ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾತಿ ಮೀರಿ ನಿಂತವನೇ ನೈಜ ಸಾಹಿತಿ

Vishwanath S
Updated On : 23 Dec 2013, 1:00 am

ಕನ್ನಡಪ್ರಭ ವಾರ್ತೆ ತುಮಕೂರು ಡಿ.22
ಜಾತಿ ವ್ಯವಸ್ಥೆಯೊಳಗೆ ಜಾತಿ ಎನ್ನುವುದು ಸತ್ಯವಲ್ಲ, ಜಾತಿ ಹಸಿ-ಹಸಿ ಸುಳ್ಳು, ಸಾಹಿತಿಗಳು ಜಾತಿ ಮೀರಿ ಬೆಳೆದಾಗ ಮಾತ್ರ ನಿಜವಾದ ಸಾಹಿತಿಯಾಗುತ್ತಾರೆ ಎಂದು ಸಾಹಿತಿ ಎನ್. ನಾಗಪ್ಪ ಕಿವಿಮಾತು ಹೇಳಿದರು.
ಅವರು ಇಲ್ಲಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ತು.ರಾ. ಸುಂದರಾಜು ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ 'ಹೃದಯದಿಂದ ಹೃದಯಕ್ಕೆ' ಕೃತಿ ಕುರಿತು ಮಾತನಾಡಿದರು.
ಕನ್ನಡದ ಅನೇಕ ಸಾಹಿತಿಗಳ ಪೈಕಿ ತು.ರಾ. ಸುಂದರರಾಜ್ ಒಬ್ಬರಾಗಿದ್ದಾರೆ. ಸಾವಿರಾರು ಕವನಗಳನ್ನು ಬರೆದಿರುವ ಸರದಾರರಾದ ಇವರು ಈಗ 500 ಕ್ಕೂ ಹೆಚ್ಚು ಕವನಗಳನ್ನು 5 ಪುಸ್ತಕಗಳಲ್ಲಿ ಹೊರ ತಂದಿದ್ದಾರೆ. ಇವರ ಎಲ್ಲಾ ಕವನಗಳು ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ಕವನಗಳೇ ಆಗಿವೆ ಎಂದು ತಿಳಿಸಿದರು.
ಸಮಾಜದಲ್ಲಿ ನಾಟಕದ ಪ್ರೀತಿ ಹೆಚ್ಚುತ್ತಿದೆ. ತೋರು ಪ್ರೀತಿ ತೋರುವವರೇ ಹೆಚ್ಚಿದ್ದು, ಅಂತರಂಗ ಬಹಿರಂಗಗಳಲ್ಲಿ ಏಕತೆ ಇಲ್ಲ ಎಂದು ನುಡಿದರು. ಇಂದು ದೇವಾಲಯಗಳನ್ನು ಕಟ್ಟಿಸಿ ಧರ್ಮಾಧಿಕಾರಿಗಳ ಪಟ್ಟವನ್ನು ಅಲಂಕರಿಸಲು ಹಲವರು ಪ್ರಯತ್ನಿಸುತ್ತಾರೆ, ದೇವಾಲಯಗಳನ್ನು ತಾನು ದುಡಿದು ಬೆವರು ಹರಿಸಿ ಸಂಪಾದಿಸಿದ ಹಣದಿಂದ ದೇವಾಲಯ ಕಟ್ಟುವವರೇ ವಿರಳ. ಯಾರ ತಲೆಯ ಮೇಲೆ ಕೈಇಟ್ಟು ದುಡಿದ ಹಣ, ಲಂಚದ ಹಣ, ಮೋಸದ ಹಣದಿಂದ ದೇವಾಲಯವನ್ನು ಕಟ್ಟಿಸಿ ಪೂಜಿಸಿದರೆ ದೇವರು ತೃಪ್ತನಾಗುವುದಿಲ್ಲ ಎಂದರು.
ನಮ್ಮ ದೇಶದಲ್ಲಿರುವ ಪುರಾತನ ದೇವಾಲಯಗಳು ಕಲಾತ್ಮಕ ದೇವಾಲಯಗಳಾಗಿ ಗಮನ ಸೆಳೆಯುತ್ತಿವೆ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ದೇವರನ್ನೇ ಬಂಡವಾಳ ಮಾಡಿಕೊಂಡಿರುವುದು ವಿಷಾದನೀಯ ಎಂದರು.
ಸಮಾಜದಲ್ಲಿ ಬಂಗಾರಕ್ಕೆ ಬೆಲೆ ಕೊಡಬಾರದು, ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು, ಮನಸ್ಸು, ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು ಆಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ತು.ರಾ. ಸುಂದರಾಜು ಅವರ 5 ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಪೆರುಮಾಳ್ ಅವರು ಇಂದಿನ ತಂತ್ರಜ್ಞಾನ ವ್ಯವಸ್ಥೆಯ ನಡುವೆ ಕಂಪ್ಯೂಟರ್, ಟಿವಿಗಳ ಮೇಲೆ ವ್ಯಾಮೋಹ ಹೆಚ್ಚಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ. ಪ್ರತಿಯೊಬ್ಬರಲ್ಲೂ ಓದುವ ಸಂಸ್ಕೃತಿ ಬೆಳೆಸುವುದು ಅಗತ್ಯ ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದಕೊಡುಗೆ ನೀಡಿರುವ ತುಮಕೂರು ಜಿಲ್ಲೆಯಲ್ಲಿ ನಾನು ಕೆಲಸ ಮಾಡುವಾಗ ವೀಚಿಯಂತಹ ಸಾಹಿತಿಗಳ ಒಡನಾಡವಿತ್ತು, ನನ್ನ ಕವನಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದ್ದರು. ತುರಾಸು ಹಾಗೂ ವೀಚಿ ನಡುವೆ ಒಂದು ಒಳ್ಳೆಯ ಬಾಂಧವ್ಯ ಇತ್ತು ಎನ್ನುವುದು ನಂತರ ಗೊತ್ತಾಯಿತು. ಇಂತಹ ಸಂದರ್ಭದಲ್ಲಿ 5 ಪುಸ್ತಕಗಳನ್ನು ಲೋಕಾರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಯಾವುದೇ ವ್ಯಕ್ತಿಗೆ ಅಧಿಕಾರ ಮುಖ್ಯವಲ್ಲ, ಆದರೆ ಅವರು ಅಧಿಕಾರದಲ್ಲಿದ್ದಾಗ ಮಾಡುವ ಜನಸೇವೆ ಮುಖ್ಯವಾಗುತ್ತದೆ. ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನೌಕರರಿಗೆ ಅಗತ್ಯವಾದ ಸೇವೆಗಳು ಮತ್ತು ಅವರಿಗೆ ಹತ್ತು ಹಲವು ಸಲಹೆಗಳು ನೀಡಿ ಆ ಮೂಲಕ ಉತ್ತಮವಾದ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದ ಅವರು ತು.ರಾ. ಸುಂದರರಾಜ್ ಒಬ್ಬ ಕವಿಯಾಗಿ ಉತ್ತಮ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಸಾಹಿತಿ ತು.ರಾ. ಸುಂದರರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆ ಖಜಾನಾಧಿಕಾರಿಯಾಗಿ ಕೆಲಸ ಮಾಡಿದ ಅವಧಿಯಲ್ಲಿ ಸಹಕರಿಸಿದವರನ್ನು ನೆನಪಿಸಿಕೊಳ್ಳುವುದರ ಜೊತೆಗೆ ಹೃದಯಾಘಾತವಾದಾಗ ಅವರನ್ನು ಕಾಪಾಡಿದ ವೈದ್ಯ ಡಾ. ಮುರಳೀಧರ್ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಅವರ ಸೇವೆಯನ್ನು ನೆನೆದು ಭಾವುಕರಾದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವಾಚಸ್ಪತಿ ಕವಿತಾಕೃಷ್ಣ ಮಾತನಾಡಿ, ತುಮಕೂರು ಜಿಲ್ಲೆ ಕಲೆ, ಸಾಹಿತ್ಯ ಸಾಂಸ್ಕೃತಿಕ ಬೀಡು. ಇಂತಹ ಬೀಡಿನಲ್ಲಿ ತು.ರಾ. ಸುಂದರರಾಜ್ ಅವರ 500 ಕ್ಕೂ ಹೆಚ್ಚು ಕವನಗಳ ನಾಲ್ಕು ಪುಸ್ತಕಗಳು ಇಂದು ಲೋಕಾರ್ಪಣೆಯಾಗುತ್ತಿರುವುದು ಸಂತಸ ಮೂಡಿದೆ. ಇದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಗೌರವಿಸಿರುವುದು ಮೆರಗು ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ತಂಬರ ಕೃತಿ ಕುರಿತು ಶಂಕರೇಗೌಡ ಮ. ಬಿರಾದರ್, ಮೂರು ಮಾತು ನೂರು ಬಣ್ಣ ಕೃತಿ ಕುರಿತು ನಾರಾಯಣಸ್ವಾಮಿ, ಕತ್ತಲ ಹಡೆದ ಬೆಳಕು ಕೃತಿ ಕುರಿತು ಮುರಳೀಕೃಷ್ಣ ಮಾತನಾಡಿದರು.
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕವಿ ಕೆ.ಬಿ. ಸಿದ್ಧಯ್ಯ, ಡಾ.ಎಂ. ಮುರಳೀಧರ್, ಪತ್ರಕರ್ತ ಎಸ್. ಪುರುಷೋತ್ತಮ್, ಜಾನಪದ ಸಾಹಿತಿ ಸಿರಿವರ ಶಿವರಾಮಯ್ಯ, ಚಿತ್ರಕಲಾವಿದ ಡೇವಿಡ್ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಂ. ಸಣ್ಣಮುದ್ದಯ್ಯ, ಎನ್‌ಎಂಸಿ ಖಜಾನೆ ವಿಶೇಷಾಧಿಕಾರಿ ಬಿ.ಎಂ. ಪುರುಷೋತ್ತಮ್‌ಸಿಂಗ್, ಎಂ.ಆರ್. ಬೋಬಡೆ, ಶಂಕರಲಿಂಗಯ್ಯ, ಎಂ.ಬಿ. ಪೂಜಾರ್, ಜಿಲ್ಲಾ ಖಜಾನಾಧಿಕಾರಿ ವಿನಯ್ ಕುಮಾರ್, ಧನಂಜಯ, ಕಂಟಲಗೆರೆ ಸಣ್ಣಹೊನ್ನಯ್ಯ, ಶೈಲಾ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement