ಸರ್ಕಾರಿ ಶಾಲೆ ಖಾಸಗಿ ಸವಾಲು ಮೆಟ್ಟಿ ನಿಲ್ಲಲಿ
ಕ.ಪ್ರ.ವಾರ್ತೆ , ಕುಣಿಗಲ್ , ಡಿ.20
ಕೆಲ ಖಾಸಗಿ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯ ಇಲ್ಲದೆ ಇದ್ದರೂ, ಸರ್ಕಾರಿ ಶಾಲೆಗಳಿಗೆ ತೀವ್ರ ಸವಾಲನ್ನು ಒಡ್ಡುತ್ತಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರು ಈ ಸವಾಲುಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಖಾಸಗಿ ಶಾಲೆಗಳಿಗೆ ಗುಣಾತ್ಮಕ ಪೈಪೋಟಿ ನೀಡುವಂತೆ ಶಾಸಕ ಡಿ.ನಾಗರಾಜಯ್ಯ ಕಿವಿಮಾತು ಹೇಳಿದರು.
ಹುಲಿಯೂರುದುರ್ಗ ಹೋಬಳಿಯ ಡಿ.ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ
ಆರ್ಐಡಿಎಫ್ ಯೋಜನೆಯಡಿಯಲ್ಲಿ 8 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಎರಡು ಕೊಠಡಿಗಳ ಉದ್ಘಾಟನೆ ಮತ್ತು 9 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೊರತೆ ನಡುವೆಯೂ ಸವಾಲು: ಗುಣಾತ್ಮಕ ಶಿಕ್ಷಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಥೇಚ್ಚವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದರೂ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ದುರದೃಷ್ಟಕರ. ಕೆಲ ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ನಡುವೆಯೂ ಸರ್ಕಾರಿ ಶಾಲೆಗಳಿಗೆ ಸವಾಲು ನೀಡುತ್ತಿವೆ.
ಶಿಕ್ಷಕರು ಬದ್ಧತೆ ಪ್ರದರ್ಶಿಸಲಿ: ಬಹುತೇಕ ಎಲ್ಲಾ ಮೂಲಭೂತ ಸೌಲಭ್ಯಗಳಿದ್ದರೂ ಸರ್ಕಾರಿ ಶಾಲಾ ಶಿಕ್ಷಕರ ನೈತಿಕತೆ, ಬದ್ಧತೆ ಹಾಗೂ ಜವಾಬ್ದಾರಿ ಕೊರತೆ ಕಾರಣ ಇಂದು ಸರ್ಕಾರಿ ಶಾಲೆಗಳ ಬಗ್ಗೆ ಪೋಶಕರು ನಕರಾತ್ಮಕ ಧೋರಣೆ ಹೊಂದಿದ್ದಾರೆ. ಪೋಶಕರ ನಕಾರಾತ್ಮಕ ಭಾವನೆಯನ್ನು ಸಕರಾತ್ಮಕವಾಗಿ ಪರಿವರ್ತಿಸಿ ಸರ್ಕಾರಿ ಶಾಲೆಗಳು, ಶೈಕ್ಷಣಿಕ ಅಭಿವೃದ್ದಿ ದಿಸೆಯಲ್ಲಿ ಖಾಸಗಿ ಶಾಲೆಗಳಿಗೆ ಪೋಟಿ ನೀಡುವಂತ ವಾತವರಣವನ್ನು ಸರ್ಕಾರಿ ಶಾಲಾ ಶಿಕ್ಷಕರು ಮಾಡಿದಾಗ ಸಾರ್ಥಕತೆ ಮೂಡುತ್ತದೆ,ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಕಾರ್ಯನಿರ್ವಹಿಸಬೇಕಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ, ಶಿಕ್ಷಕರ ಕೊರತೆ ನೀಗಿಸುವಲ್ಲಿ ಇಲಾಖೆ ವಿಫಲವಾಗಿದೆ. ನಿಯೋಜನೆಗೊಂಡ ಶಿಕ್ಷಕರು, ಸೂಕ್ತ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಹೋಗದ ಕಾರಣ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. 2014-15ನೇ ಸಾಲಿಗೆ ಶಿಕ್ಷಕರ ಕೊರತೆ ಉಂಟಾಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಬಿಇಒಗೆ ಸೂಚನೆ ನೀಡಿದರು. ತಾಪಂ ಅಧ್ಯಕ್ಷೆ ತೇಜಸ್ವಿನಿ, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಡಿ.ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಸುಜಾತ, ಡಾ.ಬಿ.ಎನ್.ರವಿ, ಬಿಇಒ ಸಿದ್ದಯ್ಯ, ಶಾಲಾ ಮುಖ್ಯೋಪಾಧ್ಯಾಯ ಶ್ರೀರಾಮಪ್ಪ, ಮುಖಂಡರಾದ ಕುಲುಮೆಪಾಳ್ಯ ಶಿವಣ್ಣ, ಮೊದೂರು ಗಂಗಾಧರ, ರಾಮಣ್ಣ ಉಪಸ್ಥಿತರಿದ್ದರು.