ಜೆಡಿಎಸ್ನಿಂದ 28 ಕ್ಷೇತ್ರಗಳಲ್ಲೂ ಸ್ಪರ್ಧೆ: ದೇವೇಗೌಡ
ತಿಪಟೂರು: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ 28ಕ್ಷೇತ್ರಗಳಿಂದಲೂ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲವಿಗಾಗಿ ಹೋರಾಡಲಾಗುವುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ತಿಳಿಸಿದರು.
ಕಡೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಲಿವೆ. ಆದರೆ ನಮ್ಮ ಪಕ್ಷಕ್ಕೆ ಹಣ ಬಲವಿಲ್ಲ. ನಿಷ್ಠಾವಂತ ಕಾರ್ಯಕರ್ತರ ಪಡೆಯೇ ಜೆಡಿಎಸ್ ಆಸ್ತಿಯಾಗಿದ್ದು ಅವರೆಲ್ಲರೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಗಲಿರುಳೂ ಶ್ರಮಿಸಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಈಗಾಗಲೆ ಪಣ ತೊಟ್ಟಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ನಮ್ಮ ಹೆಚ್ಚಿನ ಅಭ್ಯರ್ಥಿಗಳು ಪರಾಭವಗೊಂಡಿರುವ ಬಗ್ಗೆ ಇನ್ನೂ ಚಿಂತನೆಗಳು ನಡೆದಿದ್ದು ಸದ್ಯದಲ್ಲಿಯೇ ಶಾಸಕರು ಮತ್ತು ಸಂಸದೀಯ ಮಂಡಳಿ ಸಭೆ ಸೇರಿ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ ಎಂದರು. ತುಮಕೂರು ಜಿಲ್ಲೆಗೆ ಯಾರು ಪಕ್ಷದ ಅಭ್ಯರ್ಥಿಗಳಾಗಲಿದ್ದಾರೆಂದು ಪಕ್ಕದಲ್ಲಿಯೇ ಇದ್ದ ಕೃಷ್ಣಪ್ಪನವರನ್ನು ಗುರಿಯಾಗಿಸಿ ಕೇಳಿದ್ದಕ್ಕೆ ಅದನ್ನೂ ಸದ್ಯದಲ್ಲಿಯೇ ಪ್ರಕಟಿಸಲಾಗುವುದೆಂದು ತಿಳಿಸಿದರು.
ರಾಜ್ಯದಲ್ಲಿ ನಿಷ್ಕ್ರಿಯ ಆಡಳಿತ: ಕಾಂಗ್ರೆಸ್ ಪಕ್ಷದ ಸಿಎಂ ಸಿದ್ಧರಾಮಯ್ಯನವರ ಆಡಳಿತದ ಬಗ್ಗೆ ಪ್ರಶ್ನಿಸಿದ್ದಕ್ಕೆ ರಾಜ್ಯದಲ್ಲಿ ಆಡಳಿತ ನಿಷ್ಕ್ರಿಯವಾಗಿದೆ. ಸಿದ್ದಾರಾಮಯ್ಯನವರ ಆಡಳಿತದ ಬಗ್ಗೆ ಈಗಾಗಲೆ ರಾಜ್ಯಾಪಾಲರೇ ಸ್ಪಷ್ಟವಾಗಿ ಸರ್ಟಿಫಿಕೇಟ್ ನೀಡಿರುವುದು ಹೈಕಮಾಂಡ್ ಅನ್ನೂ ಬೆಚ್ಚಿ ಬೀಳಿಸಿದೆ. ಆದ್ದರಿಂದ ಅವರ ಆಡಳಿತದ ಬಗ್ಗೆ ನಾನೇನು ಹೇಳಲಿ ಎಂದರು.
ಸಕ್ತ ಪರಿಹಾರಕ್ಕೆ ಆಗ್ರಹ: ಕಲ್ಪತರು ನಾಡಿನ ಜೀನವನಾಡಿ ತೆಂಗಿನ ಅಳಿವು-ಉಳಿವು ಮತ್ತು ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಈಗಾಗಲೆ ಕೇಂದ್ರ ಸಚಿವ ಶರದ್ ಪವಾರ್ ಬಳಿ ಬೆಂಬಲ ಬೆಲೆ ಹೆಚ್ಚಿಸುವ ಮತ್ತು ಹಾಳಾಗಿರುವ ತೆಂಗಿನ ಮರಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದೇನೆ. ಕೂಡಲೇ ಈ ಬಗ್ಗೆ ತುರ್ತಾಗಿ ಕಾರ್ಯೋನ್ಮುಖರಾಗಬೇಕೆಂದು ಸದ್ಯದಲ್ಲಿಯೇ ಮತ್ತೊಮ್ಮೆ ಬೇಟಿ ಮಾಡಿ ಒತ್ತಾಯಿಲಿದ್ದೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ಕೃಷ್ಣಪ್ಪ, ತಾಲೂಕು ಮಾಜಿ ಅಧ್ಯಕ್ಷ ತಡಸೂರು ಗುರುಮೂರ್ತಿ, ಮುಖಂಡರಾದ ಜಕ್ಕನಹಳ್ಳಿ ಲಿಂಗರಾಜು, ನಟರಾಜು, ಪ್ರಶಾಂತ್, ಮಲ್ನಾಡ್ ಗುರು, ಬಾಬು ಮತ್ತಿತರರಿದ್ದರು.