ವೃತ್ತಿ ಶಿಕ್ಷಣ ಕಾಯ್ದೆ ಜಾರಿಗೆ ಎಬಿವಿಪಿ ವಿರೋಧ
ತುಮಕೂರು: ವೃತ್ತಿ ಶಿಕ್ಷಣ ಪ್ರವೇಶ ಕಾಯ್ದೆ ಜಾರಿ ವಿರೋಧಿಸಿ ಎಬಿವಿಪಿ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ವೃತ್ತಿ ಶಿಕ್ಷಣದ ಪ್ರವೇಶ ಪರೀಕ್ಷೆ ಹಾಗೂ ಪ್ರವೇಶಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2006 ರ ವೃತ್ತಿ ಶಿಕ್ಷಣ ಕಾಯ್ದೆ ಅನುಷ್ಠಾನ ವಿರೋಧಿಸಿ, ಎಬಿಯುಪಿ ವತಿಯಿಂದ ನಗರದ ಟೌನ್ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಟೌನ್ ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾ ನಿರತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಘೋಷಣೆ ಕೂಗಿದರು.
ಈ ಕಾಯ್ದೆಯ ಜಾರಿಯಿಂದ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದರು. ಸರ್ಕಾರ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವಲ್ಲಿ ವಿಫಲವಾಗಿದೆ ಹಾಗೂ ಮಕ್ಕಳ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿರುವ ನೀತಿಯನ್ನು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಹಾಲಿ ಇರುವ ನಿಯಮದ ಪ್ರಕಾರ ಇಂಜಿಯರಿಂಗ್ ವಿಭಾಗದಲ್ಲಿ ಶೇ.45ರಷ್ಟು, ಮೆಡಿಕಲ್ ವಿಭಾಗದಲ್ಲಿ ಶೇ.40ರಷ್ಟು, ವೈದ್ಯಕೀಯ ವಿಭಾಗದಲ್ಲಿ ಶೇ.35 ರಷ್ಟು ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿದ್ದು, ಯಾವುದೇ ಖಾಸಗಿ ಅನುದಾನಿರಹಿತ ಕಾಲೇಜಿನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟುಗಳು ಇಲ್ಲದಂತಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಮೆಡ್-ಕೆ ನಡೆಸುವ ಪರೀಕ್ಷೆಯ ಬಗ್ಗೆ ಈಗಾಗಲೇ ಸಾಕಷ್ಟು ದೂರಗಳಿವೆ. ಇಂತಹ ಸಂದರ್ಭದಲ್ಲಿ ಸರಕಾರ ಉಳಿದ ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್-ಕೆಗೆ ಬಿಟ್ಟು ಕೊಡುತ್ತಿರುವುದು ಖಂಡನೀಯ ಎಂದ ಪ್ರತಿಭಟನಾನಿರತರು, ಇದರಿಂದ ಖಾಸಗಿ ಕಾಲೇಜುಗಳು ತಮಗೆ ಇಷ್ಟ ಬಂದ ಹಾಗೆ ಶುಲ್ಕ ವಸೂಲಿ ಮಾಡಲು ಅನುಕೂಲವಾಗುತ್ತದೆಯಷ್ಟೆ ಎಂದು ದೂರಿದರು.
ಸಂಪೂರ್ಣ ನಿಯಂತ್ರಣ ತಪ್ಪಲಿದೆ: ಈ ಕಾಯ್ದೆಯ ಜಾರಿಯಿಂದ ಖಾಸಗಿ ಕಾಲೇಜುಗಳ ಮೇಲೆ ಸರಕಾರದ ಸಂಪೂರ್ಣ ನಿಯಂತ್ರಣ ತಪ್ಪಲಿದೆ. ಖಾಸಗಿ ಆಡಳಿತ ಮಂಡಳಿಗೆ ಪರಮಾಧಿಕಾರ ಕೊಟ್ಟಂತಾಗುತ್ತದೆ. ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಸಹ ನಮ್ಮ ರಾಜ್ಯದಲ್ಲಿಯೇ ಕಾಮೆಡ್-ಕೆ ಪರೀಕ್ಷೆ ಬರೆಯುವುದರಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಏಕರೂಪ ಶುಲ್ಕ ವ್ಯವಸ್ಥೆಗೆ ಕುತ್ತು: ಆಯಾ ಕಾಲೇಜಿನ ಮೂಲಸೌಕರ್ಯಕ್ಕೆ ಅನುಗುಣವಾಗಿ ಶುಲ್ಕ ನಿಗದಿ ಮಾಡುವುದರಿಂದ ಏಕರೂಪ ಶುಲ್ಕ ವ್ಯವಸ್ಥೆ ಇಲ್ಲವಾಗುತ್ತದೆ. ಒಂದೊಂದು ಕಾಲೇಜಿಗೆ ಒಂದೊಂದು ರೀತಿಯ ಶುಲ್ಕ ಪಾವತಿಸಬೇಕಾಗುತ್ತದೆ. ಸಹಜವಾಗಿಯೇ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಜತೆಗೆ ಖಾಸಗಿ ಸಂಸ್ಥೆಗಳು ನಿಗದಿ ಪಡಿಸುವ ಶುಲ್ಕ ಪಾವತಿ ದುಬಾರಿಯಾಗಲಿದೆ ಎಂದು ಎಬಿವಿಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಳ್ಳನ ಕೈಗೆ ಕೀಲಿ: ರಾಜ್ಯದ 210 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 21 ಮತ್ತು 32 ವೈದ್ಯಕೀಯ ಕಾಲೇಜುಗಳ ಸುಮಾರು 5 ಸಾವಿರ ಸೀಟುಗಳಿಗೆ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ನಡೆಸಲಿದೆ. ಇನ್ನುಳಿದ ಸುಮಾರು 75 ಸಾವಿರ ಸೀಟುಗಳಿಗೆ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಸುವುದರಿಂದ ಕಳ್ಳನ ಕೈಗೆ ಕೀಲಿ ಕೊಟ್ಟಂತಾಗುತ್ತದೆ. ಈ ಹಿಂದೆ ಖಾಸಗಿ ಕಾಲೇಜುಗಳು ವಾಮ ಮಾರ್ಗ ಮೂಲಕ ಲಕ್ಷಾಂತರ ರು.ಗೆ ಸೀಟು ಮಾರಾಟ ಮಾಡುತ್ತಿದ್ದವು. ಈ ಕಾಯ್ದೆಯ ಜಾರಿಯಿಂದ ಕಾನೂನು ಬದ್ಧವಾಗಿಯೇ ಕೊಳ್ಳೆ ಹೊಡೆಯಲು ಅವಕಾಶ ನೀಡಿದಂತಾಗುತ್ತದೆ ಎಂದು ದೂರಿದ್ದಾರೆ.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್, ನಗರ ಕಾರ್ಯದರ್ಶಿ ಅಮರೇಶ್, ವಿದ್ಯಾರ್ಥಿ ಮುಖಂಡರಾದ ಕಾವ್ಯ, ಮಂಜುಳಾ, ಪ್ರದೀಪ್, ಯಶವಂತ್ ಸೇರಿದಂತೆ ನಗರದ ಅನೇಕ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.