ಜಯಚಂದ್ರ ನೀರಗಂಟಿ ಕೆಲಸ ಮಾಡಲಿ
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.23
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೀರುಗಂಟಿ ಕೆಲಸ ಮಾಡುವಂತೆ, ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದೆ. ಆದರೆ ಮಳೆ ನೀರು ಸಮುದ್ರಕ್ಕೆ ಹೋಗಿದೆ. ಕೊರೆಯುವ ಚಳಿಗಾಲ ಮುಗಿಯುವ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದ ಸೊಗಡು, ಜಿಲ್ಲೆಯ 10 ತಾಲೂಕುಗಳ ಕೆರೆಗಳು ಭರ್ತಿಯಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯ 3 ತಾಲೂಕುಗಳಾದ ತಿಪಟೂರು, ಗುಬ್ಬಿ, ತುರುವೇಕೆರೆ ತಾಲೂಕುಗಳ ಕೆರೆಗಳು ಭರ್ತಿಯಾಗಿವೆ. ಇವುಗಳನ್ನು ಬಿಟ್ಟರೆ, ಚಿಕ್ಕನಾಯಕನಹಳ್ಳಿ ಕೆರೆ ಶೇ. 50 ರಷ್ಟು, ಶಿರಾ ಕೆರೆ ಶೇ. 35 ರಷ್ಟು, ಮಧುಗಿರಿ ಶೇ. 50 ರಷ್ಟು, ಕೊರಟಗೆರೆ ಶೇ. 35 ರಷ್ಟು, ಕುಣಿಗಲ್ ಶೇ. 35 ರಷ್ಟು ಮಾತ್ರ ತುಂಬಿವೆ. ಪಾವಗಡದ ನಾಗಲಮಡಿಕೆ ಬಂಡ್ ತುಂಬಿದೆ. ಪ್ಲೋರೈಡ್ ಸಮಸ್ಯೆ ಹಾಗೂ ಇತರೆ ಕಾರಣಗಳಿಂದ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ತುಮಕೂರು ಬುಗುಡನಹಳ್ಳಿ, ಹೆಬ್ಬಾಕ ಕೆರೆಗಳು ಸರಿಯಾಗಿ ತುಂಬಿಲ್ಲ ಎಂದು ವಿಷಾದಿಸಿದರು.
ನಮ್ಮ ಬಿಜೆಪಿ ಸರ್ಕಾರ ಇದ್ದಾಗ, ನಾನು ಮಂತ್ರಿಯಾಗಿದ್ದಾಗ ನೀರುಗಂಟಿ ರೀತಿ ಕೆಲಸ ಮಾಡಿ, ಕುಡಿಯುವ ನೀರನ್ನು ಹೇಮಾವತಿ ಡ್ಯಾಂನಿಂದ ತಂದಿದ್ದೆವು. ಕಳೆದ ಬಾರಿ ಇದೇ ಅವಧಿಯಲ್ಲಿ ಹೇಮಾವತಿ ಡ್ಯಾಂನಲ್ಲಿ 8 ಟಿಎಂಸಿ ನೀರಿತ್ತು. ಈಗ ಹೇಮಾವತಿಯಲ್ಲಿ 14 ಟಿಎಂಸಿ ನೀರಿದೆ. ಆದರೆ ತುಮಕೂರು ಜಿಲ್ಲೆಯ ಕೆರೆಗಳು ಮಾತ್ರ ಭರ್ತಿಯಾಗಿಲ್ಲ ಎಂದು ವಿಷಾದಿಸಿದರು.
ಮೊದಲು ಕುಡಿಯುವ ನೀರು ಒದಗಿಸುವ ಕೆಲಸ ಕೂಡಲೇ ಆಗಬೇಕು. ಜಿಲ್ಲಾಧಿಕಾರಿಗಳನ್ನು ಕರೆದು ಸೂಚನೆ ನೀಡಬೇಕು. ಜಿಲ್ಲೆಯ ಜನತೆಗೆ ದ್ರೋಹ ಮಾಡುವುದು ಬೇಡ. ಬದ್ದತೆಯಿಂದ ಕೆಲಸ ಮಾಡಬೇಕು ಎಂದು ಸೊಗಡು ಸಲಹೆ ನೀಡಿದರು.
ಪೊಲೀಸ್ ಇಲಾಖೆ ದುರುಪಯೋಗ: ಪೊಲೀಸ್ ಇಲಾಖೆ ದುರುಪಯೋಗವಾಗುತ್ತಿದೆ. ಶಿರಾದಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರನ್ನು ಗಡೀಪಾರು ಮಾಡುವ ಸಿದ್ಧತೆ ನಡೆದಿದೆ. ಆದರೆ ಇದಕ್ಕೆ ಅವಕಾಶ ಕೊಡಲ್ಲ. ಕಾನೂನು ಮಂತ್ರಿ ಜಯಚಂದ್ರ ಈ ಗಡಿಪಾರು ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಸಚಿವ ಜಯಚಂದ್ರ ರೈತರ ತಳಿಯೇ: ಸಚಿವ ಜಯಚಂದ್ರ ಸಹ ರೈತರ ತಳಿಯೇ. ಅವರ ಅಪ್ಪ- ಅಮ್ಮ ರೈತರೇ. ಅವರು ಇದನ್ನು ಮರೆಯಬಾರದು. ರೈಲ್ವೆ ಹಳಿಗಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ಆಯಾ ಭಾಗದ ಜಮೀನಿನ ಬೆಲೆ ಏನಿದೆಯೋ ಅದನ್ನು ರೈತರಿಗೆ ಮುಲಾಜಿಲ್ಲದೆ ನೀಡಬೇಕು.
ಇಡೀ ರಾಜ್ಯಕ್ಕೆ ಒಂದೇ ಬೆಲೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ರೈತ ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನದ ಭಾಗವಾಗಿರುವ ಭೂಮಿಯನ್ನು ನೀಡುತ್ತಿರುವಾಗ ಅವರಿಗೆ ಸೂಕ್ತ ಬೆಲೆ ನೀಡದಿರುವುದು ಸರಿಯಲ್ಲ ಎಂದು ಉತ್ತರಿಸಿದರು.
ಮರಳು ಲೂಟಿ ತಡೆಯದಿದ್ದರೆ ಉಳಿಗಾಲವಿಲ್ಲ. ಮರಳು ನೀತಿ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಸೊಗಡು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರೈತಮೋರ್ಚಾದ ಶಿವಪ್ರಸಾದ್, ನಗರಾಧ್ಯಕ್ಷ ಕೆ.ಪಿ. ಮಹೇಶ್, ಜಿಲ್ಲಾ ಕಾರ್ಯದರ್ಶಿ ಸ್ನೇಕ್ ನಂದೀಶ್, ಯುವ ಮೋರ್ಚಾದ ಸನತ್ ಜಯಸಿಂಹಸ, ಮಹಿಳಾ ಮೋರ್ಚಾ ಸದಸ್ಯೆಯರು ಇದ್ದರು.
ಸಿಎಂ, ಸಚಿವರಿಗೆ ಪಾವಗಡ ನೀರು ಉಚಿತ
ತುಮಕೂರು: ಪಾವಗಡ ತಾಲೂಕಿನ 181 ಹಳ್ಳಿಗಳು ಪ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿದ್ದು, ಜನತೆ ವಿವಿಧ ರೋಗಗಳಿಂದ ನರಳುತ್ತಿದ್ದಾರೆ ಎಂದು ಬಿಜೆಪಿ ರೈತಮೋರ್ಚಾದ ಶಿವಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.ಅವರು ಸೊಗಡು ಶಿವಣ್ಣ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ವೇಳೆ ಪಾವಗಡ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಹಿನ್ನೆಲೆಯಲ್ಲಿ 345 ಕೋಟಿ ರು. ಅಂದಾಜು ವೆಚ್ಚದಲ್ಲಿ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ವರದಿ 2013 ಅಕ್ಟೋಬರ್ನಲ್ಲಿ ಸರ್ಕಾರಕ್ಕೆ ಹೋಗಿದೆ. ಸರ್ಕಾರ ಕೂಡಲೇ ಯೋಜನೆ ಜಾರಿಗೆ ಅನುಮತಿ ನೀಡಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಇಲ್ಲದೇ ಹೋದಲ್ಲಿ ಹೋರಾಟ ಅನಿವಾರ್ಯವಾಗಲಿದ್ದು, ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರಿಗೆ ಪಾವಗಡ ಫ್ಲೋರೈಡ್ ನೀರನ್ನು 3 ತಿಂಗಳ ಕಾಲ ಬೆಂಗಳೂರಿಗೆ ಉಚಿತವಾಗಿ ರವಾನಿಸುವುದಾಗಿಯೂ, ಈ ನೀರಿನ ರುಚಿಯನ್ನು ಸಚಿವರು, ಸಿಎಂ ಸವಿಯಲಿ ಎಂದು ಸಲಹೆಯನ್ನು ನೀಡಿದ್ದಾರೆ. ಜತೆಗೆ ಕಾಲುಬಾಯಿ ರೋಗಕ್ಕೆ ಬಲಿಯಾಗುವ ಜಾನುವಾರುಗಳಿಗೆ ಪರಿಹಾರ ನೀಡಲು ದಿನಾಂಕ ನಿಗದಿ ಮಾಡಿರುವುದು ಹಾಸ್ಯಾಸ್ಪದ ಎಂದು ಶಿವಪ್ರಸಾದ್ ಲೇವಡಿ ಮಾಡಿದ್ದಾರೆ.