ಹೊಸ ಬಡಾವಣೆಗಳಲ್ಲಿ ಮೂಲ ಸೌಕರ್ಯ ಕೊರತೆ
ಕುಣಿಗಲ್ ಪಟ್ಟಣವು ದಿನದಿಂದ ದಿನಕ್ಕೆ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಹೊಸ ಹೊಸಬಡಾವಣೆಗಳು ದಿನಬೆಳಗಾದರೆ ತಲೆಎತ್ತುತ್ತಿವೆ. ಪುರಸಭೆಯ ಎಲ್ಲಾ ದಿಕ್ಕಿನಲ್ಲಿ ಗ್ರಾಮಾಂತರ ಪ್ರದೇಶ, ಕೃಷಿ ಸಾಗುವಳಿ ಭೂಮಿ ಹೊಂದುಕೊಂಡಿದ್ದು, ನಿಯಮಾನುಸಾರ ಪರಿವರ್ತನೆಗೊಳ್ಳದೆ ಮನಬಂದಂತೆ ಲೇಔಟ್ಗಳು ಅಕ್ರಮವಾಗಿ ರಚನೆಯಾಗುತ್ತಿರುವ ಕಾರಣ, ಹೊಸಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯ ಇಲ್ಲದೆ ನಾಗರಿಕರು ಪರದಾಡುವಂತಾಗಿದೆ.
ಪಟ್ಟಣದ 18ನೇ ವಾರ್ಡ್ಮ ಹೌಸಿಂಗ್ ಬೋರ್ಡ್ ಪ್ರದೇಶ,19,20,21,22,23ನೇ ವಾರ್ಡ್ನ ಆಗ್ರಹಾರ ಪ್ರದೇಶ, ಅಂಬೇಡ್ಕರ್ ಕಾಲೋನಿ, ಚೌಡೇಶ್ವರಿ ನಗರ, ಮಲ್ಲಿಪಾಳ್ಯ, 12ನೇ ವಾರ್ಡ್ ಸುತ್ತಮುತ್ತಲ ಪುರಸಭೆ ಪ್ರದೇಶಕ್ಕೆ ಹೊಂದುಕೊಂಡಂತೆ ಸಾಕಷ್ಟು ಕೃಷಿ ಪ್ರದೇಶಗಳಿದ್ದು, ಈ ಪೈಕಿ ಕೆಲ ಪ್ರದೇಶವನ್ನು ನಿಯಮಾನುಸಾರವಾಗಿ ಪರಿವರ್ತನೆ ಮಾಡಿ, ಪುರಸಭೆಯಲ್ಲಿ ಖಾತೆ ಪ್ರಾರಂಭಿಸುತ್ತಿದ್ದಾರೆ. ಇಂತಹ ಪರಿವರ್ತನೆ ಹೊಂದಿದ ಭೂಮಿಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟ ಪಾರ್ಕ್, ಇತರೆ ಜಾಗಗಳನ್ನು ಕೆಲ ಪ್ರಭಾವಿಗಳು ಖಾತೆ ಮಾಡಿಸಿಕೊಂಡರೆ, ಮತ್ತೆ ಕೆಲ ಪ್ರದೇಶಗಳಲ್ಲಿ ಪರವರ್ತಿತ ನಕ್ಷೆಗೆ ಅನುಗುಣವಾಗಿ ಖಾತೆ ಮಾಡದೆ, ಮನಬಂದಂತೆ ನಿರ್ವಹಿಸಿರುವ ಕಾರಣ, ಆಸ್ತಿ ಖರೀದಿಸಿದವರು ಪರದಾಡುವಂತಾಗಿದೆ. ಇನ್ನು ಹೌಸಿಂಗ್ ಬೋರ್ಡ್ ಸುತ್ತಮುತ್ತಲೂ ಅಲ್ಪಸ್ವಲ್ಪ ಜಾಗ ಇರುವವರು, ಭೂ ಪರಿವರ್ತನೆ ಮಾಡದೆ, ಕಂದಾಯ ಭೂಮಿಯಲ್ಲಿ ಪುರಸಭೆಗೆ ಅಭಿವೃದ್ಧಿ ಶುಲ್ಕ ಪಾವತಿಸದೆ, ಸವಲತ್ತು ಪಡೆಯುತ್ತಿದ್ದು ಪುರಸಭೆಗೆ ಬರಬೇಕಾದ ರಾಜಸ್ವಕ್ಕೆ ಕನ್ನ ಹಾಕಿದ್ದರೆ, ಮತ್ತೆ ಕೆಲವರು ಪುರಸಭೆಗೆ ಸೇರಿದ ಸ್ವತ್ತಿನಲ್ಲೆ ಕಟ್ಟಡ ನಿರ್ಮಿಸಿಕೊಂಡಿದ್ದು, ಪುರಸಭೆಯಲ್ಲಿ ಸಮರ್ಪಕವಾಗಿ ರೆಕಾರ್ಡ್ ರೂಂ ನಿರ್ವಹಣೆಯಾಗದೆ, ಪುರಸಭೆಗೆ ದಕ್ಕಬೇಕಾದ ಸ್ವತ್ತು ಖಾಸಗಿಯವರ ಪಾಲಾಗಿದೆ.
