ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತಿಘಟ್ಟ ಖಾತ್ರಿ ಅವ್ಯವಹಾರ ತನಿಖೆಗೆ ಆಗ್ರಹ

Vishwanath S
Updated On : 21 Dec 2013, 1:29 am

ಕ.ಪ್ರ.ವಾರ್ತೆ ,  ಚಿಕ್ಕನಾಯಕನಹಳ್ಳಿ ,  ಡಿ.20
ತಾಲೂಕಿನ ಹಂದನಕೆರೆ ಹೋಬಳಿ ಮತಿಘಟ್ಟ ಮತ್ತು ಮಲ್ಲೀಗೆರೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗ ಖಾತ್ರಿ ಕೋಟ್ಯಂತರ  ರುಪಾಯಿ ಅವ್ಯವಹಾರದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯರು ಪಕ್ಷಬೇಧ ಮರೆತು ಒತ್ತಾಯಿಸಿದರು.
ತಾಪಂ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ತಾಪಂ ಸದಸ್ಯರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಬಡ ಕೂಲಿಕಾರ್ಮಿಕರಿಗೆ ವಾರ್ಷಿಕ 100 ದಿನಗಳ ಉದ್ಯೋಗ ಕಲ್ಪಿಸುವ ಆಶಯದಿಂದ ಜಾರಿಗೆ ತರಲಾಗಿದೆ. ಆದರೆ ಸದರಿ ಗ್ರಾಮ ಪಂಚಾಯ್ತಿಗಳಲ್ಲಿ ಜೆಸಿಬಿ ಮತ್ತು ಇಟಾಚಿಗಳಿಂದ ಕಾಮಗಾರಿಗಳನ್ನು ರಾಜಾರೋಷವಾಗಿ ನಡೆಸುತ್ತಿದ್ದು, ತಾಲೂಕು ಆಡಳಿತ ಜಾಣ ಕುರುಡು ಪ್ರದರ್ಶಿಸುತ್ತಿದೆ.
 ಇಲ್ಲಿ ಯಾವ ಬಡರೈತನಿಗೂ ಉದ್ಯೋಗ ಖಾತ್ರಿ ಪ್ರಯೋಜನ ಸಿಗುತ್ತಿಲ್ಲ. ಗ್ರಾಮಪಂಚಾಯ್ತಿಯವರು ಗುತ್ತಿಗೆದಾರರಿಗಾದರೆ ಹಗಲು ರಾತ್ರಿಯೆನ್ನದೆ ಎನ್‌ಎಂಆರ್ ತೆಗೆಸಿ ಕೊಡುವ ಸಿಬ್ಬಂದಿ ಅದೇ ರೈತನಿಗೆ ನೆಟ್ ವರ್ಕ್ ಸಮಸ್ಯೆ ನೆಪವೊಡ್ಡುತ್ತಾರೆ. ಇದು ಗ್ರಾಪಂಗಳು ಹಣಮಾಡುವ ದಂಧೆಯೋ? ಅಥವಾ ಸಾರ್ವಜನಿಕರ ಹಿತಕ್ಕಾಗಿ ಜಾರಿಗೊಳಿಸಿರುವ ಯೋಜನೆಯೋ? ಎಂಬಂತಾಗಿದೆ ಎಂದು ಕಿಡಿಕಾರಿದರು.
ಈ ವೇಳೆ ಸಮಜಾಯಿಷಿ ನೀಡಿದ ತಾಪಂ ನಿರ್ವಾಹಣಾಧಿಕಾರಿ ಇದುವರೆಗೂ ನನ್ನ ಗಮನಕ್ಕೆ ದೂರು ಬಂದಿಲ್ಲ.  
ಇನ್ನು ಮುಂದೆ ನಾನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂಬ ಉತ್ತರದಿಂದ ಕೆಂಡಾಮಂಡಲವಾದ ತಾಪಂ ಸದಸ್ಯರಾದ ಕೆಂಕೆರೆ ನವೀನ್, ಜಯಣ್ಣ, ಚೇತನಗಂಗಾಧರ್, ಹೇಮಾವತಿ ಮುಂತಾದವರು ಸಭೆಯಲ್ಲಿ  ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮತಿಘಟ್ಟ ತಾಪಂ ಸದಸ್ಯ ನಿರಂಜನಮೂರ್ತಿ ಕಾರ್ಯನಿರ್ವಹಣಾಧಿಕಾರಿಗಳ ಉತ್ತರದಿಂದ ಕೋಪೋದ್ರಿಕ್ತರಾಗಿ ತನ್ನ ಕೈಲಿದ್ದ ಅನುಮೋದನೆಯಾಗದ ಪಟ್ಟಿಗಳನ್ನು ತೂರಿ ನೋಡಿ ನಿಮ್ಮ ಸಿಬ್ಬಂದಿ ಹಣಕೊಡದವರ ಪಟ್ಟಿಯನ್ನು ಅನುಮೋದನೆಗೆ ಕಳುಹಿಸದೆ ಸತಾಯಿಸುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಅಧ್ಯಕ್ಷ ಹೆಚ್.ಆರ್.ಶಶಿಧರ್ ಕೂಡಲೇ ಮತಿಘಟ್ಟ ಮತ್ತು ಮಲ್ಲೀಗೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಕಮಾಗಾರಿ ನಿಲ್ಲಿಸಿ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ತಾಪಂ ಉಪಾಧ್ಯಕ್ಷ ಎ.ಬಿ.ರಮೇಶ್‌ಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆ ವಿತರಿಸಿರುವ ಸೈಕಲ್‌ಗಳನ್ನು ಕೈಕಾಲು ನೆಟ್ಟಗಿರುವವರಿಗೆ ವಿತರಿಸಲೆಂದು ಸರ್ಕಾರ ನೀಡಿದೆ.ಆದರೆ ನಿಲ್ಲಲು ಸಾಧ್ಯವಾಗದ ವಿಕಲಚೇತನ ಮಗುವಿಗೆ ಸೈಕಲ್ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ವಸಂತಕುಮಾರ್, ಸದಸ್ಯರಾದ ಎಂ.ಎಂ.ಜಗದೀಶ್ ಮತ್ತಿತರರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement