ಬಿಜೆಪಿಗೆ ದೇಶಾದ್ಯಂತ ಭಾರೀ ಬೆಂಬಲ ಸಿ.ಟಿ. ರವಿ
ಕ.ಪ್ರ. ವಾರ್ತೆ , ಬೆಂಗಳೂರು , ಡಿ. 18
ಬಿಜೆಪಿಯೊಂದಿಗೆ ವಿಲೀನವಾಗಲು ಕೆಜೆಪಿಗೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು, ಹೊಂದಾಣಿಕೆಗಲ್ಲ. ಈ ವಿಷಯದಲ್ಲಿ ಎರಡು ಮಾತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಕ್ತಾರರೂ ಆಗಿರುವ ಮಾಜಿ ಸಚಿವ ಸಿ.ಟಿ. ರವಿ ಸ್ಪಷ್ಟಪಡಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ, ಕೆಜೆಪಿ ಸೇರಿದಂತೆ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಈಗಾಗಲೇ ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬಿಜೆಪಿ ಸೇರ್ಪಡೆಗೆ ಪಕ್ಷದ ವತಿಯಿಂದ ಹಸಿರು ನಿಶಾನೆ ತೋರಿಸಿಯಾಗಿದೆ. ಅವರ ಸೇರ್ಪಡೆ ಯಾವಾಗ ಎಂಬುದು ತೀರ್ಮಾನವಾಗಬೇಕಷ್ಟೆ. ಇನ್ನೊಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಡಿಯೂರಪ್ಪನವರ ಜತೆ ಹೋಗಿರುವ ತುಮಕೂರು ಸಂಸದ ಜಿ.ಎಸ್. ಬಸವರಾಜು ಅಂತವರು ಪಕ್ಷಕ್ಕೆ ಸೇರ್ಪಡೆಯಾಗುವರೋ ಎಂಬ ಪ್ರಶ್ನೆಗೆ, ಮೊದಲು ಹೊಳೆಯಂತಿರುವ ಬಿಎಸ್ವೈ ಸೇರ್ಪಡೆಯಾಗಲಿ. ನಂತರ ಹೊಳೆಯೊಂದಿಗಿರುವವರ ವಿಷಯ ನೋಡೋಣ. ಅವರನ್ನು ದೋಣಿ, ಸೇತುವೆ ಮೂಲಕ ಎಳೆದು ತರಬಹುದು. ಆಗ ಮಾತನಾಡೋಣ. ಸದ್ಯಕ್ಕೆ ಈ ವಿಷಯ ಬೇಡ ಎಂದರು.
ಉತ್ತಮ ಬೆಂಬಲ: ಮುಂದಿನ ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಷಯಗಳ ಆಧಾರದ ಮೇಲೆ ನಡೆಯಲಿದೆ. ಹಾಲಿ ಬಿಜೆಪಿಗೆ ದೇಶಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆ ನಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಇದನ್ನು ನೋಡಿದರೆ ಬಿಜೆಪಿ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲಿದೆ. ನರೇಂದ್ರ ಮೋದಿ ಪ್ರಧಾನಿಯಾಗುವುದು ಬಹುತೇಕ ಖಚಿತ ಎಂದರು.
ರಾಜ್ಯದಲ್ಲಿ ಬಿಜೆಪಿ ಕನಿಷ್ಠ 20 ಸೀಟು ಗೆಲ್ಲುವುದು ಗ್ಯಾರಂಟಿ. ರಾಜ್ಯದಲ್ಲಿ 6 ತಿಂಗಳಲ್ಲೇ ಕಾಂಗ್ರೆಸ್ ಜನಪ್ರಿಯತೆ ಕುಸಿದಿದೆ. ಬಿಎಸ್ವೈ ಬಿಜೆಪಿಗೆ ಬಂದಲ್ಲಿ ಮಾತ್ರ 20 ಸೀಟು ಗೆಲ್ಲಲು ಸಾಧ್ಯ ಎಂಬ ವಿಚಾರ ಊಹೆಗೆ ಬಿಟ್ಟದ್ದು. ಆದರೆ ಬಿಜೆಪಿಗೆ 20 ಕ್ಕೂ ಹೆಚ್ಚು ಲೋಕಸಭಾ ಸ್ಥಾನ ದಕ್ಕುವುದು ಸತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಗೆ ಸ್ವಷ್ಟ ನಿಲುವಿದೆ: ಬಿಜೆಪಿ ಭ್ರಷ್ಟಾಚಾರ ಮಾಡಿಲ್ಲ. ಬಿಜೆಯಲ್ಲಿರುವವರು ಭ್ರಷ್ಟಾಚಾರ ಮಾಡಿದ್ದರೆ ಪಕ್ಷ ಹೊಣೆಯಲ್ಲ. ಭ್ರಷ್ಟಾಚಾರದ ಬಗ್ಗೆ ಬಿಜೆಪಿಗೆ ಸ್ಪಷ್ಟ ನಿಲುವಿದೆ. ಭ್ರಷ್ಟಾಚಾರದೊಂದಿಗೆ ರಾಜಿಯಿಲ್ಲ. ಆರೋಪ ಬಂದಾಕ್ಷಣ ಅಪರಾಧಿಗಳಾಗಲ್ಲ.
ಆರೋಪ ಬಂದಾಕ್ಷಣ ಯಡಿಯೂರಪ್ಪ ಸೇರಿದಂತೆ ಯಾರನ್ನೂ ಅಧಿಕಾರದಿಂದ ಬಿಜೆಪಿ ಇಳಿಸಿಲ್ಲ. ವರದಿ ಆಧಾರದಲ್ಲಿ ಅಧಿಕಾರದಿಂದ ಇಳಿಸಲಾಗಿದೆ. ಅದು ಲೋಕಾಯುಕ್ತ ಇರಬಹುದು, ಇತರೆ ವರದಿ ಇರಬಹುದು. ಆರೋಪ ಎದುರಿಸುತ್ತಿರುವ ಬಿಜೆಪಿ ಜನ ಆರೋಪ ಮುಕ್ತರಾಗಿ ಬರುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು. ಕೇಂದ್ರ ಯುಪಿಎ -2 ಸರ್ಕಾರ ಸುಮಾರು 18 ಲಕ್ಷ ಕೋಟಿ ರು. ಭ್ರಷ್ಟಾಚಾರದಲ್ಲಿ ಸಿಲುಕಿದೆ ಎಂದರು.
ಲಾಬಿ ಪ್ರಭಾವ ನಿರಂತರವಾಗಿದೆ: ರಾಜಕೀಯದಲ್ಲಿ ಲಾಬಿ ಪ್ರಭಾವ ನಿರಂತರವಾಗಿದೆ. ಒಂದು ಕಾಲದಲ್ಲಿ ಲಿಕ್ಕರ್ ಲಾಬಿಯಿತ್ತು. ನಂತರ ರಿಯಲ್ ಎಸ್ಟೇಟ್, ಎಜುಕೇಷನ್, ಗಣಿ ಲಾಬಿ ನಡೆದಿತ್ತು. ಈ ಲಾಬಿಗಳೆಲ್ಲಾ ಆಯಾ ಕಾಲಘಟ್ಟದಲ್ಲಿ ಪ್ರಭಾವ ಬೀರುತ್ತಲೇ ಬಂದಿವೆ ಎಂದು ಸಿಇಟಿ ಅದ್ವಾನಕ್ಕೆ ಯಾರು ನೇರ ಹೊಣೆ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ರಾಜ್ಯ ಮುಖಂಡ ಶಿವಪ್ರಸಾದ್, ಮುಖಂಡರಾದ ಸ್ನೇಕ್ ನಂದೀಶ್, ಶಬ್ಬೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.