ಇನ್ನು ಹೊಸಹೊಸ ಬಡಾವಣೆಗಳಲ್ಲಿ ಸಮರ್ಪಕ ರಸ್ತೆಗೆ ವಿಂಗಡನೆಯಾಗದ ಪುರಸಭೆ ಕಟ್ಟಡ ನಿರ್ಮಾಣ ಮಾಡಲು ಪರವಾನಗಿ ಕೊಟ್ಟ ಕಾರಣ, ರಸ್ತೆಯಲ್ಲೆ ಕಟ್ಟಡ ನಿರ್ಮಿಸಿ, ನಾಗರಿಕರು ಪರದಾಡುವಂತಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕಾದ ಪುರಸಭೆ ಕಂಡೂ ಕಾಣದಂತೆ ಸುಮ್ಮನಾದ ಕಾರಣ ಇಂದು ಹಲವು ಪ್ರದೇಶದಲ್ಲಿ ನಾಗರಿಕರಿಗೆ ಸೂಕ್ತ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ.
14ನೇ ವಾರ್ಡ್ನಲ್ಲಿ ಪುರಸಭೆಗೆ ಸೇರಿದ ರಾಮಮಂದಿರ ನಿವೇಶನವನ್ನು, ಸಮರ್ಪಕವಾಗಿ ನಿರ್ವಹಿಸದೆ ಖಾಸಗಿ ವ್ಯಕ್ತಿಗೆ ಖಾತೆ ಮಾಡಿದ್ದು, ಕಂದಾಯ ವಿಭಾಗದ ಸಿಬ್ಬಂದಿಯ ಕಾರ್ಯವೈಖರಿ ಪ್ರಶ್ನಿಸುವಂತಾಗಿದ್ದು, ಪುರಸಭೆಯ ವ್ಯಾಪ್ತಿಯ ಸಾರ್ವಜನಿಕ ಆಸ್ತಿಯ ಸಮರ್ಪಕ ದಾಖಲೆ ನಿರ್ವಹಿಸಲು ನಾಗರೀಕರು ಆಗ್ರಹಿಸಿದ್ದಾರೆ.
ತ್ಯಾಜ್ಯ ವಿಲೇವಾರಿಯಾಗಲಿ...
ಕುಣಿಗಲ್ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಅದರಲ್ಲೂ ಪ್ರಮುಖವಾಗಿ ಹಿಂದುಳಿದ ಪ್ರದೇಶಗಳೆಂದು ಗುರುತಿಸಲಾಗಿರುವ ಕೋಟೆ, ಗುಜ್ಜಾ ಮೊಹಲ್ಲ, ಮದ್ದೂರು ರಸ್ತೆ, ತುಮಕೂರು ರಸ್ತೆಯ ಪಿಎಲ್ಡಿ ಬ್ಯಾಂಕ್ ಪಕ್ಕ ಸೇರಿದಂತೆ ಇತರೆ ಪ್ರದೇಶದಲ್ಲಿ ಕಾಲಕಾಲಕ್ಕೆ ಸರಿಯಾಗಿ ತ್ಯಾಜ್ಯವಿಲೆವಾರಿಯಾಗಿದೆ ನಾಗರಿಕರು ಬಳಲುವಂತಾಗಿದೆ.
