ಪ್ರತಿಭೆ ಅನಾವರಣಕ್ಕೆ ಪ್ರದೇಶ-ಜನಾಂಗದ ಹಂಗಿಲ್ಲ
ಕನ್ನಡಪ್ರಭ ವಾರ್ತೆ , ತುಮಕೂರು , ಡಿ.22
ಕೊಳಗೇರಿಯಾದರೇನು? ಅಲ್ಲಿಯೂ ಪ್ರತಿಭಾವಂತ ಮಕ್ಕಳಿದ್ದಾರೆ ಎಂದು ಮೇಯರ್ ಗೀತಾ ರುದ್ರೇಶ್ ಅಭಿಪ್ರಾಯಪಟ್ಟರು.
ಅವರು ಬಾಪೂಜಿ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸಮಾನ ಮಕ್ಕಳ ಮಂಟಪದ ವತಿಯಿಂದ ಕೊಳಗೇರಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಮಕ್ಕಳ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಳಗೇರಿ ಮಕ್ಕಳು ಬಿಡಿಸಿದ ಚಿತ್ರಗಳು ತುಂಬಾ ಚೆನ್ನಾಗಿದ್ದು, ಇವು ಅವರ ಪ್ರತಿಭೆಗಳಿಗೆ ಸಾಕ್ಷಿಯಾಗಿದೆ. ಪ್ರತಿಭಾವಂತ ಮಕ್ಕಳು ಇರುವ ಕೊಳಗೇರಿಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಅವರ ಹೋರಾಟಗಳಲ್ಲಿ ಜೊತೆಯಿದ್ದು ಶೇ.22.75 ರ ಅನುದಾನದಲ್ಲಿ ಕೊಳಗೇರಿಗಳಿಗೆ ವಿಶೇಷವಾದ ಒತ್ತು ನೀಡಲಾಗುವುದು ಎಂದರು. ಮಕ್ಕಳ ಶಿಕ್ಷಣಕ್ಕೆ ಇಲ್ಲಾ ರೀತಿಯ ನೆರವನ್ನು ಮಹಾನಗರ ಪಾಲಿಕೆಯಿಂದ ನೀಡಲಾಗುವುದು ಎಂದು ತಿಳಿಸಿದರು.
ಮಕ್ಕಳ ಜಾತ್ರೆ ಉದ್ಘಾಟಿಸಿ ಮಾತನಾಡಿದ ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ. ಬಸವಯ್ಯ ಮಾತನಾಡಿ, ಕೊಳಗೇರಿ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿರುತ್ತದೆ. ಕೊಳಗೇರಿಗಳಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ, ಇವರಿಗೆ ಸಹಕಾರ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ. ಮಕ್ಕಳು ಶಿಕ್ಷಣವಂತರಾಗುವ ಮೂಲಕ ಏಳಿಗೆ ಹೊಂದಬೇಕು. ಕೊಳಗೇರಿ ಜನರು ತುಂಬಾ ಸ್ವಾಭಿಮಾನಯುತ ಜೀವನ ನಡೆಸುತ್ತಾರೆ. ಕೊಳಗೇರಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ತುಮಕೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಒದಗಿಸಬೇಕು. ಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂದೋಲನಾ-ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಕಳೆದ ಮೂರು ವರ್ಷಗಳಿಂದ ಕೊಳಗೇರಿಗಳಿಗೆ ಶೈಕ್ಷಣಿಕ ಸಮೀಕ್ಷೆ ಮಾಡಿದಾಗ ಎಸ್‌ಎಸ್‌ಎಲ್‌ಸಿ ನಂತರ ಶಾಲೆ ಬಿಡುವವರು ಹೆಚ್ಚಿದ್ದು, ಕೊಳಗೇರಿಗಳಲ್ಲಿ ಜಾಗತೀಕರಣದ ಪರಿಣಾಮವಾಗಿ ಶಿಕ್ಷಣ ಗಗನ ಕುಸುಮವಾಗಿದೆ. ಆದ್ದರಿಂದ ಕೊಳಗೇರಿ ಸಮಿತಿಯು ಕೊಳಗೇರಿಗಳಲ್ಲಿ ಉಚಿತ ತರಗತಿಗಳನ್ನು ಆರಂಭಿಸಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತ್ಯರ ವಿಷಯಗಳನ್ನು ತಿಳಿಸಿ ಅವರಲ್ಲಿ ಸ್ಪರ್ಧಾತ್ಮಕ ಮನೋಭವ ಬೆಳಸುವುದರ ಜೊತೆಗೆ ಪರೀಕ್ಷೆಯ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಸಮಾನ ಮಕ್ಕಳ ಮಂಟಪದಲ್ಲಿ ಮಕ್ಕಳಿಗೆ ಮಕ್ಕಳ ಹಕ್ಕುಗಳ ಜೊತೆಗೆ ಮಕ್ಕಳ ಸಮಗ್ರ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು. ಅಲೆಮಾರಿ ಸಮುದಾಯದ ರಾಮಕ್ಕ ಮಾತನಾಡಿ, ಮಕ್ಕಳು ಶಿಕ್ಷಣವಂತರಾಗಿ ಬೆಳವಣಿಗೆ ಹೊಂದಬೇಕು ಎಂದು ತಿಳಿಸಿದರು.
ಸಮಾನ ಮಕ್ಕಳ ಮಂಟಪದ ಪ್ರತಿನಿಧಿಗಳಾದ ಅಮೂಲ್ಯ, ಕವನ, ನಯನ, ದಾದಾಪೀರ್, ಗೀತಾ ಮತ್ತಿತರರು ಮಾತನಾಡಿದರು.
ಕೊಳಗೇರಿ ಸಮಿತಿಯ ಶೆಟ್ಟಾಳಯ್ಯ, ರಾಜೇಂದ್ರ, ರಘು, ಲತಾ, ಕೋಮಲ. ಶೃತಿ, ಗಾಯಿತ್ರಿ, ಸುಜಾತ ಹಾಗೂ ಎನ್.ಆರ್. ಕಾಲೋನಿ, ಬೆಳಗುಂಭ ರಸ್ತೆ, ಭಾರತಿ ನಗರ, ಗಂಗಸಂದ್ರ, ಲೇಬರ್ ಕಾಲೋನಿ ಮತ್ತು ಡಿ.ಎಮ್. ಪಾಳ್ಯದ ಮಕ್ಕಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.