ಪುರಸಭೆ ದಿವ್ಯ ನಿರ್ಲಕ್ಷ್ಯ
ಚಿಕ್ಕನಾಯಕನಹಳ್ಳಿ: ಪಟ್ಟಣದ ಖಾಸಗಿ ಬಸ್ನಿಲ್ದಾಣದ ಸಮೀಪವಿರುವ ಕೋಳಿ ಅಂಗಡಿಗಳು ಸಾಂಕ್ರಾಮಿಕ ರೋಗಗಳ ಉಗಮಸ್ಥಾನವಾಗಿದ್ದು, ಪುರಸಭೆ ದಿವ್ಯ ನಿರ್ಲಕ್ಷ ತಾಳಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಜನವಸತಿ ಪ್ರದೇಶ ಮತ್ತು ಖಾಸಗಿ ಬಸ್ನಿಲ್ದಾಣದ ಜನಸಾಂದ್ರತೆ ಸೇರಿ ಯಾವಾಗಲು ಜನಜಂಗುಳಿಯಿಂದ ತುಂಬಿರುವ ಪ್ರದೇಶದಲ್ಲಿರುವ ಕೋಳಿ ಮತ್ತು ಮಾಂಸದ ಅಂಗಡಿಗಳಿಂದುಂಟಾಗುವ ತ್ಯಾಜ್ಯಗಳ ವೈಜ್ಞಾನಿಕವಾಗಿ ವಿಲೇವಾರಿಯಾಗದೆ ಹಲವು ರೋಗಗಳ ಉಗಮ ಸ್ಥಾನವಾಗಿದೆ.
ಸುಮಾರು 20ಕ್ಕೂ ಹೆಚ್ಚು ಕೋಳಿ ಮತ್ತು ಮಾಂಸದ ಗೂಡಂಗಡಿಗಳನ್ನು ಬೇಕಾಬಿಟ್ಟಿಯಾಗಿ ಮತ್ತು ಅಸ್ಥವ್ಯಸ್ಥವಾಗಿ ತೆರೆದಿದ್ದು, ಸಾರ್ವಜನಿಕರ ಆರೋಗ್ಯದ ಕಡೆ ಗಮನ ಹರಿಸಿಲ್ಲ. ಮಾತ್ರವಲ್ಲ, ಇಲ್ಲಿರುವ ಅಂಗಡಿಯವರಿಗೆ ಬರೀ ವ್ಯಾಪಾರದಿಂದ ಬರುವ ಲಾಭಾಂಶದ ಮೇಲಷ್ಟೇ ಗಮನವಿದೆಯೆ ಹೊರತು,ಪರಿಸರದ ಸ್ವಚ್ಛತೆಯಾಗಲಿ, ಜನರಿಗೆ ಗುಣಮಟ್ಟದ ಮಾಂಸವನ್ನು ಕೊಡಬೇಕೆಂಬ ಜವಾಬ್ದಾರಿಯಾಗಲಿ ಇರುವಂತೆ ಕಂಡುಬರುವುದಿಲ್ಲ.
ಈ ಅಂಗಡಿಗಳ ಸಮೀಪ ವಾಸದ ಮನೆ, ಜನಸಾಂದ್ರತೆ ಬಸ್ನಿಲ್ದಾಣ, ಸಸ್ಯಾಹಾರಿ ಹೋಟೆಲ್ಗಳು, ದಿನನಿತ್ಯ ಬಳಕೆಯ ಅಂಗಡಿಗಳಿದ್ದು, ಇಲ್ಲಿಗೆ ವ್ಯಾಪಾರಕ್ಕಾಗಿ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ವ್ಯಾಪಾರ ಮಾಡಬೇಕಾಗಿದೆ. ಹೆಜ್ಜೆ ಇಟ್ಟಲ್ಲಿ ಕೋಳಿ ಮೂಳೆಗಳು, ಮಾಂಸದ ತುಣುಕುಗಳು ಕಾಲಿಗೆ ಸಿಕ್ಕುತ್ತವೆ. ಇವುಗಳನ್ನು ತಿನ್ನಲು ಪೈಪೋಟಿ ಮೇಲೆ ಕಾದಾಡುವ ಬೀಡಾಡಿ ನಾಯಿಗಳ ಆಕ್ರೋಶಕ್ಕೆ ಅಮಾಯಕರು ಅನೇಕ ಬಾರಿ ತುತ್ತಾಗಿ ಕಚ್ಚಿಸಿಕೊಂಡ ನಿದರ್ಶನಗಳಿವೆ.
ಇದಕ್ಕೆ ಕಲಶವಿಟ್ಟಂತೆ ಸನಿಹದಲ್ಲಿ ಬಯಲು ಶೌಚಾಲಯವಿದ್ದು, ಇಲ್ಲಿ ನೂರಾರು ಜನ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಎರಡು ದುರ್ವಾಸನೆಗಳು ಸೇರಿ ಅನೈರ್ಮಲ್ಯದ ಪರಿಣಾಮ ಸುತ್ತಮುತ್ತ ವಾಸಿಸುವ ಜನರಿಗೆ ಹಲವಾರು ರೋಗಗಳು ಉಳ್ಬಣಿಸಿವೆ.
ಪಟ್ಟಣದ ಪ್ರಜೆಗಳ ಆರೋಗ್ಯ ಕಾಪಾಡಬೇಕಾದ ಪುರಸಭಎ ಕಂಡೂಕಾಣದಂತೆ ಕಣ್ಣುಮುಚ್ಚಿ ಕುಳಿತಿದೆ.ಈ ಬಗ್ಗೆ ಅನೇಕಬಾರಿ ಅಲ್ಲಿನ ಪರಿಸರದ ಜನ ದೂರಿತ್ತರು ಸಹ ಯಾವುದೇ ಉಪಯೋಗವಾಗಿಲ್ಲ ಎಂದು ದೂರುತ್ತಿದ್ದಾರೆ.
ಬೇಸಿಗೆ ಹತ್ತಿರದಲ್ಲಿರುವ ಸಮಯದವಾದ್ದರಿಂದ ಇಂತಹ ಮಾನವ ನಿರ್ಮಿತ ಕೊಳಚೆ ಪ್ರದೇಶಗಳಿಂದ ಇಡೀ ಪಟ್ಟಣಕ್ಕೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.ಈಗಲಾದರು ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ, ಜನಾರೋಗ್ಯದ ಕಡೆ ಗಮನ ಹರಿಸದ, ಜಡಭತರನ ಗುಣವನ್ನು ಮೈಗೂಡಿಸಿಕೊಂಡಿರುವ ಪುರಸಭೆಯ ಕಿವಿ ಹಿಂಡುವ ಕೆಲಸ ಮಾಬೇಕಾಗಿದೆ.