ಲಕ್ಷಕ್ಕೆ, 28 ಸಾವಿರ ರು.ಗಳು ನಾಲ್ಕು ಮಳಿಗೆಗಳಿಂದ ಬಾಡಿಗೆ ರೂಪದಲ್ಲಿ ತಾಪಂಗೆ ಆದಾಯ ಬರುವಂತಾಯಿತು. ಮೂರು ವರ್ಷಗಳಿಂದ ಅನೇಕ ಅಡಚಣೆಗಳಿಂದ ಹರಾಜು ಮಾಡದ ಪರಿಣಾಮ ತಾಪಂಗೆ ಬಾಡಿಗೆ ಬಾಬ್ತು 10 ಲಕ್ಷರು.ಗಳ ನಷ್ಟವುಂಟಾಗಿದೆ ಎಂದು ಮಾಜಿ ಅಧ್ಯಕ್ಷರಾದ ಎಂ.ಎಂ.ಜಗದೀಶ್ ನುಡಿದರು. ತಾಪಂ ಉಪಾಧ್ಯಕ್ಷರಾದ ಎ.ಬಿ.ರಮೇಶ್ ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ವಸಂತಕುಮಾರ್, ಸದಸ್ಯರಾದ ಕೆಂಕೆರೆ ನವೀನ್, ನಿರಂಜನಮೂರ್ತಿ, ಲತಾ ವಿಶ್ವನಾಥ್, ಲತಾ ಕೇಶವಮೂರ್ತಿ,ಚೇತನ ಗಂಗಾಧರ್, ಹೇಮಾವತಿ ಮುಂತಾದವರಿದ್ದರು.