ಕಡೆಕಾರ್ತೀಕ ಮಹೋತ್ಸವದಲ್ಲಿ ರಾಗಿಮುದ್ದೆ ಊಟದ ವಿಶೇಷ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನವಾದ ಪುರದಮಠದಲ್ಲಿ ಸೋಮವಾರ ಗ್ರಾಮದೇವತೆ ಶ್ರೀಕಾಳಿಕಾಂಬ ದೇವಿ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ವೈಭವಯುತವಾಗಿ ನಡೆಯಿತು.
ಇಲ್ಲಿನ ವಿಶೇಷವೆಂದರೆ ಮಹೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ರಾಗಿಮುದ್ದೆ ಸಂತರ್ಪಣೆ. ಸುತ್ತಮುತ್ತಲ ಗ್ರಾಮಗಳ ಭಕ್ತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಒಂದು ಭಾಗವನ್ನು ಇಲ್ಲಿ ನಡೆಯುವ ಮಹಾ ದಾಸೋಹಕ್ಕೆ ಕೊಟ್ಟು ಸಹಕರಿಸುವುದು ಹಿಂದಿನಿಂದ ನಡೆದು ಬಂದಿದೆ. ಮಹಾ ದಾಸೋಹದಲ್ಲಿ ಮುದ್ದೆ-ಸಾರು ರುಚಿ ಸವಿಯುವುದು ವಿಶೇಷ. ಇಲ್ಲಿಗೆ ತುಮಕೂರು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾದಿಗಳು ಆಗಮಿಸಿ ಈ ಪ್ರಸಾದವನ್ನು ಪಡೆಯುತ್ತಾರೆ. ಅಲ್ಲದೆ ಇಲ್ಲಿ ತಯಾರಿಸಲಾಗಿದ್ದ ಸಾಂಬಾರನ್ನು ನಂತರ ತಮ್ಮ ಮನೆಗಳಿಗೆ ಕೊಂಡೊಯ್ಯುವುದು ವಿಶೇಷ.
ಮಹೋತ್ಸವದ ನೇತೃತ್ವವನ್ನು ಸಂತೋಷ್, ಬಾಬುರಾಜ್, ದರ್ಶನ್, ಉಮೇಶ್, ಶರತ್, ಮಹೇಶ್,ದೇವರಾಜು, ಮಧು, ಅನಿಲ್, ವಿಶ್ವನಾಥ್, ಶ್ರೀಧರ ಸೇರಿದಂತೆ ಚನ್ನಬಸವೇಶ್ವರ ಯುವಕ ಸಂಘದವರು ವಹಿಸಿದ್ದರು. ತಾ.ಪಂ.ಸದಸ್ಯ ನವೀನ್, ಗ್ರಾ.ಪಂ.ಸದಸ್ಯರಾದ ಯು.ಸಿ.ಗೌಡ, ಬೆಂಕಿ ಬಸವರಾಜು ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಆಗಮಿಸಿದ್ದರು.