ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಗೆಗಡಲಲ್ಲಿ ಮುಳುಗಿದ ಅಧಿಕಾರಿ ವಿವರಣೆ

Vishwanath S
Updated On : 19 Dec 2013, 12:47 pm

ಕುಣಿಗಲ್: ಒಂದೇ ಕಾಮಗಾರಿಗೆ ಕಳೆದ ಒಂದೂವರೆ ವರ್ಷದಲ್ಲಿ ಬೇರೆ, ಬೇರೆ  ಮೂರು ಅನುದಾನ ಬಳಸಿದರೂ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ತಾಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆದು, ಅಕ್ಷರದಾಸೋಹ ಯೋಜನಾಧಿಕಾರಿಗಳ ಹೇಳಿಕೆಗೆ ಸಭೆ ನಗೆಗಡಲಲ್ಲಿ ಮುಳುಗಿದ ಪ್ರಸಂಗ ನಡೆಯಿತು.
ಕೊಪ್ಪ ಗ್ರಾಪಂ ವ್ಯಾಪ್ತಿಯ ಕೊಪ್ಪ ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟ ಅಡುಗೆಕೋಣೆ ನಿರ್ಮಾಣ ಕಾಮಗಾರಿಗೆ 61ಸಾವಿರ ರು.ಗಳನ್ನು ಅಕ್ಷರದಾಸೋಹ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 40ಸಾವಿರ ವ್ಯಯಿಸಿ ಕಾಮಗಾರಿ ಕೈಗೊಳ್ಳಲಾಗಿದ್ದು ಕಟ್ಟಡ ಲಿಂಟಲ್ ಹಂತಕ್ಕೆ ಬಂದಿದೆ. ಈ ಕಾಮಗಾರಿಗೆ ಸ್ಥಳೀಯ ಗ್ರಾಪಂ 13ನೇ ಹಣಕಾಸು ಯೋಜನೆಯಡಿಯಲ್ಲೂ 40 ಸಾವಿರ ಖರ್ಚು ಮಾಡಿದ್ದಾರೆ ಎಂದರು.
ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್, ಅಧ್ಯಕ್ಷೆ ತೇಜಸ್ವಿನಿ, ಅಕ್ಷರ ದಾಸೋಹ ಯೋಜನಾಧಿಕಾರಿ ಡಿ.ಕೃಷ್ಣ ಅವರನ್ನು ಪ್ರಶ್ನಿಸಿದಾಗ, ನಾವು 40 ಸಾವಿರ ಕೊಟ್ಟಿದ್ದು, ನರೇಗದಲ್ಲೂ ಅನುದಾನ ಪಡೆದಿದ್ದಾರೆ. ಒಂದುವರೆ ವರ್ಷದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ, ನಾವೇನು ಮಾಡೋದು ಎಂದರು. ಈ ಮಧ್ಯೆ 13ನೇ ಹಣಕಾಸು ಯೋಜನೆಯಲ್ಲೂ 40 ಸಾವಿರ ಖರ್ಚಾಗಿದೆ ಎಂದಾಗ ಕೃಷ್ಣ ಅವರು ಹೌದಾ... ಎಂದಾಗ ಸಭೆನಗೆಗಡಲಿನಲ್ಲಿ ಮುಳುಗಿತು.
ಆದರೆ, ಸದಸ್ಯರು, ಅಧ್ಯಕ್ಷರು, ಸ್ಥಾಯಿಸಮಿತಿ ಅಧ್ಯಕ್ಷರು ಒಂದೇ ಕಾಮಗಾರಿಗೆ ಮೂರು ಅನುದಾನದಲ್ಲಿ ಹಣವ್ಯಯವಾಗುತ್ತಿರುವ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದರಲ್ಲದೆ, ಜಿಪಂ ಜೆಇ ಕ್ಷೇತ್ರಪಾಲ್ ಅವರನ್ನು ಪ್ರಶ್ನಿಸಿದಾಗ 13ನೇ ಹಣಕಾಸು ಯೋಜನೆಯಡಿಯಲ್ಲಿ ಅನುದಾನ ವ್ಯಯಿಸಲಾಗಿದೆ ಎಂದರು. ಕೆಲಕಾಲ ಸುದೀರ್ಘ ಚರ್ಚೆನಡೆದು, ಇಡೀ ಕಾಮಗಾರಿ ಪ್ರಕ್ರಿಯೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಒಂದೇ ಕಾಮಗಾರಿಯ ಪ್ರಗತಿ ತೋರಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಇಒ ಅವರಿಗೆ ಸೂಚಿಸಿದ್ದು, ಹೇರೂರು, ಯಡೆಯೂರು, ಮಡಕೆಹಳ್ಳಿ ಮತ್ತು ಬಿಳೇದೇವಾಲಯ ಗ್ರಾಪಂಗಳನ್ನು ಅನುದಾನಗಳ ದುರ್ಬಳಕೆ ದೂರು ಹೆಚ್ಚಿದ್ದು, ವಿಶೇಷ ಲೆಕ್ಕಪತ್ರ ಸಮಿತಿಯಿಂದ ತನಿಖೆ ನಡೆಸಲು ತೀರ್ಮಾನಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement