ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾಲಿಕೆ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು

Vishwanath S
Updated On : 24 Dec 2013, 12:44 pm

ತುಮಕೂರು: ತುಮಕೂರು ನಗರಸಭೆಯನ್ನು ಮಹಾನಗರಪಾಲಿಕೆ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತುಮಕೂರು ನಗರ ಕಾಂಗ್ರೆಸ್ ಶಾಸಕ ಡಾ. ರಫೀಕ್ ಅಹಮದ್ ಸ್ಪಷ್ಟಪಡಿಸಿದರು.
ಅವರು ತುಮಕೂರು ಮಹಾನಗರಪಾಲಿಕೆಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಕಾಂಗ್ರೆಸ್, ಜೆಡಿಎಸ್, ಕೆಜೆಪಿ ನಗರಸಭಾಸದಸ್ಯರು ಹಾಗೂ ಬಿಜೆಪಿ ಎಂಪಿ ಜಿ.ಎಸ್. ಬಸವರಾಜು, ಜೆಡಿಎಸ್ ಎಂಎಲ್‌ಸಿ ಡಾ.ಎಂ.ಆರ್. ಹುಲಿನಾಯ್ಕರ್ ಅವರೊಂದಿಗೆ ಕರೆಯಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಹಿಂದೆ ಬಿಜೆಪಿ ಸರ್ಕಾರ ಮಹಾನಗರ ಪಾಲಿಕೆಯನ್ನಾಗಿ ಘೋಷಣೆ ಮಾಡಿದರೂ ಜನಸಂಖ್ಯೆ, ತಾಂತ್ರಿಕ ಕಾರಣಗಳಿಂದಾಗಿ ಊರ್ಜಿತವಾಗಲಿಲ್ಲ. ಪಾಲಿಕೆಯಾಗಿ ಮತ್ತೆ ನಗರಸಭೆಯಾಗಿ ಹಿನ್ನೆಡೆಯಾಯಿತು. ಹೀಗಾಗಿ ಅಧಿಕೃತವಾಗಿ ಮಹಾನಗರಪಾಲಿಕೆಯಾಗಿ ಮಾಡಿದ ಶ್ರೇಯಸ್ಸು ನಿಸ್ಸಂಶಯವಾಗಿ ಕಾಂಗ್ರೆಸ್ ಪಕ್ಷಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು ಎಂದು ರಫೀಕ್ ಪ್ರತಿಪಾದಿಸಿದರು.
ತಾವು ತುಮಕೂರು ನಗರ ಎಂಎಲ್‌ಎ ಆದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತುಮಕೂರು ನಗರಸಭೆಯನ್ನು ಪಾಲಿಕೆಯಾಗಿ ಘೋಷಿಸಲು ಮನವಿ ಕೊಟ್ಟದ್ದು, ಸಿಎಂ ಸಿದ್ದು ಸಹ ತಮ್ಮ ಅರ್ಜಿಗೆ ಪುರಸ್ಕರಿಸಿ, ಕೂಡಲೇ ಜುಲೈನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ತುಮಕೂರು ಸೇರಿದಂತೆ ಶಿವಮೊಗ್ಗ, ಬಿಜಾಪುರ ನಗರಸಭೆಗಳನ್ನು ಪಾಲಿಕೆಯಾಗಿ ಘೋಷಿಸಿದರು. ಈ ತಿಂಗಳ 20 ರಂದು ಗೆಜೆಟ್‌ನಲ್ಲಿ ಪ್ರಕಟಣೆ ಕೂಡ ಮಾಡಲಾಗಿದೆ ಎಂದು ರಫೀಕ್ ಮಾಹಿತಿ ನೀಡಿದರು.
ರು. 100 ಕೋಟಿ ಅನುದಾನ: ತುಮಕೂರು ಮಹಾನಗರಪಾಲಿಕೆಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ 100 ಕೋಟಿ ರು ಅನುದಾನ ಬಿಡುಗಡೆಯಾಗಲಿದೆ. ಈ ಹಣವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲು ಅವಕಾಶವಾಗಲಿದೆ. ನಗರಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಹಕಾರಿಯಾಗಲಿದೆ ಎಂದು ರಫೀಕ್ ತಿಳಿಸಿದರು.
ಚುನಾವಣೆ ತಡೆಯಲು ತಿದ್ದುಪಡಿ: ನಗರಸಭೆ ಪಾಲಿಕೆಯಾಗಿ ಘೋಷಣೆಯಾದ ನಂತರ 6 ತಿಂಗಳೊಳಗೆ ಮತ್ತೆ ಚುನಾವಣೆ ನಡೆಯಬೇಕು ಎಂಬುದು ನಿಯಮ. ಆದರೆ ಸದ್ಯದ ಸ್ಥಿತಿಯಲ್ಲಿ ಚುನಾವಣೆ ಬೇಡ ಎಂಬುದು
ಸದಸ್ಯರು, ಸರ್ಕಾರದ ಅನಿಸಿಕೆಯಾಗಿದೆ. ಕಾನೂನಿಗೆ ತಿದ್ದುಪಡಿ ತಂದು ಇರುವ ಸದಸ್ಯರನ್ನೇ ಮುಂದುವರೆಸುವ ಕುರಿತಂತೆ ಚರ್ಚೆ ನಡೆದಿದೆ. ಕಾರಣ ಸರ್ಕಾರಕ್ಕೆ ವಿನಾಕಾರಣ ಹಣಕಾಸಿನ ಹೊರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಚಿಂತನೆ ನಡೆದಿದೆ ಎಂದು ವಿವರಿಸಿದರು.
