ವೃತ ಆಚರಣೆಯಿಂದ ಕುಟುಂಬದಲ್ಲಿ ನೆಮ್ಮದಿ: ಸ್ವಾಮೀಜಿ
ಶಿರಾ: ವೃತ ಆಚರಣೆಗಳಿಂದ ಕುಟುಂಬಗಳಲ್ಲಿ ನೆಮ್ಮದಿ ವಾತಾವರಣ ಮೂಡಲಿದ್ದು ಸಾಮರಸ್ಯ ಜೀವನಕ್ಕೆ ಪ್ರೇರಣೆಯಾಗಲಿದೆ. ಮನುಷ್ಯ ತನ್ನಲ್ಲಿರುವ ಕಲ್ಮಷವನ್ನು ದೂರ ಮಾಡಿ ಮುಕ್ತ ಮನಸ್ಸಿನಿಂದ ದೇವರಲ್ಲಿ ಬೇಡಿದಾಗ ಮಾತ್ರ ಸಂಪತ್ತು ವೃದ್ಧಿ ಆಗಲಿದೆ ಎಂದು ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮಿಜಿ ತಿಳಿಸಿದರು. ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಶ್ರೀಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಶ್ರೀಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ನೆರೆದಿದ್ದ ಭಕ್ತ ಸಮೂಹಕ್ಕೆ ಆಶೀರ್ವವಚನ ನೀಡಿದರು. ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಜಗತ್ತು ಏಷ್ಟೆ ಮುಂದುವರೆದಿದ್ದರು ಸಹ, ವಿಜ್ಞಾನಿಗಳ ಈ ಸಾಧನೆಗೆ ದೈವಬಲವೇ ಕಾರಣ. ಸೃಷ್ಟಿಕರ್ತನ ಮುಂದೆ ಮನುಷ್ಯ ನಗಣ್ಯ. ಆದ್ದರಿಂದ ನಾವು ಭೂಮಿ ಮೇಲೆ ಏಷ್ಟು ದಿನ ಬದಿಕಿದ್ದೇವೆ ಎಂಬುದು ಮುಖ್ಯ ಅಲ್ಲ, ಇರುವವರೆಗೂ ಹತ್ತಾರು ಜನಕ್ಕೆ ಉಪಕಾರಿಯಾಗಿ ಬಾಳಿ ಬಡವರ ಮತ್ತು ನ್ಯಾಯದ ಪರ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಾಗ ಮಾತ್ರ ಮನುಷ್ಯ ಹುಟ್ಟಿದ್ದಕ್ಕೆ ಸಾರ್ಥಕ ಎಂದರು. ನಾದೂರು ಗ್ರಾಪಂ ಅಧ್ಯಕ್ಷೆ ಎಂ.ಲೀಲಾವತಿ ದೇವರಾಜು, ಡಾ. ತಿಪ್ಪೇಸ್ವಾಮಿ, ಕುಂಚಿಟಿಗರ ಸಂಘದ ನಿರ್ದೇಶಕ ಕೆ.ಎಂ. ಶ್ರೀನಿವಾಸ್, ಟಿ. ತಿಮ್ಮಯ್ಯ, ರಂಗಣ್ಣ, ಮೆಡಿಕಲ್ ಉಮೇಶ್, ಗ್ರಾಪಂ ಸದಸ್ಯರಾದ ಗಂಗಾಧರ, ಕಮಲನಾಭ, ರಾಜಣ್ಣ, ಮಾಯಣ್ಣ, ನರಸಿಂಹಯ್ಯ ಉದ್ದರಾಮನಹಳ್ಳಿ ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಶ್ರೀಮಠದ ಆವರಣದಲ್ಲಿ ಹುಣಸೇ ಮರದ ಹಣ್ಣಿನ ಹರಾಜು ಕಾರ್ಯ ನೆರವೇರಿತು.
ಕಂಪ್ಯೂಟರ್ ಡಾಟಾ ಎಂಟ್ರಿ ತರಬೇತಿ
ತಿಪಟೂರು: ಪಟ್ಟಣದ ಕಾಯಕ ಕಂಪ್ಯೂಟರ್ ಎಜುಕೇಷನ್ ಸಹಯೋಗದಲ್ಲಿ ಆಯೋಜಿಸಿರುವ 30 ದಿನಗಳ ಉಚಿತ ಕಂಪ್ಯೂಟರ್ ಡಾಟಾ ಎಂಟ್ರಿ ಅಪರೇಟರ್ ತರಬೇತಿಗಳಿಗಾಗಿ 18ರಿಂದ 30 ವರ್ಷದೊಳಗಿನ ಅರ್ಹ ನಿರುದ್ಯೋಗ ಯುವಕ, ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ಪ್ರಮಾಣ ಪತ್ರದೊಂದಿಗೆ 500 ರು. ತರಬೇತಿ ಭತ್ಯವನ್ನು ನೀಡಲಾಗುವುದು. ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಮಾರ್ಗದರ್ಶನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 9945106366 ಅಥವಾ 9972622769 ಸಂಪರ್ಕಿಸಬಹುದು.
ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದ ಸಹೋದರರು
ಚಿ.ನಾ.ಹಳ್ಳಿ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ತಶ್ವಿನ್ ಸಿಂಹ ನೀರಾವರಿ ಯೋಜನೆಯಲ್ಲಿ ಕೃಷಿ ಚಟುವಟಿಕೆ ಮೂಲಕ ಪರಿಸರ ಸಂರಕ್ಷಣೆ ಮಾಡುವ ವಿಧಾನದ ಬಗ್ಗೆ ಚಿತ್ರಕಲೆಯ ಮೂಲಕ ಮನೋಜ್ಞವಾಗಿ ವಿವರಿಸಿದ ರೀತಿಗೆ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಅದೇ ರೀತಿ ಆತನ ಸಹೋದರ ದಿವ್ಯಪ್ರಭ ಶಾಲೆಯ ವಿದ್ಯಾರ್ಥಿ ಶರಧಿ ಸಿಂಹ ಜಿಲ್ಲಾ ಮಟ್ಟಕ್ಕೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈರ್ವರು ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕ ವೃಂದ ಮತ್ತು ಪೋಷಕರು ಅಭಿನಂದಿಸಿದ್ದಾರೆ.
ಲಲಿತಮ್ಮಗೆ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಿರಾ: 2013-14ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆಗಳ ಪ್ರಬಂಧ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ಲಲಿತಮ್ಮ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಡಿಸೆಂಬರ್ 13 ರಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಗಳಿಸಿ 2014 ಜನವರಿ 7 ರಂದು ತುಮಕೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೂ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಅವರು 2008-09 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು.
ಚಿಕ್ಕನಾಯಕನಹಳ್ಳಿ: ಅಂಬೇಡ್ಕರ್ ಭವನ ಪಾಕಶಾಲೆಗೆ ಶಂಕುಸ್ಥಾಪನೆ
ಚಿಕ್ಕನಾಯಕನಹಳ್ಳಿ: ಸಂವಿಧಾನ ಕರಡು ಸಮತಿ ಅಧ್ಯಕ್ಷರಾದ ಡಾ.ಅಂಬೇಡ್ಕರ್ ಅವರ ಆಶಯದಂತೆ ಶೋಷಿತ ವರ್ಗದ ಹಿತಕ್ಕಾಗಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಲು ತಾಪಂ ಆಡಳಿತ ಸದಾ ಸಿದ್ಧವಾಗಿದೆ ಎಂದು ತಾಪಂ ಅಧ್ಯಕ್ಷ ಎಚ್.ಆರ್. ಶಶಿಧರ್ ನುಡಿದರು.
ಅವರು ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಭವನದ ಪಾಕಶಾಲೆಗೆ ಅಡಿಗಲ್ಲು ಹಾಕಿ ಮಾತನಾಡುತ್ತಿದ್ದರು. ವರ್ಗ 3ರ ತಾಪಂ ನಿಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರದಿಂದ 8 ಲಕ್ಷ ರು.ಗಳ ವೆಚ್ಚದಲ್ಲಿ ಸುಸಜ್ಜಿತ ಪಾಕಶಾಲೆಯನ್ನು ನಿರ್ಮಿಸಲಾಗುವುದು. ಇದರಿಂದ ಆ ವರ್ಗದ ಜನರ ಕಾರ್ಯಕ್ರಮಗಳಿಗೆ ಬಹಳ ಅನುಕೂಲವಾಗುತ್ತದೆ. ಈ ಕಾಮಗಾರಿಗೆ ತಾಪಂ ಸಮತಿಯ ಎಲ್ಲಾ ಸದಸ್ಯರು ತಮ್ಮ ಸಹಕಾರವನ್ನು ಮುಕ್ತ ಮನಸ್ಸಿನಿಂದ ನೀಡಿದ್ದಾರೆ. ಆದ್ದರಿಂದ ಇದರ ಯಶಸ್ಸು ಅವರಿಗೆ ಸಲ್ಲಬೇಕು ಎಂದರು. ತಾಪಂ ಮಾಜಿ ಅಧ್ಯಕ್ಷ ಎಂ.ಎಂ.ಜಗದೀಶ್, ಉಪಾಧ್ಯಕ್ಷ ಎ.ಬಿ. ರಮೇಶ್ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ್, ಸದಸ್ಯರಾದ ನಿರಂಜನಮೂರ್ತಿ, ಕೆಂಕೆರೆ ನವೀನ್, ಚೇತನ ಗಂಗಾಧರ್, ಹೇಮಾವತಿ, ಲತಾ ಕೇಶವಮೂರ್ತಿ, ಲತಾವಿಶ್ವೇಶ್ವರ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯ್ಕ್ ಮುಂತಾದವರಿದ್ದರು.