ಅಡಕೆ ಬೆಳೆಗಾರರ ಜೀವನ ಭದ್ರತೆಗೆ ಪರಿಹಾರ ನೀಡಿ
ಪುತ್ತೂರು: ಸರ್ಕಾರ ಅಡಕೆಗೆ ನಿಷೇಧ ಹೇರುವ ನಿರ್ಧಾರ ಕೈಗೊಳ್ಳುವ ಮೊದಲು ಅಡಕೆ ಬೆಳೆಗಾರರ ಜೀವನ ಭದ್ರತೆಗಾಗಿ ಪರಿಹಾರ ಯೋಜನೆ ರೂಪಿಸುವ ಬದ್ಧತೆ ನೀಡಬೇಕು ಎಂದು ಮಂಡ್ಯ ಪಾಂಡವಪುರದ ಶಾಸಕ, ರಾಜ್ಯ ರೈತ ಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ.
ಶುಕ್ರವಾರ, ಪುತ್ತೂರಿನ ಕಲ್ಲಾರೆಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ನಡೆದ ಸಂಘದ ಸಭೆಯಲ್ಲಿ ಮಾತನಾಡಿ, ರೈತರ ಸಾಲ ಮನ್ನಾ ಮಾಡಬೇಕು, ಅಡಕೆ ಬೆಳೆಯಿಂದ ಪರ್ಯಾಯ ಬೆಳೆಗೆ ಹೋಗುವ ಬೆಳೆಗಾರರಿಗೆ ಎಕರೆಗೆ ಕನಿಷ್ಠ 20 ಲಕ್ಷ ಪುನರ್ವಸತಿ ಪರಿಹಾರ ಯೋಜನೆ ಜಾರಿಗೊಳಿಸಬೇಕು, ಕಾಫಿ, ರಬ್ಬರ್ ಬೆಳೆಗಳಿಗೆ ನೀಡಿದಂತೆ ಅಡಕೆ ಬೆಳೆಗೂ ಅಡಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆ ಜೊತೆಗೆ ಅಡಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿ ಪುನರ್ ಪರಿಶೀಲಿಸಬೇಕು ಮತ್ತು ಸರಿಯಾದ ರೀತಿಯಲ್ಲಿ ಸಂಶೋಧನೆಗಳನ್ನು ನಡೆಸಲು ಕೃಷಿ ವಿಜ್ಞಾನಿಗಳು, ಸಂಪನ್ಮೂಲ ವ್ಯಕ್ತಿಗಳು, ರೈತ ಸಂಘಟನೆಗಳೊಡನೆ ಚರ್ಚಿಸಿದ ಬಳಿಕ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಅಡಕೆ ಉಪಯೋಗಿಸುವುದರಿಂದ ಆರೋಗ್ಯಕ್ಕೆ ಹಾನಿಕಾರಕವಲ್ಲವೆಂದು ಸಾಬೀತು ಪಡಿಸಲಿ ಎಂದರು.