ಮೊಯ್ಲಿ ಕಾಲದಲ್ಲೇ ಆಗಬೇಕಿತ್ತು: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಮಾತನಾಡಿ, ತಾವು ಈ ಹಿಂದೆ ಶಾಸಕರಾಗಿದ್ದಾಗ ಅಂದರೆ 20 ವರ್ಷಗಳ ಹಿಂದೆ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲೇ ಫೈಲ್ ರೆಡಿಯಾಗಿತ್ತು. ಆದರೆ ಕಾರಣಾಂತರಗಳಿಂದ ಆಗಲಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ಕೆಜೆಪಿ ಜತೆ ಗುರುತಿಸಿಕೊಂಡಿರುವ ಬಿಜೆಪಿ ಎಂಪಿ ಜಿ.ಎಸ್.ಬಸವರಾಜು, ಡಾ.ಎಂ.ಆರ್. ಹುಲಿನಾಯ್ಕರ್ ಇತರರಿದ್ದರು.
ಕುಂದುಕೊರತೆ ಆಧರಿಸಿ ಕ್ರಮ: ರಫೀಕ್
ತುಮಕೂರು: ಪತ್ರಿಕೆಗಳಲ್ಲಿ ಬರುವ ದೂರು, ಸುದ್ದಿ, ಕುಂದು-ಕೊರತೆ ಆಧರಿಸಿ ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನು ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ನೀಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೂರುಗಳನ್ನು ಪ್ರೋತ್ಸಾಹ ಎಂದೇ ಭಾವಿಸಿ, ಕೆಲಸ ಮಾಡುವುದಾಗಿ ತಿಳಿಸಿದ ಶಾಸಕರು, ದೂರು ದಾಖಲಿಸಲು ಇ ಮೇಲ್ ಕೂಡ ಬಳಸಬಹುದಾಗಿದೆ. ಒಟ್ಟಾರೆ ಸಮಸ್ಯೆ ಬಗೆಹರಿಸಲು ಶ್ರಮಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ.
ಸರ್ಕಾರಿ ಜಾಗ ಒತ್ತುವರಿಯನ್ನು ಸಹಿಸೋಲ್ಲ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಘನತ್ಯಾಜ್ಯ ವಿಲೇವಾರಿ ಹಿನ್ನೆಲೆಯಲ್ಲಿ ವಾರ್ಡ್‌ವಾರು ಜಪಾನ್ ತಂತ್ರಜ್ಞಾನದ ಸ್ವಚ್ಛ  ಯಂತ್ರವನ್ನು ಅಳವಡಿಸಲಾಗುವುದು. ಈ ಯಂತ್ರಕ್ಕೆ 1 ಟನ್ ಕಸ ಹಾಕಿದರೆ 1 ಕೆ.ಜಿ. ಬೂದಿಯಾಗಲಿದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದರು.
ಹೊಸದಾಗಿ 40 ಸಿಟಿ ಬಸ್
ತುಮಕೂರು: ತುಮಕೂರಿಗೆ 40 ಹೊಸ ನಗರ ಸಾರಿಗೆ ಬಸ್ ಸೇರ್ಪಡೆಗೊಳ್ಳಲಿದೆ. ನಗರ ಸಾರಿಗೆಗಾಗಿಯೇ ಪ್ರತ್ಯೇಕ ಬಸ್ ನಿಲ್ದಾಣಕ್ಕೆ ಚಿಂತನೆ ನಡೆದಿದೆ. 2 ಎಕರೆ ಜಾಗದಲ್ಲಿ ಸಿಟಿ ಬಸ್ ನಿಲುಗಡೆಗೆ ಬಸ್ ನಿಲ್ದಾಣ ನಿರ್ಮಿಸುವ ಸುಳಿವನ್ನು ಶಾಸಕ ರಫೀಕ್ ಅಹಮದ್ ನೀಡಿದರು. ಆಶ್ರಯ ನಿವೇಶನ ಹಂಚಿಕೆಯ ಭರವಸೆ ನೀಡಿದರು. ಮುಂದಿನ ತಿಂಗಳು ಹಾಲಿ ಜೆ.ಸಿ. ರಸ್ತೆಯಲ್ಲಿರುವ ಸರ್ಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗುವುದು. ಆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement