ಗುರಿ ಇಲ್ಲದ ಬಾಳು ಬಿರುಗಾಳಿಗೆ ಸಿಕ್ಕಿದ ಹಡಗಿನಂತೆ
ಕ,ಪ್ರ,ವಾರ್ತೆ, ಮಧುಗಿರಿ, ಡಿ.23
ಜೀವನದಲ್ಲಿ ಮಹತ್ತರ ಗುರಿ ಇಲ್ಲದ ಬಾಳು ಬಿರುಗಾಳಿಗೆ ಸಿಕ್ಕಿದ ಹಡಗಿನಂತೆ ಎಂದು ಕಿರುತೆರೆ ನಿರ್ದೇಶಕ ರವಿ . ಆರ್ ಗರಣಿ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಭವನದಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯ ತನ್ನ ಜೀವನದಲ್ಲಿ ಗುರಿ ಇಲ್ಲದಿದ್ದರೆ ಮತ್ತೊಬ್ಬರ ಕೈಕೆಳಗೆ ಅಡಿಯಾಳಾಗಿ ದುಡಿಯಬೇಕಾಗುತ್ತದೆ.
ಆದ ಕಾರಣ ಗುರಿ ಇಲ್ಲದ ಬದುಕು ಬಿರುಗಾಳಿಗೆ ಸಿಕ್ಕಿದ ಹಡಗಿಗೆ ಸಮಾನ, ಯಾವುದೇ ಯಶಸ್ಸಿಗೆ ಆತ್ಮವಿಶ್ವಾಸ ಮತ್ತು ಸಂವಹನ ಸಾಮರ್ಥ್ಯ ಅತಿ ಮುಖ್ಯ ಎಂದ ರವಿ ಆರ್. ಗರಣಿ ಮಧುಗಿರಿಯಲ್ಲಿ ಕಸಾಪ ನಿರ್ಮಿಸುತ್ತಿರುವ ಸುಸಜ್ಜಿತ ಕನ್ನಡ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡು ನಾಡಿನ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಹತ್ತು ಹಲವು ರಚನಾತ್ಮಕ ಕಾರ್ಯಗಳು ನಡೆಯುವ ಕೇಂದ್ರವಾಗಲಿ ಎಂದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನಮ್ಮ ಭವ್ಯ ಪರಂಪರೆ, ಸಂಸ್ಕೃತಿ ಇತಿಹಾಸವನ್ನು ಅರಿತು ಕನ್ನಡದ ಮನಸ್ಸುಗಳು ತುರ್ತಾಗಿ ಜಾಗೃತಗೊಳ್ಳಬೇಕು ಎಂದರು. ತಾ.ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಪ.ವಿ. ಸುಬ್ರಹ್ಮಣ್ಯ, ಎಂ.ಜಿ. ಶ್ರೀನಿವಾಸಮೂರ್ತಿ ಮಾತನಾಡಿದರು. ಕಾರ್ಯದರ್ಶಿ ದ್ರೇಹಚಾರ್, ಖಜಾಂಚಿ ರಂಗರಾಜು, ಐ.ಡಿ.ಹಳ್ಳಿ ರಂಗನಾಥಪ್ಪ, ಸಿರಿಗೆಜ್ಜೆ ಕಲಾವಿದ ರಾಮಕೃಷ್ಣಪ್ಪ, ಟಿ.ಲಕ್ಷ್ಮೀನರಸಯ್ಯ, ಪತ್ರಕರ್ತ ಬಂಡಿ ಚೌಡಯ್ಯ, ರಿಜ್ವಾನ್ ಪಾಷ, ಮಂಜು ಉಪಸ್ಥಿತರಿದ್ದರು. ದ್ರೇಹಚಾರ್ ಸ್ವಾಗತಿಸಿ ರಂಗರಾಜು ವಂದಿಸಿದರು.