ಪಾಲಿಕೆಗೆ ಆರು ತಿಂಗಳಲ್ಲಿ ಚುನಾವಣೆ
ಕನ್ನಡಪ್ರಭ ವಾರ್ತೆ , ತುಮಕೂರು , ಡಿ.22
ರಾಜಧಾನಿಯ ಭವಿಷ್ಯದ ಉಪನಗರಿ ತುಮಕೂರಿಗೆ ಮಹಾನಗರ ಪಾಲಿಕೆ ಸ್ಥಾನ ಮಾನ ಸಿಕ್ಕಿದ ಬೆನ್ನಲ್ಲೇ ಹಾಲಿ ಸದಸ್ಯರಿಗೆ ಈಗ ಮಾಜಿಗಳಾಗುವ ಭೀತಿ ಶುರುವಾಗಿದೆ.
ಹಾಲಿ ನಗರಸಭೆಗೆ ಸದಸ್ಯರು ಆಯ್ಕೆಯಾಗಿದ್ದು ಕಳೆದ ಮಾರ್ಚ್ 8. ಆದರೆ, ಅವರೆಲ್ಲಾ ಅಧಿಕಾರ ಸ್ವೀಕರಿಸಿದ್ದು ಸೆಪ್ಟೆಂಬರ್ 17 ರಂದು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಇಷ್ಟು ವಿಳಂಬವಾಯ್ತು. ಇನ್ನೇನು ಅಧಿಕಾರ ಚಲಾಯಿಸುವ ಹೊತ್ತಲ್ಲಿ ಪಾಲಿಕೆ ಭೂತ ಕಾಡುತ್ತಿದೆ.
ಮಹಾನಗರ ಪಾಲಿಕೆ ಕಾಯ್ದೆ ಪ್ರಕಾರ ಪಾಲಿಕೆ ಘೋಷಣೆಯಾದ 6 ತಿಂಗಳೊಳಗೆ ಚುನಾವಣೆ ನಡೆಸಬೇಕು. 3 ತಿಂಗಳಲ್ಲಿ ಬೇಕಾದರೂ ಚುನಾವಣೆ ನಡೆಸಬಹುದಾಗಿದೆ. ಹೀಗಾಗಿ ಚುನಾವಣೆ ನಡೆಯುವುದು ಅನಿವಾರ್ಯ ಎಂಬಂತಾಗಿದೆ.
ಹಿಗ್ಗಲಿವೆ ವಾರ್ಡ್‌ಗಳು: ತುಮಕೂರಿನಲ್ಲಿ ಹಾಲಿ 35 ವಾರ್ಡ್‌ಗಳಿದೆ. ಪಾಲಿಕೆಯಾದಾಗ 41 ವಾರ್ಡ್ ಆಗಬೇಕಾಗಿದೆ. ಹೀಗಾಗಿ ಹಾಲಿ ಇರುವ 35 ವಾರ್ಡ್‌ಗಳನ್ನು ವಿಂಗಡಿಸಿ 41 ವಾರ್ಡ್‌ಗಳನ್ನಾಗಿ ವಿಂಗಡಿಸಲಾಗುವುದು. ಇಷ್ಟರಲ್ಲೇ ಈ ಪ್ರಕ್ರಿಯೆಗೂ ಚಾಲನೆ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಾಲಿಕೆ ಸದಸ್ಯರೆಂಬುದಷ್ಟೆ ಹೆಗ್ಗಳಿಕೆ: ಹೊಸದಾಗಿ ನೇಮಕಗೊಂಡಿರುವ ನಗರಸಭಾ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಹುರುಪಿನಿಂದ ಕೆಲಸ ಮಾಡಲು ನಿರ್ಧರಿಸಿದ್ದರು. ಅಷ್ಟರಲ್ಲಿ ಪಾಲಿಕೆ ಘೋಷಣೆಯಾಗಿರುವುದರಿಂದ ಅವರೆಲ್ಲಾ ಇನ್ನೇನು ಮಾಜಿಗಳಾಗುತ್ತಿದ್ದಾರೆ. ಇನ್ನಾರು ತಿಂಗಳಿನಲ್ಲಿ ಚುನಾವಣೆ ನಡೆಯುವುದು ನಿಶ್ಚಿತ ಎನ್ನಲಾಗಿದೆ.
ಹಿಂದೆ ಪಾಲಿಕೆ ರದ್ದುಪಡಿಸಲಾಗಿತ್ತು: ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತುಮಕೂರನ್ನು ಪಾಲಿಕೆಯನ್ನಾಗಿ ಘೋಷಿಸಲಾಗಿತ್ತು. ಆ ಸಂದರ್ಭದಲ್ಲಿ 2008 ರ ಜನಗಣತಿ ಪ್ರಕಾರ 2 ಲಕ್ಷ 80 ಸಾವಿರ ಜನಸಂಖ್ಯೆ ಇತ್ತು. 2012 ಕ್ಕೆ3 ಲಕ್ಷ ದಾಟುತ್ತದೆ ಎಂಬ ವರದಿಯನ್ನು ಸಲ್ಲಿಸಿದ್ದರಿಂದ ಪಾಲಿಕೆ ಘೋಷಣೆಯಾಗಿತ್ತು. ಆದರೆ ಆಗ ಅಸ್ತಿತ್ವದಲ್ಲಿದ್ದ ನಗರಸಭೆ ಹಾಗೂ ಸದಸ್ಯರು ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಮೊರೆ ಹೋಗಿದ್ದರು. ಆಗ ಕೋರ್ಟ್ ಸರ್ಕಾರದ ವಿರುದ್ಧವಾಗಿ ತೀರ್ಪು ನೀಡಿತ್ತು. ಹಾಗಾಗಿ ನಗರಸಭಾ ಸದಸ್ಯರು ಐದು ವರ್ಷ ಅಧಿಕಾರ ಅನುಭವಿಸಿದ್ದರು.
ಈಗ ಏನೂ ಮಾಡಲು ಸಾಧ್ಯವಿಲ್ಲ: ಆದರೆ ಈಗ ಜನಸಂಖ್ಯೆ 3 ಲಕ್ಷ ದಾಟಿರುವುದರಿಂದ ಸದಸ್ಯರು ಕೋರ್ಟ್‌ಗೆ ಹೋದರೂ ಅವರ ಪರವಾಗಿ ತೀರ್ಪು ಬರಲು ಸಾಧ್ಯವಿಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹೀಗಾಗಿ ಹಾಲಿ ಸದಸ್ಯರು ಇನ್ನಾರು ತಿಂಗಳಿನಲ್ಲಿ ಮಾಜಿ ಆಗ್ತಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕೈ ತಪ್ಪಿದ ಸ್ಥಾಯಿ ಸಮಿತಿ: ಮೊದಲ ಬಾರಿಗೆ ನಗರಸಭೆಗೆ ಸ್ಪರ್ಧಿಸಿ ಗಣನೀಯ ಸಾಧನೆ ಮಾಡಿದ್ದ ಕೆಜೆಪಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆಯುವ ಅವಕಾಶ ಸಿಕ್ಕಿತ್ತು. ಆದರೆ ಆ ಪಕ್ಷದವರು ಯಾರನ್ನು ಆಯ್ಕೆ ಮಾಡಬೇಕೆಂಬ ಚರ್ಚೆಯಲ್ಲಿ ಮುಳುಗಿದ್ದರಿಂದ ಕಡೆಗೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ನೇಮಿಸಲು ಆಗಲೇ ಇಲ್ಲ. ಕಡೇ ಪಕ್ಷ ಕಳೆದ ತಿಂಗಳಿನಲ್ಲೇ ಮಾಡಿದ್ದರೆ ಒಂದು ತಿಂಗಳಾದರೂ ಅಧಿಕಾರ ಅನುಭವಿಸಬಹುದಿತ್ತು. ಈಗ ಪಾಲಿಕೆಯಾಗಿರುವುದರಿಂದ ಸ್ಥಾಯಿ ಸಮಿತಿ ಎಂಬುದೇ ಇರುವುದಿಲ್ಲ.
ಮುಖ್ಯಾಂಶಗಳು
1. ಪಾಲಿಕೆಯಾಗಿರುವುದರಿಂದ 100 ಕೋಟಿ ಹಣ ಬರುತ್ತೆ
2. ಅಧ್ಯಕ್ಷೆಗೆ ಮೇಯರ್‌ಗಿರಿ, ಸದಸ್ಯರು ಕಾರ್ಪೊರೇಟರ್
3. ನರ್ಮ್ ಯೋಜನೆಯಡಿ ಅನುದಾನ ಬರುವ ನಿರೀಕ್ಷೆ
4. 6 ತಿಂಗಳೊಳಗೆ ಚುನಾವಣೆ- ಹೊಸ ಪಾಲಿಕೆ ಅಸ್ತಿತ್ವಕ್ಕೆ
5. ಸ್ಥಾಯಿ ಸಮಿತಿ ವಿಸರ್ಜನೆ, 41 ವಾರ್ಡ್ ವಿಂಗಡಣೆ
-ಉಗಮ ಶ್ರೀನಿವಾಸ್