'ಒಕ್ಕಲಿಗರು ಆಮಿಷಕ್ಕೆ ಒಳಗಾಗುವುದಿಲ್ಲ'
ತುಮಕೂರು: ಒಕ್ಕಲಿಗರ ಸಂಘಕ್ಕೆ ಜನವರಿ 5 ರಂದು ನಡೆಯುತ್ತಿರುವ ನಿರ್ದೇಶಕರ ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುತ್ತಿದ್ದು ಒಕ್ಕಲಿಗ ಜನಾಂಗದವರು ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ನಿರ್ದೇಶಕ ಸ್ಥಾನದ ಅಭ್ಯರ್ಥಿ ಹಾಗೂ ಸಿಂಡಿಕೇಟ್ ಮಾಜಿ ಸದಸ್ಯ ಬ್ಯಾಟರಂಗೇಗೌಡ ಅಭಿಪ್ರಾಯಪಟ್ಟರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಒಕ್ಕಲಿಗರದ್ದು ಮಾದರಿ ಸಮಾಜ. ನಮ್ಮ ಮತದಾರರು ಆಮಿಷಕ್ಕೆ ಒಳಗಾಗುವುದಿಲ್ಲ. ಕೆಲ ಅಭ್ಯರ್ಥಿಗಳು ಮತದಾರರಿಗೆ ಆಮಿಷ ತೋರಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಮತದಾರರನ್ನು ಅದನ್ನು ತಿರಸ್ಕರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೊಂದು ಸೇವಾ ಕ್ಷೇತ್ರ. ಇಂತಹ ಸೇವಾ ಕ್ಷೇತ್ರಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಆಮಿಷ ನೀಡಲು ಮುಂದಾಗಿರುವುದು ಯಾವ ಕಾರಣಕ್ಕೆಂದು ತಿಳಿಯದ ವಿಷಯ. ಅಂತಹ ಅಭ್ಯರ್ಥಿಗಳನ್ನು ತಿರಸ್ಕರಿಸುವ ತಿಳಿವಳಿಕೆ ನಮ್ಮ ಮತದಾರರಿಗೆ ಇದೆ. ಹಣ ಖರ್ಚು ಮಾಡುವ ಅಭ್ಯರ್ಥಿಗಳು ನಿಜವಾಗಿಯೂ ಒಕ್ಕಲಿಗ ಸಮಾಜದ ಬಗ್ಗೆ ಕಾಳಜಿ ಇದ್ದರೆ ಅದೇ ಹಣವನ್ನು ಸಮಾಜಕ್ಕೆ ದಾನ ನೀಡಲಿ ಎಂದು ಸವಾಲು ಹಾಕಿದರು.
ಕಳೆದ 6 ತಿಂಗಳಿನಿಂದ ಸುಮಾರು 1500 ಹಳ್ಳಿಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ಒಕ್ಕಲಿಗ ಸಮಾಜದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಈ ಚುನಾವಣೆಯಲ್ಲಿ ನಮ್ಮ ಸಮಾಜದ ಜನಾಂಗಕ್ಕಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ನನ್ನನ್ನು ನಮ್ಮ ಸಮಾಜದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿ ಕಳುಹಿಸಿದರೆ ಒಬ್ಬ ನಿರ್ದೇಶಕ ನಿಜವಾಗಿ ಸಮಾಜಕ್ಕೆ ಏನು ಕೆಲಸ ಮಾಡಬೇಕೆಂದು ಕಾರ್ಯ ರೂಪದಲ್ಲಿ ತೋರಿಸುತ್ತೇನೆ ಎಂದರು.