ನಾಡು-ನುಡಿಗಾಗಿ ಯುವಶಕ್ತಿ ಹೋರಾಡಲಿ
ಶಿರಾ: ಕನ್ನಡ, ಕನ್ನಡಿಗ, ಕರ್ನಾಟಕದ ಕಾವಲುಗಾರರಂತೆ ಜವಾಬ್ದಾರಿ ಹೊತ್ತಿರುವ ಕನ್ನಡ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ವಿವೇಕಾನಂದ ಕ್ರೀಡಾಂಗಣದಲ್ಲಿ ದರ್ಶನ್ ಅಭಿಮಾನಿ ಬಳಗ, ಪಟ್ಟನಾಯಕನಹಳ್ಳಿ ವಿನಾಯಕ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕರ ಸಂಘ ಹಾಗೂ ಕನ್ನಡಸೇನೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಂಘಟನೆಗಳು ನಾಡು-ನುಡಿಯ ವಿಚಾರದಲ್ಲಿ ಲೋಪಗಳು ಕಂಡರೆ ದೇಶ ಕಾಯುವ ಯೋಧರಂತೆ ಸಿಡಿದು ನಿಲ್ಲುವ ಹೋರಾಟದ ಮನೋಭಾವ ಪ್ರತಿಯೊಬ್ಬ ಯುವಕರಿಗೂ ಮಾದರಿಯೆಂದರು. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಎಲ್ಲೂ ರಾಜಿಯಾಗದೇ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇನೆ ಅಲ್ಲದೇ ನಿರುದ್ಯೋಗಿ ಯುವಕರನ್ನು ಗಮನದಲ್ಲಿಟ್ಟುಕೊಂಡು ಅನೇಕ ಕೈಗಾರಿಕೆಗಳನ್ನು ತಾಲೂಕಿಗೆ ತರುತ್ತಿದ್ದೇನೆ ಎಂದರಲ್ಲದೇ ಹೊಸವರ್ಷದಲ್ಲಿ ತಾಲೂಕಿಗೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಕನ್ನಡ ಹೋರಾಟಗಾರರ ಮೇಲಿರುವ ಮೊಕದ್ದಮೆ ಹಿಂಪಡೆಯಬೇಕೆಂದು ಸಚಿವರಲ್ಲಿ ಮನವಿ ಮಾಡಿದರು ಜೊತೆಗೆ ಶಿರಾ ನಗರದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಸ್ಥಾಪಿಸುವ ಬಗ್ಗೆ ಸಂಘಟನೆಗಳ ಒತ್ತಾಸೆಯನ್ನು ಸಚಿವರಿಗೆ ತಿಳಿಸಿದರು. ಪ್ರಾಂಶುಪಾಲ ಮಹೇಂದ್ರಪ್ಪ, ಸಾಹಿತಿ ಲೋಕೇಶ್ಕೃಷ್ಣ ಮತ್ತಿರರು ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಅಶೋಕ ಕುಮಾರ್, ಎಪಿಎಂಸಿ ಅಧ್ಯಕ್ಷ ಶಶಿಧರ್ಗೌಡ, ನಗರಸಭಾ ಸದಸ್ಯರಾದ ಅಮಾನುಲ್ಲಾ ಖಾನ್, ಹಬೀಬ್ಖಾನ್, ಅಂಜಿನಪ್ಪ, ಮುಖಂಡರಾದ ಭೂವನಹಳ್ಳಿ ಸತ್ಯನಾರಯಣ, ನೂರುದ್ದೀನ್, ಕರವೇ ತಾಲೂಕು ಅಧ್ಯಕ್ಷ ನಾಗರಾಜು, ಜಯಕರ್ನಾಟಕ ತಾಲೂಕು ಅಧ್ಯಕ್ಷ ಉಮೇಶ್ಗೌಡ, ಹಾರೋಗೆರೆ ಮಹೇಶ್, ರೈತ ಸಂಘದ ಅಧ್ಯಕ್ಷ ಪರಮಶಿವಯ್ಯ, ಪಟ್ಟನಾಯಕನಹಳ್ಳಿ ವಿನಾಯಕ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕರ ಸಂಘದ ಕಾರ್ಯದರ್ಶಿ ಎಸ್.ಮಧುಸೂದನ, ಖಜಾಂಚಿ ಶಿವಕುಮಾರ್, ದರ್ಶನ್ ಅಭಿಮಾನಿ ಬಳಗದ ನಗರಾಧ್ಯಕ್ಷ ದರ್ಶನ್, ಉಪಾಧ್ಯಕ್ಷ ಈಶ್ವರ್, ಪ್ರಧಾನ ಕಾರ್ಯದರ್ಶಿಲಿಂಗರಾಜು, ಕನ್ನಡ ಸೇನೆ ಅಧ್ಯಕ್ಷ ಕೊಟ್ಟ ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.