ಒಡೆಯರ್ ನಿಧನಕ್ಕೆ ಕಂಬನಿ
ಮಧುಗಿರಿ: ಮೈಸೂರು ಸಂಸ್ಥಾನದ ಯದುವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದಿಂದ ಕರುನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ ಕಂಬನಿ ಮಿಡಿದಿದ್ದಾರೆ.
ಪಟ್ಟಣದ ಟೌನ್ ಕೋ ಆಪರೇಟೀವ್ ಕನ್ಸೂಮರ್ ಸೊಸೈಟಿ ಸಭಾಂಗಣದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಧುಗಿರಿ ಪಟ್ಟಣದ ಈ ಟೌನ್ ಕೋ ಆಪರೇಟೀವ್ ಸೊಸೈಟಿ ಕಟ್ಟಡದ ಶಂಕಸ್ಥಾಪನೆ ನೆರವೇರಿಸಿದ್ದು ಜಯಚಾಮರಾಜೇಂದ್ರ ಒಡೆಯರ್. ಅವರು ಹಾಕಿ ಕೊಟ್ಟ ತಳಹದಿ ಇಂದು ಮಧುಗಿರಿಯಲ್ಲಿ ಬೃಹದಕಾರವಾಗಿ ಬೆಳೆದು ಪಟ್ಟಣದ ಹೃದಯ ಭಾಗದಲ್ಲಿ ನಿಂತು ಕಂಗೊಳಿಸುತ್ತಿದೆ. ಅಲ್ಲದೆ ಈ ಸೊಸೈಟಿಯಿಂದ ಸಾಕಷ್ಟು ಜನಪರ ಕೆಲಸ ಕಾರ್ಯ ಮಾಡುತ್ತಿದ್ದೇವೆ. ಅಂತಹ ಒಡೆಯರ್ ವಂಶಸ್ಥ ಶ್ರೀಕಂಡದತ್ತ ನರಸಿಂಹರಾಜ ಒಡೆಯರ್ ನಿಧನದಿಂದ ಈ ನಾಡು ಬಡವಾಗಿದೆ. ರಾಜ್ಯಕ್ಕೆ, ಸಾಂಸ್ಕೃತಿಕ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಹಾಗಾಗಿ ಕನ್ನಡ ನಾಡಿನ ಜನರು ಮೈಸೂರು ರಾಜ ವಂಶಸ್ಥರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಸಮಾಜದ ಭದ್ರ ಬುನಾದಿ ಮತ್ತು ಕನ್ನಡ ನಾಡಿನ ಏಳಿಗೆಗೆ ಶ್ರಮಿಸಬೇಕು ಎಂದರು. ಟೌನ್ ಕೋ ಆಪರೇಟೀವ್ ಸೊಸೈಟಿ ಅಧ್ಯಕ್ಷ ಎಂ.ಆರ್. ಜಗನಾಥ್ ಮೈಸೂರು ಸಂಸ್ಥಾನದ ಒಡೆಯರಿಲ್ಲದ ಮೈಸೂರನ್ನು ನೆನೆಯಲು ಹೇಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿ, ರಾಜಕೀಯದಿಂದ ಹಿಡಿದು ಸಂಗೀತದವರೆಗೂ ಮನೆ ಮಾತಾಗಿದ್ದ ಮೈಸೂರನ್ನು ಉತ್ತುಂಗಕ್ಕೇರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು. ಮಾಜಿ ಅಧ್ಯಕ್ಷ ಎಸ್. ಪದ್ಮನಾಭರಾಜ್, ಕಮಲಾರೆಡ್ಡಿ, ನಂಜಮ್ಮ, ರಾಧೇಶ್ಯಾಮ್, ಕಾರ್ಯದರ್ಶಿ ನಾಗರಾಜ ಶೆಟ್ಟಿ ಮತ್ತಿತರರು ಇದ್ದರು.
ದೇಶ ಬದಲಾವಣೆ ಬಯಸುತ್ತಿದೆ: ಹಿರೇಮಠ ಶ್ರೀ
ತುಮಕೂರು: ದೇಶ ಬದಲಾವಣೆ ಬಯಸುತ್ತಿದೆ. ಇದಕ್ಕಾಗಿ ಯುವಕರು ಸಜ್ಜಾಗಬೇಕು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ಆಯೋಜಿಸಿದ್ದ ಏಕತಾ ಓಟದ ನಂತರ ಟೌನ್ಹಾಲ್ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಬದಲಾವಣೆಗಾಗಿ ಎಲ್ಲರೂ ಓಡಿದ್ದೀರ. ತುಂಬಾ ನಿಧನಕ್ಕೆ ಓಡಬಾರದು. ಜೋರಾಗಿ ಓಡಬೇಕಾದ ಕಾಲ ಬಂದಿದೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕಂಡಿರುವ ಸುವರ್ಣ ಭಾರತ ಕನಸನ್ನು ರೀಚ್ ಮಾಡಲು ಇನ್ನು ಕೇವಲ 6 ವರ್ಷ ಮಾತ್ರ ಬಾಕಿ ಇದೆ. ಹಾಗಾಗಿ ಯುವಕರು ಜೋರಾಗಿ ಓಡಬೇಕು ಎಂದರು. ಇದೇ ಸಂದರ್ಭದಲ್ಲಿ ಸ್ವಾಮೀಜಿ ವಲ್ಲಭ ಬಾಯಿ ಪಟೇಲ್ ಅವರ ಗುಣಗಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಈ ಕೆಲಸ ಎಂದೋ ಆಗಬೇಕಾಗಿತ್ತು. ಇಂದು ಆಗಿರುವುದು ಖುಷಿಯಾಗಿದೆ. ಯಾರೇ ಈ ಕಾರ್ಯಕ್ರಮ ಮಾಡಿದ್ದರೂ ತಮ್ಮ ಬೆಂಬಲ ಇದ್ದೇ ಇರುತ್ತದೆ ಎರ್ದು ತಿಳಿಸಿದರು. ತುಮಕೂರು ವಿವಿ ಮುಂಭಾಗದಿಂದ ಆರಂಭವಾದ ಏಕತಾ ಓಟ ಟೌನ್ ಹಾಲ್ ತನಕ ನಡೆಯಿತು. ಓಟದಲ್ಲಿ 1500 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.