ತಾಪಂ ಸಭಾಂಗಣಕ್ಕೆ ನುಗ್ಗಲು ಗ್ರಾಮಸ್ಥರ ಯತ್ನ
ಕುಣಿಗಲ್: ಡಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯ ನರೇಗ ಯೋಜನೆ ಸೇರಿದಂತೆ ಇತರೆ ಯೋಜನೆಯಲ್ಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿ ವ್ಯಾಪಕ ಅಕ್ರಮ ಎಸಗಿದ್ದು, ತನಿಖೆ ನಡೆಸಿ, ಗ್ರಾಮಸ್ಥರಿಗೆ ಯೋಜನೆ ಸದುಪಯೋಗ ಪಡಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು, ತಾಪಂ ಸಭಾಂಗಣಕ್ಕೆ ನುಗ್ಗಲು ಯತ್ನಿಸಿದ ಘಟನೆ ನಡೆಯಿತು.
ಹುಲಿಯೂರುದುರ್ಗ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾವತ್ತೂರು ಗ್ರಾಮದ ಬಹುತೇಕ ಗ್ರಾಮಸ್ಥರಿಗೆ ನರೇಗ ಯೋಜನೆಯಡಿಯಲ್ಲಿ ಮನವಿ ಮಾಡಿದರೂ, ಗ್ರಾಪಂ ಕಾರ್ಯದರ್ಶಿ, ಪಿಡಿಒ ಜಾಬ್ ಕಾರ್ಡ್ ನೀಡದೆ ವಂಚಿಸಿದ್ದಾರೆ. ನಿರ್ಮಲಗ್ರಾಮ ಯೋಜನೆಯಡಿಯಲ್ಲಿ ಗ್ರಾಮಸ್ಥರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಹೇಳಿ, ನಿರ್ಮಿಸಿಕೊಂಡ ನಂತರ ಫಲಾನುಭವಿಗಳಿಗೆ ಹಣ ನೀಡದೆ, ಗ್ರಾಪಂ ಸಿಬ್ಬಂದಿಗಳೇ ಬಳಸಿಕೊಂಡಿದ್ದಲ್ಲದೆ, ಗ್ರಾಮಸ್ಥರ ಹೆಸರಿನಲ್ಲಿ ಜಾಬ್ಕಾರ್ಡ್ ತೆಗೆಸಿ ಬೇರೆಡೆ ಕೆಲಸ ಮಾಡಿ, ಗ್ರಾಮಸ್ತರಿಗೆ ಸಿಗಬೇಕಾದ ಕೂಲಿಹಣವನ್ನು ಅಕ್ರಮವಾಗಿ ನಗದೀಕರಿಸಿದ್ದಾರೆ. ಕೇಳಲು ಹೋದರೆ ಗ್ರಾಪಂ ಪಿಡಿಒ, ಕಾರ್ಯದರ್ಶಿ ಬೇಜವಾಬ್ದಾರಿ ಉತ್ತರ ನೀಡುತ್ತಾರೆಂದು ಆರೋಪಿಸಿದ ಗ್ರಾಮಸ್ಥರು, ಗ್ರಾಪಂ ಸದಸ್ಯ ಸೋಬಗಯ್ಯ ನೇತೃತ್ವದಲ್ಲಿ ಬುಧವಾರ, ತಾಪಂ ಕಾರ್ಯಾಲಯಕ್ಕೆ ಆಗಮಿಸಿ, ಕಾರ್ಯನಿರ್ವಹಣಾಧಿಕಾರಿ ಸಾಮಾನ್ಯ ಸಭೆಯಲ್ಲಿದ್ದ ಕಾರಣ ಸಭಾಂಗಣಕ್ಕೆ ನುಗ್ಗಲು ಯತ್ನಿಸಿದರು. ವಿಷಯ ತಿಳಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ತಾಪಂ ಇಒ ಶಂಕರಪ್ಪ, ಸಭೆಯಿಂದ ಹೊರಬಂದು, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಗುರುವಾರ ಗ್ರಾಪಂ ಕಾರ್ಯಾಲಯಕ್ಕೆ ಖುದ್ದು ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ತರು ಪ್ರತಿಭಟನೆ ಹಿಂಪಡೆದರು.