ಪಟ್ಟಣದಲ್ಲಿ ದಿನವೊಂದಕ್ಕೆ 12 ರಿಂದ 15 ಟನ್ವರೆಗೂ ತ್ಯಾಜ್ಯ ಸಂಗ್ರಹಣೆಯಾಗುತ್ತಿದ್ದು, ವಾರ್ಷಿಕವಾಗಿ
ಘನತ್ಯಾಜ್ಯ ವಿಲೆಗೆ ಲಕ್ಷಾಂತರ ರು.ವ್ಯಯಿಸಲಾಗುತ್ತಿದೆ. ಕಾಯಂ ಪೌರಕಾರ್ಮಿಕರ ಜೊತೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಬಳಸಿಕೊಂಡರೂ ಪಟ್ಟಣ ಪ್ರಮುಖ ಹಿಂದುಳಿದ ಪ್ರದೇಶಗಳಲ್ಲಿ ಕಾಲಕಾಲಕ್ಕೆ ತ್ಯಾಜ್ಯ ವಿಲೆವಾರಿಯಾಗುತ್ತಿಲ್ಲ, ಕೋಟೆ ಮತ್ತು ಗುಜ್ಜಾರಿ ಮೊಹಲ್ಲ ಪ್ರದೇಶದಲ್ಲಿನ ಬಹುತೇಕ ಮಂದಿ ತಮ್ಮ ದೈನಂದಿನ ದುಡಿಮೆಗೆ ಬೀಡಿ ಕಟ್ಟುವ ಕಾಯಕ ಮಾಡುವುದರಿಂದ ದಿನಂಪ್ರತಿ ಈ ಪ್ರದೇಶದಲ್ಲಿ ಕಸಎತ್ತುವಳಿ
ಮಾಡಬೇಕಿದ್ದು, ಸಂಬಂಧಪಟ್ಟ ವಿಭಾಗದವರ ನಿರ್ಲಕ್ಷ್ಯದಿಂದ ಕಾಲಕಾಲಕ್ಕೆ ಕಸವಿಲೆಯಾಗಿಲ್ಲ.
ಈ ಪ್ರದೇಶದ ಬಹುತೇಕ ಕಡೆಗಳಲ್ಲಿ ಕಸವನ್ನು ಚರಂಡಿ ಪಕ್ಕದಲ್ಲೆ ಗುಡ್ಡೆ ಹಾಕುವುದರಿಂದ, ಪುರಸಭೆಯು ನಿಗದಿತ ಅವಧಿಯೊಳಗೆ ಕಸವಿಲೆವಾರಿ ಮಾಡದ ಕಾರಣ, ಕಸವು ತುಂಬಿ ಪಕ್ಕದ ಚರಂಡಿಯೊಳಗೆ ಬಿದ್ದು, ಚರಂಡಿ ನೀರು ಕಟ್ಟಿಕೊಂಡು ನಾಗರೀಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕೊಳಚೆ ನೀರು ಸರಾಗವಾಗಿ ಹರಿಯದೆ ಕಟ್ಟಿಕೊಂಡು ಹಲವು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ.
ಸ್ವಚ್ಚತೆ ಕಾಪಾಡಿ, ಗಿಡ ನೆಡಿ...
ಕುಣಿಗಲ್ ಪಟ್ಟಣದಲ್ಲಿನ ಉತ್ತಮ ಪರಿಸರ ಸಂರಕ್ಷಣೆಗೆ ಪೂರಕವಾಗಿ ಸಾರ್ವಜನಿಕ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ, ಹಸಿರು ಪರಿಸರ ಸಂರಕ್ಷಣೆ ಮಾಡಬೇಕಾದ್ದು ಪುರಸಭೆಯ ಆದ್ಯಕರ್ತವ್ಯವಾಗಿದೆ.
1992ರಿಂದ 2000ರವರೆಗೆ ಸಾಲುಮರದ ಸರದಾರನೆಂದೆ ಖ್ಯಾತರಾಗಿದ್ದ, ಮಾಜಿ ಸಚಿವ ವೈಕೆರಾಮಯ್ಯನವರು ಪಟ್ಟಣದ ವಿವಿದೆಡೆ ಸಂಚರಿಸಿ, ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದ ಹಿನ್ನೆಲೆಯಲ್ಲಿ ಈಗೆಲ್ಲಾ ಅವು ಬೆಳೆದು ಹೆಮ್ಮರವಾಗಿದೆ, ದುರಂತ ಎಂದರೆ ಪುರಸಭೆಯ ವ್ಯಾಪ್ತಿಯಲ್ಲಿ ಪುರಸಭೆಗೆ ಸೇರಿದ ಮರಗಳ ಬಗ್ಗೆ ಪುರಸಭೆಯಲ್ಲಿ ಯಾವುದೇ ಲೆಕ್ಕವಿಲ್ಲ, ಈ ಬಗ್ಗೆ ಮಾನವಹಕ್ಕು ಕಾರ್ಯಕರ್ತ ಆನಂದಸಿಂಗ್, ಮಾಹಿತಿಹಕ್ಕಿನಡಿಯಲ್ಲಿ ವಿವರ ಕೇಳಿದಾಗ, ಎರಡು ಉದ್ಯಾನವನಗಳಿಂದ ಒಟ್ಟು ನಾಲ್ಕುನೂರು ಮರಗಳಿದ್ದು, ಪುರಸಭೆ ವ್ಯಾಪ್ತಿಯಲ್ಲಿ ಮರಗಳ ಬಗ್ಗೆ ದಾಖಲೆಗಳಿಲ್ಲ ಎಂಬ ಹಿಂಬರಹ ನೀಡಿದ್ದಾರೆ. ಪುರಸಭೆ ಪರಿಸರ ವಿಭಾಗದವರಿಗೆ ಕೇಳಿದರೆ, ಮರಸಂರಕ್ಷಣೆ ನಮ್ಮ ವಿಭಾಗಕ್ಕೆ ಬರೋಲ್ಲ ಅದು, ಸಿವಿಲ್ ಕಾಮಗಾರಿ ವಿಭಾಗ ಬೇಜವಾಬ್ದಾರಿ ಉತ್ತರ ನೀಡುತ್ತಾರೆ.ಪುರಸಭೆ ನಿಯಮಾನುಸಾರ ಮರಸಂರಕ್ಷಣೆ ಪ್ರಾಧಿಕಾರವನ್ನು 2001ರಲ್ಲೆ ಪುರಸಭೆಯಲ್ಲಿ ರಚಿಸಬೇಕಾಗಿದ್ದು, ರಚಿಸದ ಕಾರಣ ಇಂದು, ಪುರಸಭೆ ವ್ಯಾಪ್ತಿಯಲ್ಲಿ ನೆಟ್ಟುಪೋಶಿಸಿದ ಹಲವು ಮರಗಳು, ಮರಗಳ್ಳರ ಪಾಲಾಗುತ್ತಿದೆ. ಜೊತೆಯಲ್ಲಿ ಸಣ್ಣಪುಟ್ಟ ಕಾಮಗಾರಿಗೂ ಮರಗಳನ್ನು ಕಡಿದು ಸಾಗಿಸುವ ಪರಿಪಾಠ ಹೆಚ್ಚಾಗಿದೆ,ಪುರಸಭೆಗೆ ಸೇರಿದ ಮರಗಳನ್ನು ಕಡಿದು ಸಾಗಿಸುತ್ತಿದ್ದರೂ ಸಂಬಂಧಪಟ್ಟ ಪರಿಸರ ವಿಭಾಗದವರು ಕಂಡೂ ಕಾಣದಂತೆ ಇರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ,
ಇನ್ನು ಪುರಸಬೆ ವ್ಯಾಪ್ತಿಯಲ್ಲಿ ಅಧಿಕೃತ ಲೆಕ್ಕಕ್ಕೆ ಮೂರು ಉದ್ಯಾನವನಗಳೆಂದು ದಾಖಲಾಗಿದೆ , ವಾಸ್ತವಾಂಶದಲ್ಲಿ ಹೊಸಬಡಾವಣೆಗಳ ಪಾರ್ಕ್ಗಳು ಸೇರಿದಂತೆ ಹತ್ತರಿಂದ ಹದಿನೈದು ಪಾರ್ಕ್ ಗಳಿದ್ದು, ಇರುವ ಮೂರು ಪಾರ್ಕ್ಗಳಿಗೆ ವಾರ್ಷಿಕ ಲಕ್ಷಾಂತರ ರೂ. ವ್ಯಯಮಾಡಲಾಗುತ್ತಿದ್ದರೂ, ನಾಗರಿಕರ ಸೇವೆಗೆ ಮುಕ್ತವಾಗದೆ, ರಾತ್ರಿವೇಳೆ ಅಕ್ರಮ ಚಟುವಟಿಕೆಯ ತಾಣವಾಗಿ, ಕೇವಲ ಟೆಂಡರ್ ಹಣ ಪೋಲಾಗುವ ಸಾಧನೆ ಯಾಗಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.