ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಬದ್ಧ: ನೇರಳೆಗುಂಟೆ ರಾಮಪ್ಪ
ಪಾವಗಡ: ತಾಲೂಕಿನ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಚಿತ್ರದುರ್ಗ ಲೋಕಸಭೆ ವ್ಯಾಪ್ತಿಯ ಅಭಿವೃದ್ಧಿಗೆ ಬದ್ಧರಾಗುವುದಾಗಿ ಕಾಂಗ್ರೆಸ್ ಮುಖಂಡ ನೇರಳೆಗುಂಟೆ ರಾಮಪ್ಪ ತಿಳಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಅವರು ಪಟ್ಟಣಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಚಿತ್ರದುರ್ಗ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದದಿಂದ ಟಿಕೆಟ್ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಲಾಗಿದ್ದು ವರಿಷ್ಠರು ತಮಗೆ ಟಿಕೆಟ್ ನೀಡಿದರೆ ಜನತೆಯ ಅರ್ಶೀವಾದದಿಂದ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಹಿಂದಿನ ಚಿತ್ರದುರ್ಗ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಬಾರೀ ಕಸರತ್ತು ನಡೆಸಲಾಯಿತು. ಆಗ ಪಕ್ಷದ ಹಿರಿಯ ಮುಖಂಡರ ಸಲಹೆ ಸೂಚನೆಗಳ ಮೇರೆಗೆ ನಾಮ ಪತ್ರ ವಾಪಸು ಪಡೆದು ಚುನಾವಣೆಗೆ ಸಹಕರಿಸಿದ್ದೇನೆ. ಈಗ ಪಕ್ಷದ ರಾಜ್ಯ ಹಿರಿಯ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಲಾಗಿದ್ದು, ಮುಖಂಡರ ಸಲಹೆ ಸೂಚನೆಗಳ ಮೇರೆಗೆ ಚುನಾವಣೆಗೆ ಸ್ವರ್ಧಿಸಲು ಆಕಾಂಕ್ಷಿಯಾಗಿದ್ದೇನೆ ಎಂದರು.
ಈಗಾಗಲೇ ಪಾವಗಡ, ಶಿರಾ, ಮೊಳಕಾಲ್ಮೂರು, ಹಿರಿಯೂರು, ಚಳ್ಳಕೆರೆ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ತಾಲೂಕುಗಳನ್ನು ಭೇಟಿ ಮಾಡಿ ಅಲ್ಲಿನ ಪಕ್ಷದ ಮುಖಂಡರ ಅರ್ಶೀವಾದ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಚರ್ಚಿಸಲಾಗಿದೆ ಎಂದರು. ರಾಜ್ಯ ಹಾಗೂ ಕೇಂದ್ರದ ಮುಖಂಡರು ವಿಶ್ವಾಸವಿಟ್ಟು ಟಿಕೆಟ್ ನನಗೆ ಕೊಟ್ಟರೆ ಅತ್ಯಧಿಕ ಮತಗಳಿಂದ ಗೆಲ್ಲುವ ನಿರೀಕ್ಷೆ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆ ಚಳ್ಳಕರೆ ತಾ. ನೆರಳಗುಂಟೆ ವಾಸಿಯಾದ ತಾವು ಕಳೆದ 25ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ಪಕ್ಷ ಸಂಘಟಿಸಿದ್ದೇನೆ ಎಂದ ಅವರು ತಾ.ಜನರ ನಾಡಿ ಅರಿತಿದ್ದು ನದಿ ಮೂಲದ ಕುಡಿಯುವ ನೀರು, ಶೈಕ್ಷಣಿಕ ಪ್ರಗತಿ, ಕೈಗಾರಿಕೆ ಸೇರಿದಂತೆ ಜ್ವಲಂತ ಸಮಸ್ಯೆ ನಿವಾರಣೆಗೆ ಬದ್ಧರಾಗುವುದಾಗಿ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರಿದ್ದರು.