ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಏಡ್ಸ್ ನಿರ್ಮೂಲನೆಗೆ ಜನ ಜಾಗೃತಿ ಅಗತ್ಯ: ಡಾ.ಶ್ರೀಧರ್

Vishwanath S
Updated On : 21 Dec 2013, 1:29 am

ತಿಪಟೂರು: ಮನುಕುಲದ ಮಹಾಮಾರಿ ಏಡ್ಸ್ ಇಂದು ಸಾಮಾಜಿಕ ಪಿಡುಗಾಗಿ ವ್ಯಾಪಕವಾಗಿ ಹರಡುತ್ತಿದ್ದು, ಈ ಕಾಯಿಲೆ ನಿರ್ಮೂಲನೆಗೆ ಜಾಗೃತಿ  ಅಗತ್ಯ ಎಂದು ಕುಮಾರ್ ಆಸ್ಪತ್ರೆ ವೈದ ಡಾ.ಶ್ರೀಧರ್ ಕಿವಿಮಾತು ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ಎನ್‌ಎಸ್‌ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಹೆಚ್‌ಐವಿ ಹಾಗೂ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕ ಎಂ.ಡಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಏಡ್ಸ್ ರೋಗಕ್ಕೆ ಸಂಬಂಧಿಸಿದಂತೆ ಮಾಹಿತಿ, ಶಿಕ್ಷಣ ಹಾಗೂ ಕೌನ್ಸಿಲಿಂಗ್  ಮುಖ್ಯ ಎಂದರು. ಇದೇ ವೇಳೆ ವಿದ್ಯಾರ್ಥಿನಿಯರು ವೈದ್ಯರೊಂದಿಗೆ ಸಂವಾದ ನಡೆಸಿ ತಮ್ಮ ಸಂದೇಹ ಪರಿಹರಿಸಿಕೊಂಡರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಸೌಭಾಗ್ಯಮ್ಮ, ರಾಜಶೇಖರ್, ಬಸವರಾಜು,ವೇದಮೂರ್ತಿ, ರಘು, ಪ್ರಕಾಶ್, ದೊಡ್ಡೇಗೌಡ ಮತ್ತಿತರರು ಉಪಸ್ಥಿತರಿದ್ದರು. ನಾಗವೇಣಿ ಪ್ರಾರ್ಥಿಸಿ, ದಿವ್ಯ ಸ್ವಾಗತಿಸಿ, ಉಷಾ ವಂದಿಸಿದರು.
ಎನ್ನೆಸ್ಸೆಸ್ ಶಿಬಿರದಲ್ಲಿ ಏಡ್ಸ್ ಜಾಗೃತಿ
ತಿಪಟೂರು: ಪಟ್ಟಣದ ಕಲ್ಪತರು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಘಟಕದ ಸಂಯುಕ್ತಾಶ್ರಯದಲ್ಲಿ ಏಡ್ಸ್ ನಿರ್ಮೂಲನಾ ಕಾರ್ಯಕ್ರಮ  ಆಯೋಜಿಸಲಾಗಿತ್ತು. ಸಾರ್ವಜನಿಕ ಆಸ್ಪತ್ರೆ ಸಂಪನ್ಮೂಲ ಅಧಿಕಾರಿ ಉಮೇಶ್ ಮಾತನಾಡಿ, ಏಡ್ಸ್ ನಿರ್ಮೂಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿದರು. ಕಾಲೇಜು ಆಡಳಿತ ಸಂಯೋಜಕ ಮೃತ್ಯುಂಜಯ, ಪ್ರಾಂಶುಪಾಲ ಗುಂಡಪ್ಪ,  ಉಪನ್ಯಾಸಕರಾದ ಮಹದೇವಯ್ಯ, ರೇಣುಕಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.  ವೇದಿಕೆ ಕಾರ್ಯಕ್ರಮ ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅರಿವು ಮೂಡಿಸಲಾಯಿತು.
'ಉತ್ತಮ ಹವ್ಯಾಸದಿಂದ ವಿಶ್ವಾಸ ವೃದ್ಧಿ'
ತುಮಕೂರು: ಎಕ್ಸ್‌ಲೆನ್ಸಿ ಎನ್ನುವುದು ಬೇರೆಲ್ಲಿಂದಲೋ ಬರುವುದಲ್ಲ. ಅದು ನಮ್ಮ ಹವ್ಯಾಸಗಳಿಂದ ಬರುವಂತಹುದು. ನಮ್ಮ ಹವ್ಯಾಸಗಳು-ಅಭ್ಯಾಸಗಳಿಂದ ಕಲಿತ ಯಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತೀರಿ.ಆದರೆ ಉತ್ತಮ ಯಂತ್ರಾಂಶಗಳಿಲ್ಲದೆ ಯಾವುದೇ ತಂತ್ರಾಂಶವು ಪ್ರಯೋಜನಕ್ಕೆ ಬಾರದು ಎಂದು ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯ ಪ್ರಾಂಶುಪಾಲ ಡಾ. ಕೆ.ಎ. ಕೃಷ್ಣಮೂರ್ತಿ ಕಿವಿಮಾತು ಹೇಳಿದರು.
ನಗರದ ಸಿದ್ದಾರ್ಥ ತಾಂತ್ರಿಕ  ಮಹಾ ವಿದ್ಯಾಲಯದ  ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ವಿಭಾಗ ಹಾಗೂ ಟೆಕ್ವಿಪ್ ಸಹಯೋಗದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಎಲೆಕ್ಟ್ರಾನಿಕ್ ವಿದ್ಯಾರ್ಥಿಗಳು ಯಂತ್ರಾಂಶವನ್ನು ಅಭಿವೃದ್ಧಿಪಡಿಸುವವರಿದ್ದೀರಿ. ಉತ್ತಮ ಯಂತ್ರಾಂಶಗಳಿಲ್ಲದೆ ಯಾವುದೇ ತಂತ್ರಾಂಶವು ಪ್ರಯೋಜನಕ್ಕೆ ಬಾರದು ಎಂದು ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ವಿದ್ಯಾರ್ಥಿಗಳನ್ನು ಕುರಿತು ಅವರು ಹೇಳಿದರು. ಬೆಂಗಳೂರಿನ ಎಡ್‌ಗೇಟ್ ಟೆಕ್ನಾಲಜೀಸ್‌ನಲ್ಲಿ ಇಂಜಿನಿಯರ್ ಹರಾಜುಲ್ ಆಕ್ಯೂ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.  
ಡಾ. ಎಮ್. ಝಡ್ ಕುರಿಯನ್, ಡಾ. ರಾಜೇಶ್ ಕಾಮತ್, ಸಂಸ್ಥೆ ಸಮನ್ವಯಾಧಿಕಾರಿ  ವೈ. ಎಂ.ರೆಡ್ಡಿ  ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ಕಾನೂನು ತರಬೇತಿ
ತುಮಕೂರು: ಕರ್ನಾಟಕ ಬಾರ್ ಕೌನ್ಸಿಲ್‌ನಲ್ಲಿ ಹೆಸರನ್ನು ನೋಂದಾಯಿಸಿರುವ ಪ.ಜಾತಿ, ಪ.ವರ್ಗದ ಕಾನೂನು ಪದವೀಧರರಿಗೆ 2013-14ನೇ ಸಾಲಿಗೆ ಆಡಳಿತ ನ್ಯಾಯಾಧೀಕರಣದ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ತರಬೇತಿ ಅವಧಿಯು 4 ವರ್ಷದ್ದಾಗಿದ್ದು, ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಧ್ಯೆ ತರಬೇತಿ ಬಿಡಲು ಅವಕಾಶವಿಲ್ಲ. ತರಬೇತಿ ಅವಧಿಯಲ್ಲಿ ಮಾಹೆಯಾನ ರು. 2 ಸಾವಿರ ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿ 40 ವರ್ಷಗಳ ವಯೋವುತಿ ದಾಟಿರಬಾರದು, ವಾರ್ಷಿಕ ಕುಟುಂಬ ಆದಾಯ 2 ಲಕ್ಷ ಮೀರಬಾರದು. ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿ. 31 ರೊಳಗೆ ಸಂಬಂಧಿಸಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಂಜೆ 5.30 ರೊಳಗೆ ತಲುಪುವಂತೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.   
ಟ್ಯಾಲಿ ತರಬೇತಿ
ತುಮಕೂರು: ಮಿಪ್‌ಸೆಡ್ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕ, ಯುವತಿಯರಿಗಾಗಿ ವಸತಿಯುತ ಉಚಿತ 30 ದಿನಗಳ ಕಂಪ್ಯೂಟರ್ ಟ್ಯಾಲಿ ತರಬೇತಿ ನೀಡುವ ಸಲುವಾಗಿ ಅರ್ಹರನ್ನು ಸಂದರ್ಶನಕ್ಕೆ ಆಹ್ವಾನಿಸಿದೆ.  ತುಮಕೂರು ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿಗಳಿಗೆ ಕಂಪ್ಯೂಟರ್ ಟ್ಯಾಲಿ ತರಬೇತಿಗಾಗಿ ಕನ್ನಡ ಓದಲು ಮತ್ತು ಬರೆಯಲು ಬರುವ 18 ರಿಂದ 45 ವಯೋವುತಿಯೊಳಗಿನ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸುವವರು ಮಿಪ್‌ಸೆಡ್ ತರಬೇತಿ ಸಂಸ್ಥೆ, 1ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕುವೆಂಪು ವೃತ್ತ, ಕುವೆಂಪು ನಗರ, ಭುವಿ ಆಯುರ್ವೇದ್ ಆಸ್ಪತ್ರೆ ಹಿಂಭಾಗ, ತುಮಕೂರು ಇಲ್ಲಿ ಡಿ. 28 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವಿವರಕ್ಕೆ ಮೊ. 94800-41026 ಹಾಗೂ ಕಚೇರಿ ದೂ. 0816-2273386 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.  
ನಾಳೆ ಗಣಪತಿ ಹೋಮ
ಕೊರಟಗೆರೆ: ಇಲ್ಲಿನ ಕಟ್ಟೆ ಗಣಪತಿ ದೇವಾಲಯ ಅಭಿವೃದ್ಧಿ  ಸಮಿತಿ, ಯುವಕ ಮಂಡಲಿ ಹಾಗೂ ಮಹಿಳಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಗಣಪತಿ ಹೋಮ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಕಟ್ಟೆ ದೇವಾಲಯದಲ್ಲಿ ಬೆಂಗಳೂರಿನ ಲತಾ ಪದ್ಮನಾಭ ಮತ್ತು ಕುಟುಂಬ ಮಹಾ ಗಣಪತಿ ಹೋಮ ಏರ್ಪಡಿಸಿದೆ. ಬಾಳೆಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಧ್ಯಾಹ್ನ 12-30 ಕ್ಕೆ ಗಂಟನಾದ ಸಂಪ್ರೋಕ್ಷಣೆ, ಪೂರ್ಣಾಹುತಿ ಕಾರ್ಯಕ್ರಮ ಹಾಗೂ ಗಣಪತಿ ಮೋದಕ ಹೋಮ ಏರ್ಪಡಿಸಲಾಗಿದೆ.
ಅಂಗನವಾಡಿ ಹುದ್ದೆ; ಅರ್ಜಿ ಆಹ್ವಾನ
ತುರುವೇಕೆರೆ: ತಾಲೂಕಿನ ಆನೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡೇನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಸಾಮಾನ್ಯ ವರ್ಗದ ಅಂಗನವಾಡಿ ಸಹಾಯಕಿ ಹುದ್ದೆಗೆ ಸಾಮಾನ್ಯ ವರ್ಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ  ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿ.21 ಆಗಿದ್ದು,  ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವೈ.ಟಿ.ರಸ್ತೆ, ಗಣಪತಿ ಪೆಂಡಾಲ್ ಪಕ್ಕ, ತುರುವೇಕೆರೆ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
ಪ್ರತಿಭಾ ಕಾರಂಜಿ: ಜಿಲ್ಲಾ ಮಟ್ಟಕ್ಕೆ ಆಯ್ಕೆ
ಪಾವಗಡ: ಜಿಪಂ ತುಮಕೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ವಿಭಾಗ, ಕ್ಷೇತ್ರ ಶಿಕ್ಷಣಾಧಿಕಾರಿ  ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿ ಪಾವಗಡ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ ಹಾಗೂ ಛದ್ಮ ವೇಷದಲ್ಲಿ ತಾಲೂಕಿನ ರಾಪ್ಟೆ ಗ್ರಾಮದ ಸರ್ಕಾರಿ ಪ್ರಾಥಾಮಿಕ ಪಾಠಶಾಲೆಯ ವಿದ್ಯಾರ್ಥಿಗಳು  ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  
ಮಧುಗಿರಿಯಲ್ಲಿ ಮಾನವ ಸರಪಳಿ
ಮಧುಗಿರಿ: ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ 2006ರ ಕಾಯ್ದೆ ಜಾರಿ ವಿರೋಧಿಸಿ ಹಾಗೂ ಉನ್ನತ ಶಿಕ್ಷಣ ಮಂತ್ರಿ ಆರ್.ವಿ.ದೇಶಪಾಂಡೆ ಹೇಳಿಕೆ ಖಂಡಿಸಿ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಮಧುಗಿರಿ ಪಟ್ಟಣದ ಡೂಂಲೈಟ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ಧೋರಣೆ ಖಂಡಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಎಬಿವಿಪಿ ಸಂಚಾಲಕ ವೆಂಕಟೇಶ್ ಮಾತನಾಡಿ, ಈ ಕಾಯ್ದೆ ಜಾರಿಯಿಂದ  ಸಾವಿರಾರು ಪ್ರತಿಬಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.  ಜಿಲ್ಲಾ ಸಂಚಾಲಕ ರವಿ ಮಾತನಾಡಿ, ಈ ಕಾಯ್ದೆಯಿಂದ ಖಾಸಗಿ ಕಾಲೇಜುಗಳ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿ ಖಾಸಗಿ ಆಡಳಿತ ಮಂಡಳಿಗೆ ಪರಮಾಧಿಕಾರಿ ಕೊಟ್ಟಂತಾಗುತ್ತದೆ ಎಂದರು. ರಮೇಶ್ ಸೇರಿದಂತೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನೇತೃತ್ವವಹಿಸಿದ್ದರು.
ಲೋಕಾಯುಕ್ತ ದಾಳಿ: ಉಪ ತಹಸೀಲ್ದಾರ್ ಅಮಾನತು
ಚಿಕ್ಕನಾಯಕನಹಳ್ಳಿ: ವ್ಯವಸಾಯಗಾರ ಕುಟುಂಬದ ದೃಢೀಕರಣ ನೀಡುವ ವೇಳೆ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪತಹಸೀಲ್ದಾರ್ ಹೆಚ್.ಬಿ.ಬಸವರಾಜು ಎಂಬಾತನನ್ನು ಜಿಲ್ಲಾಧಿಕಾರಿ ಹಾಗು ಶಿಸ್ತುಪ್ರಾಧಿಕಾರಿಗಳು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ತಾಲೂಕಿನ ಹುಳಿಯಾರು ಹೋಬಳಿ ನಾಡ ಕಚೇರಿ ಉಪ ತಹಸೀಲ್ದಾರ್ ಹೆಚ್.ಬಿ.ಬಸವರಾಜು ಕುರಿಹಳ್ಳಿ ಕಾವಲ್ ಗ್ರಾಮದ ನವೀನ್‌ಕುಮಾರ್  ಎಂಬುವರಿಂದ ವ್ಯವಸಾಯಗಾರ ಕುಟುಂಬದ ದೃಢೀಕರಣ ನೀಡುವ ಸಲುವಾಗಿ 2700 ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಿದ್ದು, ಆರೋಪಿ ನೌಕರರನ್ನು ಸೇವೆಯಿಂದ ಅಮಾನತಿನಲ್ಲಿಡುವಂತೆ ಆದೇಶಿಸಿದ್ದಾರೆ.
ಸ್ಟವ್ ಸಿಡಿದು
ವ್ಯಕ್ತಿ ಸಾವು
ಪಾವಗಡ: ಮನೆಯಲ್ಲಿ ಅಡುಗೆ ಮಾಡುವ ವೇಳೆ ಆಕಸ್ಮಿಕವಾಗಿ ಸೀಮೆಎಣ್ಣೆ ಸ್ಟವ್ ಸಿಡಿದು ವಿವಾಹಿತನೊಬ್ಬ ಮೃತಟ್ಟಿರುವ ಘಟನೆ ಗುರುವಾರ ಬೆಳಗ್ಗೆ  ತಾಲೂಕಿನ ನಿಡಗಲ್ ವ್ಯಾಪ್ತಿಯ ತುಮಕುಂಟೆ ಗ್ರಾಮದಲ್ಲಿ ನಡೆದಿದೆ. ಮೂಡಲಗಿರಿಯಪ್ಪ (30) ಮೃತ ವ್ಯಕ್ತಿ.  ಮೂಡಲಗಿರಿಯಪ್ಪ ಬೆಳಗಿನ ಜಾವ ತಮ್ಮ ಮನೆಯಲ್ಲಿ ಅಡುಗೆ ಮಾಡುವ ಸಲುವಾಗಿ ಸೀಮೆ ಎಣ್ಣೆ ಸ್ಟೌಟ್‌ಗೆ ಬೆಂಕಿ ಹಚ್ಚುತ್ತಿರುವಾಗ ಆಕಸ್ಮಿಕವಾಗಿ ಸ್ಟೌವ್ ಸಿಡಿದು ಮೈಯಲೆಲ್ಲಾ ಸೀಮೆ ಎಣ್ಣೆ ಅವರಿಸಿ ದೇಹಕ್ಕೆ ಬೆಂಕಿ ಹೊತ್ತುಕೊಂಡ ಪರಿಣಾಮ, ಆತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿದೆ.  ಮೂಡಲಗಿರಿಯಪ್ಪ ಪತ್ನಿ ಲಕ್ಷ್ಮಮ್ಮ ಎಂಬುವರು  ಆರಸೀಕೆರೆ ಪೊಲೀಸ್ ಠಾಣೆಗೆ ನೀಡಿದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ತನಿಖೆ ಕೈಗೊಂಡಿದ್ದಾರೆ.
ಇಂದು ಗುರುವಂದನೆ
ಶಿರಾ: ಪಟ್ಟಣದ ಜೆಕೆಎಂಹೆಚ್‌ಪಿಬಿಎಸ್ ಶಾಲೆಯ ಹಲವು ನಿವೃತ್ತ ಶಿಕ್ಷಕರಿಗೆ ತಾಲೂಕು ಕಸಾಪ ಹಾಗೂ ಬಾಲಕರ ಸರ್ಕಾರಿಮಾಧ್ಯಮಿಕ ಪಾಠಶಾಲೆಗಳ ಸಂಯುಕ್ತಾಶ್ರಯದಲ್ಲಿ ಡಿ.21ರಂದು ಗುರುವಂದನಾ ಕಾರ್ಯಕ್ರಮಏರ್ಪಡಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ನಗರದ ಜೆಕೆಎಂಹೆಚ್‌ಪಿಬಿಎಸ್ ಶಾಲೆಯಲ್ಲಿ ನಡೆಯುವ ಸಮಾರಂಭವನ್ನು ಮಾಜಿ ಸಚಿವ ಬಿ.ಸತ್ಯನಾರಾಯಣ ಉದ್ಘಾಟಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸುವರು. ಪ್ರಾಂಶುಪಾಲ ಎನ್.ನಾಗಪ್ಪ ಮುಖ್ಯ ಭಾಷಣ ಮಾಡುವರು. ವಕೀಲರಾದ ಬಾಲಕೃಷ್ಣ, ಜಿಪಂ ಸದಸ್ಯ ಅರೇಹಳ್ಳಿ ಡಾ.ಎಸ್.ಪಿ.ಶಂಕರ್, ಡಾ.ಬಿ.ಪಿ.ವಿನಯ್‌ಕುಮಾರ್, ನಗರಸಭಾ ಸದಸ್ಯೆ ಶಾರದಾ ಶಿವಕುಮಾರ್ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement